
ಬೆಂಗಳೂರು, (ಏಪ್ರಿಲ್ 17): ಜಾತಿ ಗಣತಿ ವರದಿ (caste census Report) ಸಂಬಂಧ ಇಂದಿನ ಸಚಿವ ಸಂಪುಟ (Karnataka cabinet Meeting ) ಯಾವ ನಿರ್ಧಾರ ಕೈಗೊಳ್ಳುತ್ತೆ ಎಂದು ಇಡೀ ರಾಜ್ಯವೇ ಎದುರು ನೋಡುತ್ತಿತ್ತು. ಆದ್ರೆ, ಯಾವ ನಿರ್ಧಾರ ಹೊರ ಬಿದ್ದಿಲ್ಲ. ಜಾತಿ ಗಣತಿ ವರದಿ ಜಾರಿ ಸಂಬಂಧ ಕರೆಯಲಾಗಿದ್ದ ವಿಶೇಷ ಸಂಪುಟ ಸಭೆ ಯಾವುದೇ ನಿರ್ಧಾರಕ್ಕೆ ಬಾರದೇ ಮುಕ್ತಾಯಗೊಂಡಿದೆ. ಹೌದು.. ಜಾತಿ ಗಣತಿ ವರದಿ ಜ್ವಾಲೆ ಮಧ್ಯೆ ನಡೆದ ಸಚಿವ ಸಂಪುಟಸ ಸಭೆ ಅಂತ್ಯವಾಗಿದ್ದು, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜಾತಿಗಣತಿ ವರದಿ ವಿಷಯ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ಇಂದಿನ ಸಂಪುಟ ಸಭೆಯಲ್ಲಿ ಅಂತ್ಯವಾಗಿದ್ದು, ಈ ಬಗ್ಗೆ ಚರ್ಚೆಯನ್ನು ಮುಂದೂಡಿಕೆ ಮಾಡಲಾಗಿದೆ. ಆದ್ರೆ, ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 2025ರ ದತ್ತಾಂಶ ಅಧ್ಯಯನ ವರದಿಯನ್ನು ಇವತ್ತು ರಾಜ್ಯ ಸಚಿವ ಸಂಪುಟ ಚರ್ಚಿಸಲಾಗಿದೆ. ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ತಾಂತ್ರಿಕ ವಿವರಗಳು ಚರ್ಚೆಗೆ ಅವಶ್ಯ ಅಗತ್ಯ ಎಂದು ಅನಿಸಿದೆ. ಅವುಗಳನ್ನು ಒದಗಿಸಲು ಚರ್ಚೆ ಅಪೂರ್ಣವಾಗಿದೆ. ಸೌಹಾರ್ದವಾದ ವಾತಾವರಣದ ಚರ್ಚೆಯಲ್ಲಿ ಹಲವಾರು ವಿಷಯಗಳನ್ನು ಮಂಡಿಸಿದ್ದೇವೆ. ಜನಸಂಖ್ಯೆ ಹಿಂದುಳಿದಿರುವಿಕೆ ಏನೇನು ಪ್ಯಾರಾಮೀಟರ್ಸ್ ತೆಗೆದುಕೊಂಡಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ಏನೇನು ವಿವರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚರ್ಚೆ ಮಾಡಲಾಗಿದೆ. ಈ ಬಗ್ಗೆ ಮೇ 2ರಂದು ನಡೆಯುವ ಸಂಪುಟ ಸಭೆಯಲ್ಲಿ ಇನ್ನಷ್ಟು ಚರ್ಚೆ ನಡೆಯಲಿದೆ ಎಂದರು.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಜಾತಿ ಗಣತಿ ವರದಿ ದೊಡ್ಡ ಕೋಲಾಹಲ ಎಬ್ಬಿಸಿತ್ತು. ಕಳೆದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸಿದ್ದ ಬೆನ್ನಲ್ಲೆ, ಪರ ವಿರೋಧ ಚರ್ಚೆ ಶುರುವಾಗಿತ್ತು. ಈ ಮಧ್ಯೆ ಜಾತಿ ಗಣತಿ ವರದಿಯ ಸೋರಿಕೆಯಾದ ಅಂಕಿ ಸಂಖ್ಯೆಗಳು ಒಕ್ಕಲಿಗರು, ಲಿಂಗಾಯತರನ್ನ ಸಿಡಿದೇಳುವಂತೆ ಮಾಡಿತ್ತು. ಜಾತಿ ಗಣತಿ ವರದಿ ಜಾರಿ ಆದ್ರೆ ಕರ್ನಾಟಕ ಬಂದ್ ಮಾದರಿ ಹೋರಾಟ ಮಾಡುತ್ತೇವೆ ಎಂದು ಒಕ್ಕಲಿಗರು ಗುಡುಗಿದ್ರು. ಅತ್ತ ಶೋಷಿತ ಸಮುದಾಯ ಜಾತಿ ಗಣತಿ ವರದಿ ಜಾರಿ ಆಗದೇ ಇದ್ರೆ, ಬೀದಿ ಬೀದಿಯಲ್ಲಿ ದಂಗೆ ಏಳ್ತೀವಿ ಎಂದಿದ್ರು. ಇಷ್ಟೆಲ್ಲ ಪರ ವಿರೋಧದ ಮಧ್ಯೆ ಇವತ್ತು ಕ್ಯಾಬಿನೆಟ್ ಸಭೆ ನಿಗದಿಯಾಗಿತ್ತು. ಆದ್ರೆ ಸಂಪುಟ ಸಭೆಯಲ್ಲಿ ಆಗಿದ್ದೇ ಬೇರೆ
ಕ್ಯಾಬಿನೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಮೊದಲು ಜಾತಿ ಗಣತಿ ವರದಿ ಸಂಬಂಧ ಸಚಿವರ ಬಳಿಕ ವೈಯಕ್ತಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ರು. ಈ ವೇಳೆ ದಲಿತ ಸಮುದಾಯದ ಸಚಿವರು, ಜಾತಿ ಗಣತಿ ನಮ್ಮ ಕಾಂಗ್ರೆಸ್ ಪಣಾಳಿಕೆಯಲ್ಲೇ ಇದೆ, ಅದು ನಮ್ಮ ಪಾಲಿಸಿ, ಜಾತಿಗಣತಿಯಿಂದ ಹಿಂದೆ ಸರಿಯೋದು ಬೇಡ ಎಂದು ಕೆಲ ದಲಿತ ಸಚಿವರು ಆಗ್ರಹಿಸಿದರು. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಿಂಗಾಯತ ಸಮುದಾಯದವ ಸಚಿವರು ಹಾಗೂ ಒಕ್ಕಲಿಗರ ಸಮುದಾಯದ ಸಚಿವರು ಏರು ಧ್ವನಿಯಲ್ಲಿ ವಿರೋಧಿಸಿದರು.
ಅಂದಹಾಗೆ ಇಂದಿನ ವಿಶೇಷ ಕ್ಯಾಬಿನೆಟ್ನಲ್ಲಿ ಜಾತಿ ಗಣತಿ ವರದಿಯನ್ನ ಡಿಸಿಎಂ ಡಿಕೆ ಏರುಧ್ವನಿಯಲ್ಲೇ ವಿರೋಧಿಸಿದ್ದಾರೆ. ಮೊದಲಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜಾತಿ ಗಣತಿ ವರದಿಯನ್ನ ತೀವ್ರವಾಗಿ ವಿರೋಧಿಸಿದ್ರು. ಈ ವೇಳೇ ಸಚಿವ ಸಂತೋಷ್ ಲಾಡ್, ಯಾರಿಗೆ ಅನ್ಯಾಯವಾಗಿದೆ ಸೇರಿಸಲು ಅವಕಾಶವಿದೆ ಅಂದ್ರು. ಆಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ, ಎಲ್ಲವನ್ನೂ ಒಂದರಲ್ಲೇ ಏಕೆ ಸೇರಿಸಿದ್ದೀರಿ ಎಂದು ತೀವ್ರವಾಗಿ ಕಿಡಿ ಕಾರಿದ್ರು. ಜಾತಿ ಗಣತಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ S.S.ಮಲ್ಲಿಕಾರ್ಜುನ ಹೇಳಿದ್ರು. ಸಚಿವ ಮಲ್ಲಿಕಾರ್ಜುನ ಮಾತಿಗೆ ಡಿಸಿಎಂ ಡಿಕೆ ಸಹ ಧ್ವನಿ ಗೂಡಿಸಿದರು.
ಹೀಗೆ ಕ್ಯಾಬಿನೆಟ್ನಲ್ಲಿ ಯಾರೆಲ್ಲ ಜಾತಿ ಗಣತಿ ವರದಿ ಜಾರಿಗೆ ಆಕ್ಷೇಪ ಎತ್ತಿದ್ರೋ, ಅವರಿಗೆ ಲಿಖಿತ ರೂಪದಲ್ಲಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಬಳಿಕ ಯಾವುದೇ ತೀರ್ಮಾನಕ್ಕೆ ಬಾರದೇ ಸಂಪುಟ ಸಭೆಯನ್ನ ಮುಕ್ತಾಯಗೊಳಿಸಲಾಯ್ತು. ಇನ್ನು ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಹಾಗೇಯೆ ತೆರಳಿದ್ರೆ, ಕೆಲ ಸಚಿವರು ಜಾತಿ ಗಣತಿಗೆ ಯಾವುದೇ ವಿರೋಧ ಇಲ್ಲ ಎಂದಿದ್ದಾರೆ.
ಇನ್ನು ಮುಂದಿನವಾರ ಅಂದ್ರೆ ಏಪ್ರಿಲ್ 24 ರಂದು ಮಲೆಮಹದೇಶ್ವರ್ ಬೆಟ್ಟದಲ್ಲಿ ಕ್ಯಾಬಿನೆಟ್ ನಡೆಯಲಿದೆ. ಅಲ್ಲಿ ಸ್ಥಳೀಯ ಸಮಸ್ಯೆಗಳ ಚರ್ಚೆಯ ಅಜೆಂಡಾ ಸೆಟ್ ಆಗಿದೆ. ಹೀಗಾಗಿ ಮೇ 2 ರಂದು ಕ್ಯಾಬಿನೆಟ್ನಲ್ಲಿ ಜಾತಿ ಗಣತಿ ವರದಿ ವಿಚಾರ ಚರ್ಚೆಗೆ ಬರುವು ನಿರೀಕ್ಷೆ ಇದೆ.
ಅಸಲಿಗೆ ಇವತ್ತು ಕ್ಯಾಬಿನೆಟ್ ಸಭೆಗೂ ಮುನ್ನವೇ ಲಿಂಗಾಯತ ಸಮುದಾಯದ ಸಚಿವರು ಎಂ.ಬಿ.ಪಾಟೀಲ್ ಪ್ರತ್ಯೇಕ ಸಭೆ ನಡೆಸಿದ್ದರು. ಸಭೆಯಲ್ಲಿ ಕ್ಯಾಬಿನೆಟ್ನಲ್ಲಿ ಜಾತಿ ಗಣತಿ ವರದಿಯನ್ನ ತಿರಸ್ಕಾರ ಮಾಡಬೇಕು, ಇಲ್ಲದೇ ಇದ್ರೆ ಪಬ್ಲಿಕ್ ಡೊಮೈನ್ಗೆ ಬಿಡಬೇಕು ಎಂದು ನಿರ್ಧರಿಸಿದ್ದರು. ಅದರಂತೆ ಲಿಂಗಾಯತ ಸಚಿವರು ಜಾತಿಗಣತಿ ವರದಿಗೆ ಕ್ಯಾಬಿನೆಟ್ನಲ್ಲಿ ವಿರೋಧಿಸಿದ್ದಾರೆ. ಹೀಗಾಗಿ ಮುಂದಿನ ಕ್ಯಾಬಿನೆಟ್ನಲ್ಲಿ ಏನಾಗುತ್ತೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
Published On - 8:39 pm, Thu, 17 April 25