
ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆಯ ಜತೆಗೆ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪಿದೆ. ಸಚಿವ ಸಂಪುಟದಲ್ಲಿ ಯಾರೆಲ್ಲ ಇರಬೇಕು ಎಂಬುದು ಮತ್ತು ಇತರ ಪ್ರಮುಖ ರಾಜಕೀಯ ನಿರ್ಧಾರಗಳ ಕುರಿತು ಚರ್ಚಿಸಲು ನಿರ್ಗಮಿತ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು (ಜೂನ್ 1) ದೆಹಲಿಗೆ ತೆರಳುತ್ತಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿ ಅಂತಿಮಗೊಳಿಸಲು ಹೈಕಮಾಂಡ್ ನಾಯಕರೊಂದಿಗೆ ಈ ಭೇಟಿ ನಿಗದಿಯಾಗಿದೆ. ಇದೇ ವೇಳೆ, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ ಪ್ರವೇಶಿಸಲು ನಿರಾಕರಿಸಿದ ನಂತರ ಅವರ ಪತ್ನಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದರು ಎಂಬ ಅಚ್ಚರಿಯ ವಿಚಾರ ಈಗ ತಿಳಿದುಬಂದಿದೆ.
ರಾಷ್ಟ್ರ ರಾಜಕಾರಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು. ಒಂದು ವೇಳೆ ಸಿದ್ದರಾಮಯ್ಯಗೆ ದೆಹಲಿ ರಾಜಕಾರಣಕ್ಕೆ ಬರಲು ಸಾಧ್ಯವಾಗದಿದ್ದರೆ, ಅವರ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಿಕೊಡುವಂತೆ ಗೌರವಯುತ ಆಫರ್ ನೀಡಿದ್ದರು. ಆದರೆ, ಇದನ್ನು ನಯವಾಗಿಯೇ ನಿರಾಕರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ. ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಇಲ್ಲ, ಆಕೆ ಹೊರಜಗತ್ತಿಗೂ ಬಂದಿಲ್ಲ. ಹೀಗಾಗಿ ಆಕೆ ರಾಜ್ಯಸಭೆ ಪ್ರವೇಶಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮಗೆ ನೀಡಿದ್ದ ಆ ಸ್ಥಾನವನ್ನು ಹಿಂದುಳಿದ ಸಮುದಾಯದ ಯೋಗ್ಯ ನಾಯಕರಿಗೆ ನೀಡುವಂತೆ ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಜೊತೆಗೆ ಪುತ್ರ ಯತೀಂದ್ರಗೆ ಡಿಸಿಎಂ ಪಟ್ಟವನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಇನ್ನೊಂದೆಡೆ, ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಸಿದ್ದರಾಮಯ್ಯ ತೀವ್ರ ಒತ್ತಡ ಹೇರುವ ಸಾಧ್ಯತೆ ದಟ್ಟವಾಗಿದೆ. ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಜಾತಿ ಸಮೀಕರಣವನ್ನು ಸರಿದೂಗಿಸಲು ಕನಿಷ್ಠ ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬುದು ಅವರ ವಾದವಾಗಿದೆ. ಪ್ರಮುಖವಾಗಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಾಗೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದರಾಮಯ್ಯ ಹೈಕಮಾಂಡ್ ಮಟ್ಟದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.
ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಈಗಾಗಲೇ ತಮ್ಮ ಬಣದ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಹೈಕಮಾಂಡ್ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಸಿದ್ದರಾಮಯ್ಯ ಬಣದಿಂದ ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹಮದ್ ಖಾನ್ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಹತ್ತಾರು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ ಜಿಲ್ಲಾವಾರು ಮತ್ತು ಸಮುದಾಯವಾರು ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಲಿಸ್ಟ್ ಫಿಲ್ಟರ್ ಮಾಡಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ