
ಬೆಂಗಳೂರು, (ಸೆಪ್ಟೆಂಬರ್ 03): ವಿವಾದಿತ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕಕ್ಕೆ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ನಿರ್ಧರಿಸಿದೆ. ಇಂದು (ಸೆಪ್ಟೆಂಬರ್ 03) ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ವಾಪಸ್ ಪಡೆಯಲು ತೀರ್ಮಾನವಾಗಿದೆ. ಈ ಮೂಲಕ ಜನರ ಆಕ್ಷೇಪ ಮತ್ತು ಪರಿಸರ ಸಂರಕ್ಷಣೆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ತನ್ನ ನಿಲುವನ್ನು ಬದಲಿಸಿದೆ. ಆದ್ರೆ, ಕೆಲ ತಿದ್ದುಪಡಿಗಳನ್ನು ಮಾಡಿ ಮತ್ತೆ ಮಂಡಿಸುವ ಬಗ್ಗೆಯೂ ಸರ್ಕಾರ ನಿರ್ಧರಿಸಿದೆ.
ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್ ಪಡೆದಿರುವ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್,’ಈಗ ವಿಧೇಯಕ ವಾಪಸ್ ಪಡೆದು ಮತ್ತೆ ಮಂಡನೆ ಮಾಡುತ್ತೇವೆ.
ಕೆಲವು ತಿದ್ದುಪಡಿಗಳನ್ನು ಮಾಡಿ ಮುಂದಿನ ಅಧಿವೇಶನದಲ್ಲಿ ಮತ್ತೆ ವಿಧೇಯಕ ಮಂಡಿಸುತ್ತೇವೆ. ಈಗ ವಿಧೇಯಕವನ್ನು ವಾಪಸ್ ಪಡೆದು ನಾವು ಚರ್ಚೆಗೆ ಬಿಡುತ್ತೇವೆ.ನಾವು ಕಳೆದ ಸದನದಲ್ಲಿ ಈ ವಿಧೇಯಕವನ್ನು ತಂದಿದ್ದೆವು. ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ 1975 ತಿದ್ದುಪಡಿ ಈ ಸದನದಲ್ಲಿ ತರಲಾಗಿತ್ತು. ಅದರಲ್ಲಿ 5% ಜಮೀನನ್ನ ತಗೊಳ್ಳೋದಕ್ಕೆ ಸಾರ್ವಜನಿಕ ಉಪಯೋಗಕ್ಕೆ ತಗೊಳ್ಳೋದಕ್ಕೆ ಅಂತ ಹೇಳಿ ನಾವು ಒಂದು ಆಕ್ಟ್ ಅನ್ನು ತಂದಿದ್ದು, ಅದು ಬಹಳ ಚರ್ಚೆನೇ ಆಗಲಿಲ್ಲ ಅಂದ್ರೆ ಯಾರು ವಿರೋಧ ಪಕ್ಷದವರು ಭಾಗವಹಿಸಲೇ ಇಲ್ಲ. ಉಲ್ಟಾ ಅವರು ಅದನ್ನ ರಾಜಕೀಯವಾಗಿ ಬಳಸಿಕೊಂಡರು. ಅದರ ಬಗ್ಗೆ ತಪ್ಪು ಕಲ್ಪನೆಗಳನ್ನು ಜನಸಮುದಾಯಕ್ಕೆ ಅವರು ತಿಳಿಸಿದ್ದಾರೆ. ಅದಕ್ಕೆ ಸಂಪುಟ ವಿಥ್ ಡ್ರಾ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಉದ್ಯಾನವನಗಳ ಶೇಕಡಾ 5ರಷ್ಟು ಜಾಗ ಮಾರಾಟ, ಲೀಸ್(ಬಾಡಿಗೆ), ಉಡುಗೊರೆ, ವಿನಿಮಯ ಅಥವಾ ಅಡಮಾನದ ಮೂಲಕ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಸಂಸ್ಥೆಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಅವಕಾಶ ನೀಡುವ ವಿಧೇಯಕವಾಗಿದ್ದು, ರಾಜ್ಯದ ಸರ್ಕಾರಿ ಉದ್ಯಾನಗಳ ಜಾಗವನ್ನು ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಮಹತ್ವದ ತಿದ್ದುಪಡಿ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ತೋಟಗಾರಿಕೆ ಇಲಾಖೆ ರೂಪಿಸಿರುವ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975’ಕ್ಕೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು, ಬಳಿಕ ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಲ್ ಅಂಗೀಕಾರವಾಗಿತ್ತು. ಅಲ್ಲದೇ ಅಂಗೀಕೃತ ವಿಧೇಯಕವನ್ನು ರಾಜ್ಯಪಾಲರಿಗೂ ಕಳುಹಿಸಲಾಗಿತ್ತು.
ಈ ವಿಧೇಯಕಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿದ್ದವು. ಮರುಪರಿಶೀಲನೆಗಾಗಿ ಶಾಸನಸಭೆಗೆ ವಾಪಸ್ ಕಳುಹಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಹ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಏನೇ ಆದರೂ, ಲಾಲ್‌ಬಾಗ್ ಮತ್ತು ಬೆಂಗಳೂರಿನ ಹಸಿರು ಪ್ರದೇಶಗಳನ್ನು ರಕ್ಷಿಸುವ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದಿದ್ದರು. ಕೇವಲ ವಿಪಕ್ಷಗಳು ಮಾತ್ರವಲ್ಲ ಬೆಂಗಳೂರಿನ ಸಾರ್ವಜನಿಕರು ಸಹ ಇದರ ವಿರುದ್ಧ ಧ್ವನಿ ಎತ್ತಿದ್ದರು. ಅಲ್ಲದೇ ಇದೇ ಸೆಪ್ಟೆಂಬರ್ 5 ಮತ್ತು 6ರಂದು ಬಿಜೆಪಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ವಿಧೇಯಕವನ್ನು ವಾಪಸ್ ಪಡೆದಯಕೊಳ್ಳು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
ವಿಕ್ಷಗಳು ವಿರೋಧಕ್ಕೆ ಸರ್ಕಾರ ಸಹ ತನ್ನದೇ ಸ್ಪಷ್ಟನೆ ನೀಡಿತ್ತು. 2026ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆಯು, ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳನ್ನು ರಕ್ಷಿಸುವ 1975ರ ಕಾನೂನನ್ನು ಬದಲಾಯಿಸುತ್ತದೆ. ಈ ತಿದ್ದುಪಡಿಯು ಸರ್ಕಾರಿ ಉದ್ಯಾನವನ ಅಥವಾ ತೋಟದ ಒಟ್ಟು ವಿಸ್ತೀರ್ಣದ ಶೇಕಡಾ 5ರಷ್ಟು ಭಾಗವನ್ನು ನಿರ್ದಿಷ್ಟ ಸಾರ್ವಜನಿಕ ಮೂಲಸೌಕರ್ಯ ಮತ್ತು ಜನೋಪಯೋಗಿ ಯೋಜನೆಗಳಿಗಾಗಿ ಬಳಸಲು ಅಥವಾ ಹಸ್ತಾಂತರಿಸಲು ಅನುಮತಿಸುತ್ತದೆ. ಇದು ಸರ್ಕಾರಿ ಇಲಾಖೆಗಳು, ಶಾಸನಬದ್ಧ ಸಂಸ್ಥೆಗಳು, ಸರ್ಕಾರಿ ಕಂಪನಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ಯೋಜನೆಗಳನ್ನು ಒಳಗೊಂಡಿರಬಹುದು.
ಈ ನಿಬಂಧನೆಯು ಕೇವಲ ತಾತ್ಕಾಲಿಕವಾಗಿ ಉದ್ಯಾನವನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ತಿದ್ದುಪಡಿಯು ಒಟ್ಟು ಶೇಕಡಾ 5ರ ಮಿತಿಗೆ ಒಳಪಟ್ಟು ಮತ್ತು ಉನ್ನತ ಮಟ್ಟದ ಸಮಿತಿಯ ಪರಿಶೀಲನೆಗೆ ಅನುಗುಣವಾಗಿ, ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಭೂಮಿಯನ್ನು ವರ್ಗಾಯಿಸಲು ಅನುಮತಿಸುತ್ತದೆ.
ಸರಳವಾಗಿ ಹೇಳುವುದಾದರೆ, ಒಂದು ವೇಳೆ ಸರ್ಕಾರಿ ಉದ್ಯಾನವನವು 100 ಎಕರೆ ಇದ್ದರೆ, ಅರ್ಹ ಸಾರ್ವಜನಿಕ ಯೋಜನೆಗಾಗಿ ಅದರಲ್ಲಿ ಗರಿಷ್ಠ 5 ಎಕರೆಯವರೆಗೆ ಬಳಸಿಕೊಳ್ಳಲು ಈ ತಿದ್ದುಪಡಿಯು ಕಾನೂನುಬದ್ಧ ಮಾರ್ಗವನ್ನು ಕಲ್ಪಿಸುತ್ತದೆ. ಈ ಶೇಕಡಾ 5ರ ಮಿತಿಯು ಗರಿಷ್ಠ ಮಿತಿಯಾಗಿದ್ದು, ಈಗಾಗಲೇ ಯಾವುದಾದರೂ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದರೆ ಅದನ್ನು ಈ ಮಿತಿಯ ಒಳಗೇ ಪರಿಗಣಿಸಲಾಗುತ್ತದೆಯೇ ಹೊರತು, ಇದರ ಮೇಲಿಂದ ಹೆಚ್ಚುವರಿಯಾಗಿ ಸೇರಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
Published On - 4:27 pm, Thu, 3 September 26