ನಾಳೆ ಹಾಲಿ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಭವಿಷ್ಯ ನಿರ್ಧಾರ

ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮುಡಾ ಹಗರಣದ ತನಿಖೆಯನ್ನು ಸಿಬಿಐ ನೀಡಬೇಕೋ ಬೇಡ್ವೋ ಎನ್ನುವುದನ್ನು ಹೈಕೋರ್ಟ್ ತೀರ್ಪು ನೀಡಲಿದೆ. ಮತ್ತೊಂದೆಡೆ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ನಾಳೆ(ಫೆಬ್ರವರಿ 07) ಹಾಲಿ, ಮಾಜಿ ಸಿಎಂಗಳಿಗೆ ನಿರ್ಣಯಕ ದಿನವಾಗಿದೆ.

ನಾಳೆ ಹಾಲಿ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಭವಿಷ್ಯ ನಿರ್ಧಾರ
Siddaramaiah And Bsy
Edited By:

Updated on: Feb 06, 2025 | 8:25 PM

ಬೆಂಗಳೂರು, (ಫೆಬ್ರವರಿ 06): ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್, ನಾಳೆ(ಫೆಬ್ರವರಿ 07) ಆದೇಶ ಪ್ರಕಟಿಸಲಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ನಾಳೆ (ಫೆಬ್ರವರಿ 07) ಬೆಳಗ್ಗೆ 10.30ಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಕೋರ್ಟ್​ ತೀರ್ಪು ಏನು ನೀಡುತ್ತೋ ಎನ್ನುವ ಢವಢವ ಸಿದ್ದರಾಮಯ್ಯನವರಿಗೆ ಶುರುವಾಗಿದೆ.

ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದರು. ಇನ್ನು ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಮಣೀಂದ್ರ್ ಸಿಂಗ್ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ನಾಳೆ ಬಿಎಸ್​ವೈ ವಿರುದ್ಧದ ಪೋಕ್ಸೋ ಕೇಸ್ ತೀರ್ಪು

ಅತ್ತ ಧಾರವಾಡ ಹೈಕೋರ್ಟ್​ ಪೀಠದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ನಾಳೆ (ಫೆಬ್ರವರಿ 07) ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ತೀರ್ಪು ಹೊರಬೀಳಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ನೀಡಲಿದೆ.

ಪ್ರಕರಣ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು. ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ. ನಿರೀಕ್ಷಣಾ ಜಾಮೀನು ಬಗ್ಗೆಯೂ ತೀರ್ಮಾನಿಸಲಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಿಎಂ ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣದ ದೋಷಾರೋಪ ಪಟ್ಟಿಯನ್ನು ಈಗಾಗಲೇ ಸಿಐಡಿ ಪೊಲೀಸರು ದಾಖಲಿಸಿದ್ದಾರೆ. ಈವರೆಗೆ ಖುದ್ದು ಹಾಜರಾತಿಯಿಂದ ಬಿಎಸ್‌ವೈಗೆ ಕೋರ್ಟ್​ ಅನುಮತಿ ನೀಡಿತ್ತು. ಅಲ್ಲದೇ ಬಂಧನದಿಂದಲೂ ಮಧ್ಯಂತರ ರಕ್ಷಣೆ ಮಾಡಿತ್ತು.

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರು ಕರ್ನಾಟಕದ ಹಿರಿಯ ರಾಜಕಾರಣಿಗಳು. ಹೀಗಾಗಿ ನಾಳೆಯ ಕೋರ್ಟ್ ತೀರ್ಪು ಇವರ ಭವಿಷ್ಯ ನಿರ್ಧರಿಸಲಿದೆ.  ಇನ್ನು ಈ ಇಬ್ಬರು ನಾಯಕರ ಅಭಿಮಾನಿಗಳ ಚಿತ್ತ ಕೋರ್ಟ್​ನತ್ತ ನೆಟ್ಟಿದ್ದು, ತೀರ್ಪು ಏನು ಬರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Published On - 7:41 pm, Thu, 6 February 25