
ಬೆಂಗಳೂರು, ನವೆಂಬರ್ 24: ಜಪಾನ್ ಪ್ರವಾಸದಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಸಾಕಾದಲ್ಲಿರುವ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಕರ್ನಾಟಕದ ನಿಯೋಗದೊಂದಿಗೆ ಮಂಗಳವಾರ ಭೇಟಿ ನೀಡಿದ್ದಾರೆ. ನಗರ ತ್ಯಾಜ್ಯವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಇಂಧನವಾಗಿ ಪರಿವರ್ತಿಸುವ ಜಪಾನ್‌ನ ವ್ಯವಸ್ಥೆಯನ್ನು ವೀಕ್ಷಿಸಿದ್ದು, ಸ್ವಚ್ಛ ಹಾಗೂ ಸುಸ್ಥಿರ ಕರ್ನಾಟಕ ನಿರ್ಮಾಣಕ್ಕೆ ಇಂತಹ ಜಾಗತಿಕ ಮಾದರಿಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಮೈಶಿಮಾ ಘಟಕವು ಪ್ರತಿದಿನ ಸುಮಾರು 900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. 2001ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ ಎರಡು ದಹನ ಯಂತ್ರಗಳಿದ್ದು, ಪ್ರತಿದಿನ ಸಂಸ್ಕರಿಸುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಈ ಘಟಕವು 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ತನ್ನ ಕಾರ್ಯಾಚರಣೆಗೆ ಅಗತ್ಯವಿರುವ ವಿದ್ಯುತ್ ಅನ್ನು ತಾನೇ ಪೂರೈಸಿಕೊಳ್ಳುವುದರ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ರವಾನಿಸುತ್ತದೆ. ಅಲ್ಲದೆ, ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ವಾಯುಮಾಲಿನ್ಯ ನಿಯಂತ್ರಿಸಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಮೈಶಿಮಾ ತ್ಯಾಜ್ಯ ಸಂಸ್ಕರಣಾ ಘಟಕದ ಮತ್ತೊಂದು ವಿಶೇಷವೆಂದರೆ ಅದರ ವಿಶಿಷ್ಟ ವಾಸ್ತುಶಿಲ್ಪ. ಖ್ಯಾತ ಆಸ್ಟ್ರಿಯನ್ ಕಲಾವಿದ ಫ್ರೈಡೆನ್ಸ್‌ರೀಚ್ ಹಂಡರ್ಟ್‌ವಾಸರ್ ಈ ಘಟಕದ ವಿನ್ಯಾಸ ರೂಪಿಸಿದ್ದಾರೆ. ವರ್ಣರಂಜಿತ ಮುಂಭಾಗ, ವಿಭಿನ್ನ ವಿನ್ಯಾಸಗಳು ಹಾಗೂ ಹಸಿರು ಪರಿಸರ ಘಟಕಕ್ಕೆ ವಿಶೇಷ ಆಕರ್ಷಣೆ ನೀಡಿವೆ. ಕಲೆ, ಪರಿಸರ ವಿಜ್ಞಾನ ಮತ್ತು ಕೈಗಾರಿಕಾ ಮೂಲಸೌಕರ್ಯವನ್ನು ಒಂದೇ ಕಡೆ ಬೆಸೆಯುವ ಮಾದರಿ ಇದಾಗಿದೆ ಎಂದು ಸಿಎಂ ಎಕ್ಸ್ ಸಂದೇಶದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣ: ಟೊಯೋಟಾ ಕೇಂದ್ರ ಕಚೇರಿ ಭೇಟಿಗೂ ಮುನ್ನ ನಗೋಯಾ ತಲುಪಿದ ಡಿಕೆಶಿ
ನಗರ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು, ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಸ್ವಚ್ಛ ಮತ್ತು ಸುಸ್ಥಿರ ನಗರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಜಪಾನ್‌ನ ಈ ಘಟಕದಿಂದ ಕರ್ನಾಟಕ ಕಲಿಯಬಹುದಾದ ಹಲವು ಅಂಶಗಳಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತ್ಯಾಜ್ಯವನ್ನು ಕೇವಲ ವಿಲೇವಾರಿ ಮಾಡುವ ಬದಲು ಅದರಿಂದ ವಿದ್ಯುತ್ ಉತ್ಪಾದಿಸುವ ಇಂತಹ ಮಾದರಿಗಳನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸಲು ಈ ಭೇಟಿ ಮಹತ್ವದ್ದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ