ಉಪಚುನಾವಣೆ ಪ್ರಚಾರ ಅಬ್ಬರ: ದಾವಣಗೆರೆಯಲ್ಲಿ ಮಳೆಯಲ್ಲೇ ‘ಕೈ’ ನಾಯಕರ ಘರ್ಜನೆ; ಬಾಗಲಕೋಟೆಯಲ್ಲಿ ಚರಂತಿಮಠ ಪರ ಯತ್ನಾಳ್ ಮತಬೇಟೆ!

Karnataka By-Election 2026; ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಪ್ರಚಾರ ಕೊನೆಯ ಹಂತದಲ್ಲಿದೆ. ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪರ ಅಬ್ಬರಿಸಿದರೆ, ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ಕೇಸರಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮಳೆ, ಅಲ್ಪಸಂಖ್ಯಾತ ಮತಗಳ ಧ್ರುವೀಕರಣ, ಹಾಗೂ ಯತ್ನಾಳ್ ನಡೆ ಈ ಚುನಾವಣೆಗಳನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿಸಿವೆ.

ಉಪಚುನಾವಣೆ ಪ್ರಚಾರ ಅಬ್ಬರ: ದಾವಣಗೆರೆಯಲ್ಲಿ ಮಳೆಯಲ್ಲೇ ‘ಕೈ’ ನಾಯಕರ ಘರ್ಜನೆ; ಬಾಗಲಕೋಟೆಯಲ್ಲಿ ಚರಂತಿಮಠ ಪರ ಯತ್ನಾಳ್ ಮತಬೇಟೆ!
ದಾವಣಗೆರೆಯಲ್ಲಿ ಸಿಎಂ, ಡಿಸಿಎಂ ಪ್ರಚಾರ
Image Credit source: tv9

Updated on: Apr 03, 2026 | 6:54 AM

ದಾವಣಗೆರೆ/ಬಾಗಲಕೋಟೆ, ಏಪ್ರಿಲ್ 3: ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Karnataka By-Election 2026) ಪ್ರಚಾರ ಅಂತಿಮ ಘಟ್ಟಕ್ಕೆ ತಲುಪಿದ್ದು, ಅಡಳಿತಾರೂಢ ಕಾಂಗ್ರೆಸ್ (Congress) ಮತ್ತು ಪ್ರತಿಪಕ್ಷ ಬಿಜೆಪಿ (BJP) ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ದಾವಣಗೆರೆ ದಕ್ಷಿಣದ ಪ್ರಚಾರ ಕಣದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಬ್ಬರಿಸಿದರೆ, ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಕೇಸರಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆ ದಕ್ಷಿಣ: ಮಳೆಯಲ್ಲೂ ಧೃತಿಗೆಡದ ನಾಯಕರು

ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಗುರುವಾರ ಅಕ್ತರ್ ರಾಜಾ ಸರ್ಕಲ್‌ನಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದ ವೇಳೆ ಭಾರಿ ಮಳೆ ಸುರಿದರೂ ಲೆಕ್ಕಿಸದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಅವರು ಡಿಸಿಎಂಗೆ ಕೊಡೆ ಹಿಡಿದು ನಿಂತಿದ್ದು ಎಲ್ಲರ ಗಮನ ಸೆಳೆಯಿತು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಾಗಿದ್ದು ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಕರೆ ನೀಡಿದರು. ಅಸಮಾಧಾನಗೊಂಡಿದ್ದ ಮುಸ್ಲಿಂ ಮುಖಂಡರಾದ ದಾದುಸೇಟ್ ಸೇರಿದಂತೆ ಹಲವರ ಮನೆಗಳಿಗೆ ಸಿಎಂ ಖುದ್ದಾಗಿ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಕೂಡ ಸಮರ್ಥ್ ಪರವಾಗಿ ‘ನಿಮ್ಮ ಮನೆಯ ಮಗ’ ಎಂದು ಭಾವುಕವಾಗಿ ಮತಯಾಚಿಸಿದರು.

ಬಾಗಲಕೋಟೆ: ಯತ್ನಾಳ್‌ ನಡೆ ಕುತೂಹಲ

ಇನ್ನೊಂದೆಡೆ, ಬಾಗಲಕೋಟೆಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯಿಂದ ಉಚ್ಚಾಟಿತರಾಗಿದ್ದರೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಖಾಡಕ್ಕಿಳಿದಿದ್ದಾರೆ. ಹೈಕಮಾಂಡ್ ಮೇಲೆ ಮುನಿಸು ಹೊಂದಿದ್ದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಈಗಾಗಲೇ ಖಚಿತವಾಗಿದೆ, ಯತ್ನಾಳ್ ಪ್ರಚಾರದಿಂದ ಅಂತರ ಹೆಚ್ಚಾದರೆ ಸಂತೋಷ’ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​.ಡಿ. ಕುಮಾರಸ್ವಾಮಿ?

ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಯತ್ನಾಳ್ ನಡೆ ಬಿಜೆಪಿಯತ್ತ ಮತ್ತೆ ವಾಲಿದೆಯೇ ಅಥವಾ ಇದು ಕೇವಲ ಸ್ಥಳೀಯ ಹೊಂದಾಣಿಕೆಯೇ ಎನ್ನುವುದಕ್ಕೆ ಚುನಾವಣಾ ಫಲಿತಾಂಶವೇ ಉತ್ತರ ನೀಡಬೇಕಿದೆ.

ಮಾಹಿತಿ: ದಾವಣಗೆರೆಯಿಂದ ಬಸವರಾಜ್ ದೊಡ್ಮನಿ ಹಾಗೂ ಬಾಗಲಕೋಟೆಯಿಂದ ರವಿ ಹೆಚ್ ಮೂಕಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us