AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದಿಂದ ಗ್ರಾ.ಪಂಗಳ 2,186 ಕೋಟಿ ಬಾಕಿ ಹಣ ಬಿಡುಗಡೆಗೆ ಸಚಿವ ಈಶ್ವರ ಖಂಡ್ರೆ ಕಸರತ್ತು

15ನೇ ಹಣಕಾಸು ಆಯೋಗದಡಿ ಕರ್ನಾಟಕದ ಗ್ರಾಮ ಪಂಚಾಯತ್​ಗಳಿಗೆ ಹಂಚಿಕೆಯಾಗಿದ್ದ 2186.20 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ತಂತ್ರಾಂಶ ದೋಷದ ನೆಪವೊಡ್ಡಿ ತಡೆಹಿಡಿದಿದೆ. ಇದರಿಂದ ರಾಜ್ಯದ ಗ್ರಾಮೀಣಾಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ಹೀಗಾಗಿ ಈ ವಿಚಾರವಾಗಿ ಸಚಿವ ಈಶ್ವರ ಖಂಡ್ರೆ ರಾಜ್ಯದ ಎಲ್ಲ ಸಂಸದರಿಗೆ ಪತ್ರ ಬರೆದಿದ್ದಾರೆ.

ಕೇಂದ್ರದಿಂದ ಗ್ರಾ.ಪಂಗಳ 2,186 ಕೋಟಿ ಬಾಕಿ ಹಣ ಬಿಡುಗಡೆಗೆ ಸಚಿವ ಈಶ್ವರ ಖಂಡ್ರೆ ಕಸರತ್ತು
ಸಚಿವ ಈಶ್ವರ ಖಂಡ್ರೆImage Credit source: x.com/eshwar_khandre
ಪ್ರಸನ್ನ ಗಾಂವ್ಕರ್​
| Edited By: |

Updated on:Jul 16, 2026 | 7:39 PM

Share

ಮುಖ್ಯಾಂಶಗಳು

  • ಗ್ರಾ.ಪಂ.ಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ತಡೆ
  • ರಾಜ್ಯದ ಎಲ್ಲ ಸಂಸದರಿಗೆ ಪತ್ರ ಬರೆದ ಸಚಿವ ಈಶ್ವರ ಖಂಡ್ರೆ
  • ಕೇಂದ್ರ ಸಚಿವರ ಮೇಲೆ ಒತ್ತಡ ಹೇರುವಂತೆ ಮನವಿ

ಬೆಂಗಳೂರು, ಜುಲೈ 16: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ಬಿಡುಗಡೆಯಾಗಬೇಕಿದ್ದ 2,186.20 ಕೋಟಿ ರೂ ಬಾಕಿ ಅನುದಾನವನ್ನು (15th Finance Commission funds) ಕೇಂದ್ರ ಸರ್ಕಾರ ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಮೇಲೆ ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ (Eshwara Khandre) ರಾಜ್ಯದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭೆ ಸಂಸದರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?

‘‘ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿದ್ದ ನಾನು, ಪ್ರಸ್ತುತ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಪುಟ ದರ್ಜೆ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದು, ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ತಮ್ಮ ಬೆಂಬಲ ಮತ್ತು ಸಹಕಾರವನ್ನು ಬಯಸುತ್ತೇನೆ’’ ಎಂದಿದ್ದಾರೆ.

ಇದನ್ನೂ ಓದಿ: ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ: ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

‘‘ಕೇಂದ್ರ ಸರ್ಕಾರ 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ್ದ 15ನೇ ಹಣಕಾಸು ಆಯೋಗದ ಅನುದಾನದ 2186.20 ಕೋಟಿ ರೂ ತಾಂತ್ರಿಕ ಕಾರಣ ನೀಡಿ ಈವರೆಗೂ ಬಿಡುಗಡೆ ಮಾಡಿಲ್ಲ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪ್ರಸಕ್ತ ವರ್ಷ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಮಳೆ ಕೊರತೆ ಉಂಟಾಗಿದ್ದು, ಮಳೆ ಆಶ್ರಿತ ಪ್ರದೇಶಗಳ ಗ್ರಾಮೀಣ ಜನರು ತೀವ್ರ ಸಂಕಷ್ಟದಲ್ಲಿದ್ದು, ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿದೆ ಎಂಬುದು ತಮಗೂ ತಿಳಿದಿದೆ.’’

ಗ್ರಾಮೀಣಾಭಿವೃದ್ಧಿಗೆ ತೊಡಕಾದ ನಿರ್ಧಾರ

‘‘ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-2026ನೇ ಆರ್ಥಿಕ ವರ್ಷದ 2186.20 ಕೋಟಿ ರೂ. ತಡೆ ಹಿಡಿದಿರುವುದು ಗ್ರಾಮೀಣ ಅಭಿವೃದ್ಧಿಗೆ ತೊಡಕಾಗಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆ ಅನುದಾನಗಳಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣಾ ಮಾರ್ಗಸೂಚಿಗಳ ಅಡಿಯಲ್ಲಿ ನಿಗದಿಪಡಿಸಲಾದ ಎಲ್ಲಾ ನಿಗದಿತ ಷರತ್ತುಗಳನ್ನು ರಾಜ್ಯ ಸರ್ಕಾರವು ಪಾಲಿಸಿದೆ. ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು 08.07.2025 ಮತ್ತು 24.09.2025 ರಂದು ಒದಗಿಸಿರುವುದಲ್ಲದೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಆಗಸ್ಟ್ 2025ರೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಅಪ್ ಲೋಡ್ ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಿದೆ.’’

‘‘ಜೊತೆಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಪ್ರಸ್ತಾಪಿಸಿದ ಎಲ್ಲಾ ಪ್ರಶ್ನೆಗಳಿಗೆ ರಾಜ್ಯವು ಸಕಾರಾತ್ಮಕವಾಗಿ ಉತ್ತರಿಸಿದೆ. ರಾಜ್ಯ ಸರ್ಕಾರದ ನಿರಂತರ ಅನುಸರಣೆಯ ಹೊರತಾಗಿಯೂ, ಕೇಂದ್ರ ಪಂಚಾಯತ್ ರಾಜ್ ಇಲಾಖೆ ತಂತ್ರಾಂಶದಲ್ಲಿನ ತೊಡಕುಗಳನ್ನು ಆಧಾರವಾಗಿಟ್ಟುಕೊಂಡು 2025-26ರ ಸಾಲಿಗೆ ಸಂಬಂಧಿಸಿದಂತೆ 15ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವುದಿಲ್ಲ ಎಂಬ ನಿಲುವು ತಳೆದಿರುವುದರಿಂದ ರಾಜ್ಯದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ.’’

ಇದನ್ನೂ ಓದಿ: ಹೆಚ್ಎಂಟಿ ಕಾರ್ಖಾನೆ ಜಾಗ ವಿವಾದ: ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ

‘‘ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಸಚಿವರಾಗಿರುವ ಹಾಗೂ ರಾಜ್ಯದ ಸಂಸದರಾದ ತಾವು ಕೇಂದ್ರ ಪಂಚಾಯತ್ ರಾಜ್ ಸಚಿವರಿಗೆ ಮನವರಿಕೆ ಮಾಡಿಸಿ, ಕೇಂದ್ರ ಸರ್ಕಾರದಿಂದ ರಾಜ್ಯದ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ 2186.20 ಕೋಟಿ ರೂ. ಹಣ ಬಿಡುಗಡೆ ಮಾಡಿಸುವಂತೆ ಸಚಿವ ಈಶ್ವರ ಖಂಡ್ರೆ ಕೋರಿದ್ದಾರೆ.’’

ಪುತ್ರ ಸೇರಿದಂತೆ ಕೇಂದ್ರ ಸಚಿವರಿಗೂ ಪತ್ರ

ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರಿಗೂ ಪ್ರತ್ಯೇಕವಾಗಿ ಸಚಿವ ಈಶ್ವರ ಖಂಡ್ರೆ ಪತ್ರ ರವಾನಿಸಿದ್ದಾರೆ. ಇದರಲ್ಲಿ ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ತಮ್ಮ ಪುತ್ರ ಹಾಗೂ ಬೀದರ್ ಸಂಸದ ಸಾಗರ್ ಖಂಡ್ರೆಗೂ ಪತ್ರ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:39 pm, Thu, 16 July 26

Follow Us