Beyond Bengaluru: ‘ಬೆಂಗಳೂರಿನ ಆಚೆ’ ಪರಿಕಲ್ಪನೆಯಡಿ 5 ವರ್ಷದಲ್ಲಿ 40 ಸಾವಿರ ಕೋಟಿ ರೂ ವಹಿವಾಟು ಗುರಿ!
ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು, ಮೈಸೂರು, ಶಿವಮೊಗ್ಗ ಮಾತ್ರವಲ್ಲದೆ, ಮೂರನೇ ಹಾಗೂ ನಾಲ್ಕನೇ ಹಂತದ ನಗರಗಳಿಗೂ ಉದ್ಯಮಗಳನ್ನು ವಿಸ್ತರಿಸುವುದೇ ʼಬಿಯಾಂಡ್ ಬೆಂಗಳೂರುʼ ಕಾರ್ಯಕ್ರಮದ ಉದ್ದೇಶವಾಗಿದೆ.
ಹುಬ್ಬಳ್ಳಿ: ಬಿಯಾಂಡ್ ಬೆಂಗಳೂರು (ಬೆಂಗಳೂರಿನ ಆಚೆ) ಪರಿಕಲ್ಪನೆಯಡಿ ವಿವಿಧ ಉದ್ಯಮಗಳಲ್ಲಿ ರಾಜಧಾನಿಯ ಹೊರಗೆ ಸದ್ಯಕ್ಕೆ 7,500 ಕೋಟಿ ರೂ. ವಹಿವಾಟು ನಡೆಯುತ್ತಿದ್ದು, 5 ವರ್ಷಗಳಲ್ಲಿ ಈ ಪ್ರಮಾಣವನ್ನು ಕನಿಷ್ಠ 35,000 ರಿಂದ 40,000 ಕೋಟಿ ರೂ.ಗಳಿಗೆ ಹೆಚ್ಚಿಸುವ ಹೆಗ್ಗುರಿ ಹೊಂದಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಘೋಷಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಬಿಸಿನೆಸ್ ಉದ್ದೇಶಕ್ಕೆ ಸ್ಥಳಾವಕಾಶ ಕಲ್ಪಿಸುವ ಬೃಹತ್ ʼಮಾರ್ವೆಲ್ ಎಕ್ರಾನ್ʼ ಕಟ್ಟಡದ ನಿರ್ಮಾಣ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು “ಬೆಂಗಳೂರು ಹೊರಗೆ ಅಭಿವೃದ್ಧಿಯನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋಗುವ ಮೂಲಕ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ”ಎಂದರು.
ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು, ಮೈಸೂರು, ಶಿವಮೊಗ್ಗ ಮಾತ್ರವಲ್ಲದೆ, ಮೂರನೇ ಹಾಗೂ ನಾಲ್ಕನೇ ಹಂತದ ನಗರಗಳಿಗೂ ಉದ್ಯಮಗಳನ್ನು ವಿಸ್ತರಿಸುವುದೇ ʼಬಿಯಾಂಡ್ ಬೆಂಗಳೂರುʼ ಕಾರ್ಯಕ್ರಮದ ಉದ್ದೇಶವಾಗಿದೆ. ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಆವಿಷ್ಕಾರ ಮುಂತಾದ ಉದ್ಯಮಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ಸ್ಥಾಪನೆಯಾಗುವಂತೆ ಮಾಡುವುದು ಹಾಗೂ ಆ ಮೂಲಕ ಸ್ಥಳೀಯ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರಕಾರದ ಗುರಿಯಾಗಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ಶೀಘ್ರವೇ ಕಾರ್ಯಪಡೆ ವರದಿ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಈಗಾಗಲೇ ಅನೇಕ ಸ್ಟಾರ್‌ಟಪ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಇಲ್ಲಿ ಎಂಥ ನವೋದ್ಯಮಗಳನ್ನು ಸ್ಥಾಪಿಸಬೇಕು? ಯಾವ ರೀತಿಯ ನೆರವು ನೀಡಬೇಕು ಎಂಬ ಬಗ್ಗೆ ಈಗಾಗಲೇ ರಚಿಸಲಾಗಿರುವ ಕಾರ್ಯಪಡೆ ಕಾರ್ಯ ಪ್ರವೃತ್ತವಾಗಿ ಅಧ್ಯಯನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಹುಬ್ಬಳ್ಳಿ ನಗರ ಅತ್ಯುತ್ತಮ ಸ್ಟಾರ್ಟ್ಅಪ್ ಕ್ಲಸ್ಟರ್ ಆಗಿ ರೂಪುಗೊಳ್ಳಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈಗಾಗಲೇ ಕಾರ್ಯಪಡೆ ಕೂಲಂಕಶವಾಗಿ ಅಧ್ಯಯನ ಮಾಡಿದ್ದು, ಶೀಘ್ರದಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿ ಕೈ ಸೇರಿದ ಕೂಡಲೇ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದಡಿ ಏನೆಲ್ಲ ಕೆಲಸಗಳು ಆಗಬೇಕೋ ಎಲ್ಲವನ್ನೂ ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.
ಮುಂಚೂಣೀಯಲ್ಲಿ ಕರ್ನಾಟಕ ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ-ಅಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟವು ಮುಂಚೂಣಿಯಲ್ಲಿದ್ದು, ಇಲ್ಲಿರುವ ಅವಕಾಶಗಳು ದೇಶದ ಬೇರಾವ ರಾಜ್ಯದಲ್ಲೂ ಇಲ್ಲ. ಪ್ರತಿಭಾನ್ವಿತ ಮಾನವ ಸಂಪನ್ಮೂಲಕ್ಕೆ ಕರ್ನಾಟಕ ಹೆಸರುವಾಸಿ. ಕರ್ನಾಟಕದಂಥ ಉದ್ಯಮಸ್ನೇಹಿ ರಾಜ್ಯ ಮತ್ತೊಂದಿಲ್ಲ ಎಂದು ಇದೇ ವೇಳೆ ಡಿಸಿಎಂ ಹೇಳಿದರು.
ಸದ್ಯಕ್ಕೆ ರಾಜ್ಯವು ಐಟಿ-ಬಿಟಿ ಕ್ಷೇತ್ರದಲ್ಲಿ 52 ಶತಕೋಟಿ ಡಾಲರ್ ರಫ್ತು ವಹಿವಾಟು ನಡೆಸುತ್ತಿದೆ. ಈ ಪ್ರಮಾಣವನ್ನು 150 ಶತಕೋಟಿ ಡಾಲರ್‌ಗೆ ಹೆಚ್ಚಿಸಬೇಕು ಎನ್ನುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಒಟ್ಟಾರೆ ನಮ್ಮ ರಾಜ್ಯದ ಡಿಜಿಟಲ್ ಎಕಾನಮಿ ಪ್ರಮಾಣವನ್ನು 300 ಶತಕೋಟಿ ಗೇರಿಸಬೇಕು ಎಂಬ ಮಹತ್ವಾಕಾಂಕ್ಷೆ ಇದೆ ಎಂದು ಡಿಸಿಎಂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಒನ್ ಟ್ರಲಿಯನ್ ಡಿಜಿಟಲ್ ಎಕಾನಮಿ ಗುರಿ ಹೊಂದಿದ್ದಾರೆ. ಇದರಲ್ಲಿ ಕರ್ನಾಟಕವೂ ಈಗಾಗಲೇ ಶೇ.35ರಷ್ಟು ಪಾಲು ಹೊಂದಿದೆ. ಈ ನಿಟ್ಟಿನಲ್ಲಿ ನಾವು 300 ಶತಕೋಟಿ ಡಿಜಿಟಲ್ ಎಕಾನಮಿ ಗುರಿ ಹೊಂದಿದ್ದೇವೆ. ಇದು ನಮ್ಮ ರಾಜ್ಯದ ಬಜೆಟ್‌ಗಿಂತ ದೊಡ್ಡದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದ ಪ್ರತಿ ಮೂಲೆಯಲ್ಲೂ ಉತ್ತಮ ಮಾನವ ಸಂಪನ್ಮೂಲ ಸಿಗುವಂತೆ ಮಾಡಲು ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆಗಳನ್ನು ತರಲಾಗುತ್ತಿದೆ. ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಸರಕಾರ ಮಾಡಿಕೊಂಡಿದೆ. ಗಣಮಟ್ಟದ ಕಲಿಕೆ, ಬೋಧನೆ, ಸಂಶೋಧನೆಗೆ ಒತ್ತು ಕೊಡಲಾಗುವುದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಒಂದು ವರ್ಷ ಇಂಟರ್ನ್‌ಶಿಪ್ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ಹಳ್ಳಿಯಲ್ಲೂ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಅದಕ್ಕಾಗಿ ಸರಕಾರ ಎಲ್ಲ ಪ್ರಯತ್ನಗಳನ್ನು ನಡೆಸಿದೆ ಎಂದು ಅವರು ಹೇಳಿದರು.
ಬೃಹತ್ ಕೈಗಾರಿಕೆ ಖಾತೆ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಕ್ರೆಡಾಯ್ ಮುಖ್ಯಸ್ಥರಾದ ಆಸ್ಟಿನ್ ರಾಕ್, ಕಿಶೋರ್ ಜೈನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬೆಂಗಳೂರು ವಿವಿಯ ಕುಲಪತಿ ಧೋರಣೆ ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ