8 ತಿಂಗಳ ಬಳಿಕ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ, ಸದಸ್ಯರ ನೇಮಕ
ಅಂತು ಇಂತು ರಾಜ್ಯ ಸರ್ಕಾರ 8 ತಿಂಗಳ ಬಳಿಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿದೆ. ಬಾಕಿ ಉಳಿದಿರುವ 4800 ಪ್ರಕರಣ ತನಿಖೆಯಾಗಲಿವೆ. ಅಷ್ಟಕ್ಕೂ ಸರ್ಕಾರ ಯಾಕೆ ಇಷ್ಟು ವಿಳಂಬ ಮಾಡಿತು? ಇಲ್ಲಿದೆ ಕಾರಣ ಓದಿ..
ಬೆಂಗಳೂರು ನ.27: ರಾಜ್ಯ ಸರ್ಕಾರ (Karnataka Government) ಎಂಟು ತಿಂಗಳ ಬಳಿಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (Human Rights Commission) ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ನಿವೃತ್ತ ನ್ಯಾ. ಎಲ್. ನಾರಾಯಣಸ್ವಾಮಿ ಅವರನ್ನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಅಧ್ಯಕ್ಷರ ಜೊತೆಗೆ ಇಬ್ಬರು ಸದಸ್ಯರನ್ನು ಸಹ ಆಯ್ಕೆ ಮಾಡಿದೆ. ನಿವೃತ್ತ ಜಿಲ್ಲಾ ನ್ಯಾ. ಎಸ್. ಕೆ.ವಂಟಿಗೋಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.
ಎಲ್. ನಾರಾಯಣಸ್ವಾಮಿ ಅವರು ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸುಮಾರು 4,800ಕ್ಕೂ ಅಧಿಕ ಪ್ರಕರಣಗಳು ತನಿಖೆಯಾಗದೆ ಬಾಕಿ ಉಳಿದಿವೆ. ಈಗ ಅಧ್ಯಕ್ಷರು ಆಯ್ಕೆಯಾಗಿದ್ದರಿಂದ ತನಿಖೆ ಮುಂದುವರೆಯಲಿವೆ. ಮಂಗಳವಾರದಿಂದ ಬಾಕಿ ಉಳಿದಿದ್ದ ಪ್ರಕರಣಗಳ ತನಿಖೆ ಆರಂಭ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಾನವ ಹಕ್ಕುಗಳ ಆಯೋಗದ ರಚನೆಗೆ ಸಚಿವ ಸಂಪುಟ ನಿರ್ಣಯ: ಇನ್ನಿತರ ತೀರ್ಮಾನಗಳ ವಿವರ ಇಲ್ಲಿದೆ
8 ತಿಂಗಳ ವಿಳಂಬವೇಕೆ?
ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ಗೃಹ ಸಚಿವರು, ಕಾನೂನು ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ಮೂಲಕ ಆಯ್ಕೆ ಮಾಡಲಾಗುತ್ತೆ. ಆದರೆ ಇಲ್ಲಿಯವರೆಗು ವಿಪಕ್ಷ ನಾಯಕ ಇಲ್ಲದ ಕಾರಣ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ಆಯ್ಕೆ ಮಾಡಿರಲಿಲ್ಲ.
ಸರ್ಕಾರಕ್ಕೆ ನೋಟಿಸ್ ನೀಡಿದ್ದ ಹೈಕೋರ್ಟ್
ಎಂಟು ತಿಂಗಳಾದರೂ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಿಲ್ಲ ಎಂದು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೊಟೀಸ್ ನೀಡಿತ್ತು. ವಿರೋಧ ಪಕ್ಷ ನಾಯಕರ ಆಯ್ಕೆ ಆಗದ ಕಾರಣಕ್ಕೆ ಮಾನವಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರ ಆಯ್ಕೆ ತಡವಾಗಿದೆ ಎಂದು ನೊಟೀಸ್ಗೆ ಸರ್ಕಾರಿ ಮುಖ್ಯ ಕಾರ್ಯದರ್ಶಿ ಉತ್ತರ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ