ಕರ್ನಾಟಕ ಸರ್ಕಾರಿ ಆಸ್ಪತ್ರೆಗಳಲ್ಲಿ 2,000 ವೈದ್ಯರ ಕೊರತೆ: ನೇಮಕಾತಿಗೂ ಇವೆ ಹಲವು ಸಮಸ್ಯೆ

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕೊರತೆ ಹೆಚ್ಚಾಗಿದ್ದು, ಖಾಲಿ ಹುದ್ದೆಗಳ ನೇಮಕಾತಿಯೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದು, ಇದೇ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ಸೇರಲು ಹಿಂದುಮುಂದು ನೋಡುತ್ತಿದ್ದಾರೆ. ಹಾಗಾದರೆ, ಸರ್ಕಾರಿ ಆಸ್ಪತ್ರೆಗಳಿಗೆ ಸೇರಲು ವೈದ್ಯರು ಹಿಂದೇಟು ಹಾಕಲು ಕಾರಣಗಳೇನು? ಇಲ್ಲಿದೆ ವಿವರ.

ಕರ್ನಾಟಕ ಸರ್ಕಾರಿ ಆಸ್ಪತ್ರೆಗಳಲ್ಲಿ 2,000 ವೈದ್ಯರ ಕೊರತೆ: ನೇಮಕಾತಿಗೂ ಇವೆ ಹಲವು ಸಮಸ್ಯೆ
ಸಾಂದರ್ಭಿಕ ಚಿತ್ರ
Follow us
|

Updated on:Sep 16, 2024 | 9:45 AM

ಬೆಂಗಳೂರು, ಸೆಪ್ಟೆಂಬರ್: ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 2,000 ವೈದ್ಯರ ಕೊರತೆ ಇದ್ದು, ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಖಾಲಿ ಇರುವ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ತುರ್ತು ಅಗತ್ಯವಾಗಿದೆ.

ಜೂನ್‌ವರೆಗಿನ ದತ್ತಾಂಶಗಳ ಪ್ರಕಾರ, ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ವೈದ್ಯಕೀಯ ಅಧಿಕಾರಿಗಳು, ಇತರ ವೈದ್ಯರು ಸೇರಿದಂತೆ 744 ತಜ್ಞರು, 613 ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು ಮತ್ತು 558 ವೈದ್ಯಕೀಯ ವೃತ್ತಿಪರರ ಕೊರತೆಯಿದೆ. ದಂತ ವೈದ್ಯಕೀಯ ವಿಭಾಗದಲ್ಲಿಯೂ ಒಟ್ಟು 425 ಮಂಜೂರಾದ ಹುದ್ದೆಗಳಲ್ಲಿ 25 ಹುದ್ದೆಗಳು ಖಾಲಿ ಇವೆ.

ಖಾಲಿ ಇರುವ 1,940 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ಪಾತ್ರಗಳು, ಜವಾಬ್ದಾರಿಗಳು ಮತ್ತು ಕೆಲಸದ ವ್ಯಾಪ್ತಿಯನ್ನು ವ್ಯಾಖ್ಯಾನಿಸುವ ಸ್ಪಷ್ಟವಾದ ನೀತಿಗಳ ಕೊರತೆ ಕೂಡ ನೇಮಕಾತಿ ಪ್ರಕ್ರಿಯೆಗೆ ಸವಾಲೊಡ್ಡುತ್ತಿವೆ ಎಂದು ಆರೋಗ್ಯ ಆಯುಕ್ತ ಶಿವಕುಮಾರ್ ಕೆಬಿ ಬೇಸರ ವ್ಯಕ್ತಪಡಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಹುದ್ದೆಗಳ ಭರ್ತಿಗೆ ಕ್ರಮ

ವೈದ್ಯಕೀಯ ಕಾಲೇಜುಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಗಳು ನಡೆಯುತ್ತಿದ್ದರೂ, ಸರ್ಕಾರಿ ವಲಯಕ್ಕೆ ಅಭ್ಯರ್ಥಿಗಳನ್ನು ಆಕರ್ಷಿಸುವುದು ಸವಾಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ವೈದ್ಯರ ನಿರಾಸಕ್ತಿಗೆ ಕಾರಣವೇನು?

ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಸಾಮಾನ್ಯವಾಗಿ ಆರೋಗ್ಯ ಸೇವೆ ಒದಗಿಸುವುದರ ಜತೆಗೆ ನಿರ್ವಹಣೆಯ ಜವಾಬ್ದಾರಿಗಳನ್ನೂ ವಹಿಸಬೇಕಾಗುತ್ತದೆ. ಅವರು ದ್ವಿಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಅವರು ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ವಹಿಸುವ ಹೆಚ್ಚುವರಿ ಒತ್ತಡವನ್ನು ಎದುರಿಸುತ್ತಾರೆ. ಇದು ಕ್ಲಿನಿಕಲ್ ಅಲ್ಲದ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಅವರ ಗಮನವನ್ನು ತಿರುಗಿಸುತ್ತದೆ. ಇದು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಗ್ರಾಮೀಣ ಹುದ್ದೆಗಳನ್ನು ಸ್ವೀಕರಿಸುವಲ್ಲಿ ವೈದ್ಯರನ್ನು ನಿರುತ್ಸಾಹಗೊಳಿಸುತ್ತದೆ. ಆಡಳಿತಾತ್ಮಕ ವಿಚಾರಗಳಿಗೆ ಹೆಚ್ಚು ಗಮನಹರಿಸುವುದರಿಂದ ವೈದ್ಯಕೀಯ ಕೌಶಲ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಅನೇಕ ವೈದ್ಯಕೀಯ ವೃತ್ತಿಪರರು ಭಾವಿಸುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಸಾವು: ಕರ್ನಾಟಕದಲ್ಲಿ ಹೈ ಟೆನ್ಷನ್‌

ಹೊರರೋಗಿ ವಿಭಾಗಗಳಿಗೆ ಹಾಜರಾದ ನಂತರ ವೈದ್ಯರು ಆಗಾಗ್ಗೆ ಹೆಚ್ಚುವರಿಯಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದು ರೋಗಿಗಳ ಆರೈಕೆಯನ್ನು ವಿಳಂಬಗೊಳಿಸುತ್ತದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ನಿಜ ಎಂದು ಕೆಲವು ದಿನಗಳ ಹಿಂದಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒಪ್ಪಿಕೊಂಡಿದ್ದರು. ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಭರವಸೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:13 am, Mon, 16 September 24