ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ
ಪ್ರಸ್ತುತ ಸಂಭವಿಸುತ್ತಿರುವ ಎಲ್‌ನಿನೋ ಹವಾಮಾನ ವೈಪರೀತ್ಯದಿಂದಾಗಿ ದೇಶದಲ್ಲಿ ಮಳೆಯ ಕೊರತೆ ಉಂಟಾಗುತ್ತಿದೆ. ರಾಜ್ಯದಲ್ಲಿ ಮಳೆಯಿಲ್ಲದೇ ಬರ ಪರಿಸ್ಥಿತಿ ಉಂಟಾಗಿದೆ. ಇದೀಗ ಈ ಬರಗಾಲದ ಬಿಸಿ ವಿಧಾನಸೌಧ ಮತ್ತು ಸಚಿವಾಲಯಗಳಿಗೂ ತಟ್ಟಿದೆ. ಹಾಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ.

ಮುಖ್ಯಾಂಶಗಳು
- ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ
- ನೀರು, ವಿದ್ಯುತ್ ಉಳಿತಾಯಕ್ಕೆ ನಿಯಮ
- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ಆದೇಶ
ಬೆಂಗಳೂರು, ಜುಲೈ 16: ರಾಜ್ಯದ ಯಾವ ದಿಕ್ಕಿಗೆ ಹೋದರೂ ನೀರಿಲ್ಲ. ಕಳೆದ ವಾರ ಅಲ್ಪ ಸ್ವಲ್ಪ ಮಳೆಯಾದರೂ (Rain) ರಾಜ್ಯದ ಜಲಾಶಯಗಳು ತುಂಬುವಷ್ಟು ಒಳ ಹರಿವು ಬಂದಿಲ್ಲ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಿಧಾನಸೌಧ ಮತ್ತು ಸಚಿವಾಲಯಗಳಿಗೂ ಬರಗಾಲದ ಬಿಸಿ ತಟ್ಟಿದ್ದು, ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಗುರುವಾರ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ರಿಂದ ಕಟ್ಟುನಿಟ್ಟಿನ ಆದೇಶ
ದೇಶದಲ್ಲಿ ಎಲ್‌ನಿನೋ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಕೊರತೆ ಉಂಟಾಗಿದ್ದು, ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಬರಗಾಲದ ಬಿಸಿ ಈಗ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಕ್ಕೂ ತಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಪೋಲಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ
ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಎಸಿ ಸಾಧನಗಳನ್ನು ಆಫ್ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಸಚಿವಾಲಯದ ಎಲ್ಲಾ ಇಲಾಖೆಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದ್ದಾರೆ.
ಪ್ರಮುಖ ನಿರ್ದೇಶನಗಳು ಮತ್ತು ನಿಯಮಗಳು
- ನೈಸರ್ಗಿಕ ಬೆಳಕಿನ ಬಳಕೆ: ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.
- ಸಂಜೆ 6 ಗಂಟೆಯ ನಂತರ ಕಠಿಣ ನಿಗಾ: ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
- ಸ್ವಿಚ್-ಆಫ್ ಕಡ್ಡಾಯ: ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ.
- AC ತಾಪಮಾನ ನಿಯಂತ್ರಣ: ಅಧಿಕಾರಿಗಳ ಕಚೇರಿಗಳಲ್ಲಿನ AC ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.
- ತಂತ್ರಜ್ಞಾನದ ಅಳವಡಿಕೆ: ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
- ನೀರು ಪೋಲಾಗುವುದಕ್ಕೆ ಬ್ರೇಕ್: ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲಾಗುವುದು ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.
ಇದನ್ನೂ ಓದಿ: Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ
ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಆದೇಶವನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಿನಿ ರಜನೀಶ್ ಆದೇಶಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




