
ಬೆಂಗಳೂರು, ಜುಲೈ 03: ರಾಜ್ಯದ್ಯಂತ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮನೆ-ಮನೆ ಪರಿಶೀಲನೆ (Gruha Jyothi Revision) ಆರಂಭವಾಗಿದೆ. ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಮಾಹಿತಿ ಸಂಗ್ರಹದ ವೇಳೆ ಜಾತಿ ಪ್ರಮಾಣ ಕೇಳುವ ವಿಷಯ ಚರ್ಚೆ ಹುಟ್ಟುಹಾಕಿತ್ತು. ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣ ಪತ್ರ ಏಕೆ ನೀಡಬೇಕು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆ ಜಾತಿ ಮಾಹಿತಿ ನೀಡುವುದು ಕಡ್ಡಾಯಲ್ಲ ಎಂದು ಬೆಸ್ಕಾಂ (BESCOM) ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೆಸ್ಕಾಂ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಗೃಹಜ್ಯೋತಿ ಮರು ಪರಿಶೀಲನಾ ಪ್ರಕ್ರಿಯೆ ವೇಳೆ ಜಾತಿ ಪ್ರಮಾಣಪತ್ರ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸದ್ಯ ಈ ವಿವಾದಕ್ಕೆ ತೆರೆ ಎಳೆದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಮರು ಪರಿಶೀಲನೆ ವೇಳೆ ಜಾತಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Gruha Jyoti Scheme: ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD ಅರ್ಚನಾ!
ಅಷ್ಟೇ ಅಲ್ಲದೆ, ಅರ್ಜಿಯಲ್ಲಿ ಅಥವಾ ಪರಿಶೀಲನಾ ಫಾರ್ಮ್‌ನಲ್ಲಿ ಜಾತಿ ಮಾಹಿತಿ ನೀಡಲು ಇಷ್ಟವಿಲ್ಲದ ಗ್ರಾಹಕರಿಗಾಗಿ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಈ ಆಯ್ಕೆಯನ್ನು ಗುರುತು ಮಾಡುವ ಮೂಲಕ ಗ್ರಾಹಕರು ತಮ್ಮ ಜಾತಿ ವಿವರವನ್ನು ನೀಡದೆಯೇ ಮರು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಇದನ್ನೂ ಓದಿ: ಗೃಹಜ್ಯೋತಿ ಪರಿಷ್ಕರಣೆ ಎಫೆಕ್ಟ್: ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಕಳೆದ ಬಾರಿ ಕೇವಲ ಆಧಾರ್ ಕಾರ್ಡ್ ನಂಬರ್ ದಾಖಲಿಸಿ ಉಚಿತ ವಿದ್ಯುತ್ ಯೋಜನೆ ಲಾಭ ಪಡೆದುಕೊಳ್ಳಲಾಗಿತ್ತು. ಆದರೆ ಈ ಬಾರಿ ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ, ಪಾನ್ ಕಾರ್ಡ್ ದಾಖಲೆಯನ್ನು ಕೊಡಬೇಕಾಗಿದೆ. ತೀವ್ರ ವಿರೋಧದ ಮಧ್ಯೆ ಇದೀಗ ಜಾತಿ ಮಾಹಿತಿ ನೀಡುವುದು ಕಡ್ಡಾಯಲ್ಲ ಎಂದು ಬೆಸ್ಕಾಂ ಆದೇಶ ಹೊರಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.