IAS, IPS ಅಧಿಕಾರಿಗಳ ವರ್ಗಾವಣೆ: ಮುನೀಶ್‌ ಮೌದ್ಗಿಲ್‌ಗೆ ಮಹತ್ವದ ಜವಾಬ್ದಾರಿ

ಡಿ.ಕೆ ಶಿವಕುಮಾರ್‌ ಕರ್ನಾಟಕದ 25ನೇ ಸಿಎಂ ಆಗಿ ಆಡಳಿತ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿದ್ದ ಅಧಿಕಾರಿಗಳ ಸ್ಥಾನಪಲ್ಲಟವಾಗುತ್ತಿದ್ದು, ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತ ಅಧಿಕಾರಿಗಳನ್ನ ಆಯಾ ಸ್ಥಳಗಳಿಗೆ ನಿಯೋಜನೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇದೀಗ ಆರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಹಾಗಾದ್ರೆ, ಯಾರು ಎಲ್ಲಿ ವರ್ಗಾವಣೆ ಎನ್ನುವ ಡಿಟೇಲ್ಸ್ ಇಲ್ಲಿದೆ.

IAS, IPS ಅಧಿಕಾರಿಗಳ ವರ್ಗಾವಣೆ: ಮುನೀಶ್‌ ಮೌದ್ಗಿಲ್‌ಗೆ ಮಹತ್ವದ ಜವಾಬ್ದಾರಿ
Vidhana Soudha

Updated on: Jun 07, 2026 | 9:09 PM

ಬೆಂಗಳೂರು, (ಜೂನ್ 07): ಕರ್ನಾಟಕ ಸರ್ಕಾರವು ಇಂದು (ಜೂನ್ 07)  ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.  ಡಿಕೆ ಶಿವಕುಮಾರ್ (DK Shivakumar) ಸರ್ಕಾರ ಬರುತ್ತಿದ್ದಂತೆಯೇ ಪ್ರಮುಖ  ಅಧಿಕಾರಿಗಳ ಸ್ಥಳ ಬದಲಾವಣೆಯಾಗುತ್ತಿದೆ. ಇದೀಗ 6 ಐಎಎಸ್ ಅಧಿಕಾರಿಗಳ ಜೊತೆಗೆ ಐಪಿಎಸ್ ಆಫೀರ್ಸ್​​​​​ಗಳನ್ನೂ ಸಹ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಮುಖವಾಗಿ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಸಿಎಂ ಪ್ರಧಾನ ಕಾರ್ಯದರ್ಶಿಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಇನ್ನು  ಮುಖ್ಯವಾಗಿ  ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ  ಡಾ. ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಪ್ರಮುಖ ಅಧಿಕಾರಿಗಳ ಸ್ಥಾನಪಲ್ಲಟ
  • ಸಿದ್ದರಾಮಯ್ಯ ಅವಧಿಯ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ
  • ಐಪಿಎಸ್ ಹಾಗೂ ಆರು ಐಎಎಸ್ ಅಧಿಕಾರಿಗಳ ವರ್ಗಾವಣೆ
  • ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ  ಡಾ. ಚಂದ್ರಗುಪ್ತ ಅವರನ್ನು ನೇಮಕ
  • ಮುನೀಶ್ ಮೌದ್ಗಿಲ್​​​ಗೆ ಸಿಎಂ ಪ್ರಧಾನ ಕಾರ್ಯದರ್ಶಿಯ ಹೆಚ್ಚುವರಿ ಹೊಣೆ

ಈ ಹಿಂದಿನ ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ  ಅಂಜುಮ್ ಪರ್ವೇಝ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಮುನೀಶ್ ಮೌದ್ಗಿಲ್ ಅವರನ್ನು ನೂತನವಾಗಿ ಸೃಷ್ಟಿಸಲಾದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ) ಹುದ್ದೆಯ ಜವಾಬ್ದಾರಿಯನ್ನು ನೀಡಲಾಗಿದೆ.

IAS ಯಾರು ಎಲ್ಲಿಗೆ ವರ್ಗಾವಣೆ?

ಹುದ್ದೆ ನಿರೀಕ್ಷೆಯಲ್ಲಿದ್ದ 1994ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನು ಬೆಂಗಳೂರಿನ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಬಿಬಿಎಂಪಿ (ಆಡಳಿತ, ಕಂದಾಯ ಮತ್ತು ಐಟಿ) ವಿಶೇಷ ಆಯುಕ್ತರಾಗಿರುವ ಇವರಿಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ) ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರು ಡಾ. ಪ್ರಸಾದ್ ಎನ್.ವಿ. ಅವರ ಸ್ಥಾನವನ್ನು ತುಂಬಲಿದ್ದಾರೆ.

ಇನ್ನು ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಕಾವೇರಿ ಬಿ.ಬಿ. ಅವರನ್ನು ನಗರಾಭಿವೃದ್ಧಿ ಇಲಾಖೆಯ (ನಗರಾಡಳಿತ ಮತ್ತು ಪೌರಾಡಳಿತ) ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಾ. ವೆಂಕಟೇಶ್ ಎಂ.ವಿ ಅವರನ್ನ ಸಹಕಾರ ಸಂಘಗಳ ನಿಬಂಧಕರಾಗಿ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ. ಸೆಲ್ವಮಣಿ ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇವರು ಯೋಗೀಶ್ ಎಂ.ಪಿ. ಅವರ ಜಾಗಕ್ಕೆ ಬರಲಿದ್ದಾರೆ.

ಗುಪ್ತಚರ ವಿಭಾಗದ ಮುಖ್ಯಸ್ಥರ ಬದಲಾವಣೆ

ಪ್ರಮುಖವಾಗಿ ಗುಪ್ತಚರ ವಿಭಾಗದ ಮುಖ್ಯಸ್ಥ ಲಾಭೂ ರಾಮ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಬೆಂಗಳೂರಿನ ಭದ್ರತಾ (ಗುಪ್ತಚರ) ವಿಭಾಗದ ಪೊಲೀಸ್ ಮಹಾನಿರೀಕ್ಷಕರಾಗಿ (IGP) ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ (DGP) ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಪ್ರಣಬ್ ಮೊಹಾಂತಿ, ಐಪಿಎಸ್ (KN 1994) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬೆಂಗಳೂರಿನ ಅಪರಾಧ ತನಿಖಾ ದಳ (CID), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾಯಿಸಿ ನಿಯೋಜಿಸಲಾಗಿದೆ. ಹಾಗೇ ಪ್ರಣಬ್ ಮೊಹಾಂತಿ ಅವರಿಗೆ ಬೆಂಗಳೂರಿನ ಅಪರಾಧ ತನಿಖಾ ದಳದ ಪೊಲೀಸ್ ಮಹಾನಿರ್ದೇಶಕರ (ಸೈಬರ್ ಅಪರಾಧಗಳು) ಹೆಚ್ಚುವರಿ ಜವಾಬ್ದಾರಿಯನ್ನು ಸಹ ವಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Sun, 7 June 26

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us