AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ, ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ: ಎಲ್ಲರ ಚಿತ್ತ ಕೋರ್ಟ್​ನತ್ತ!

ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದೊಡ್ಡಿರುವ ಈ ಪ್ರಕರಣದ ಬಗ್ಗೆ ಒಂದೆಡೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ರೆ, ಮತ್ತೊಂದೆಡೆ ಇಡಿ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ತನಿಖೆ ಸಿಬಿಐಗೆ ಹಸ್ತಾಂತರಿಸಬೇಕೆಂದು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಇಂದು ಪ್ರಕಟಿಸಲಿದೆ. ಇದರ ಜತೆಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ತೀರ್ಪು ಸಹ ಪ್ರಕಟವಾಗಲಿದೆ. ಹೀಗಾಗಿ ಇಂದು ಹಾಲಿ ಹಾಗೂ ಮಾಜಿ ಸಿಎಂಗೆ ನಿರ್ಣಾಯಕ ದಿನವಾಗಿದೆ.

ಸಿದ್ದರಾಮಯ್ಯ, ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ: ಎಲ್ಲರ ಚಿತ್ತ ಕೋರ್ಟ್​ನತ್ತ!
ಸಿದ್ದರಾಮಯ್ಯ- ಬಿಎಸ್ ಯಡಿಯೂರಪ್ಪ
ರಮೇಶ್ ಬಿ. ಜವಳಗೇರಾ
|

Updated on:Feb 07, 2025 | 7:00 AM

Share

ಬೆಂಗಳೂರು, (ಫೆಬ್ರವರಿ 07): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದ 14 ಸೈಟ್​ಗಳ ತನಿಖೆಯನ್ನ ಸಿಬಿಐಗೆ ವಹಿಸಬೇಕೇ ಬೇಡವೇ ಎನ್ನುವ ಬಗ್ಗೆ ಧಾರವಾಡ ಹೈಕೋರ್ಟ್ ಪೀಠ ಇಂದು(ಫೆಬ್ರವರಿ 07) ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಹೈಕೋರ್ಟ್ ಪೀಠ ಇಂದು ಬೆಳಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸಲಿದ್ದು, ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ಅಗತ್ಯವೇ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದೆ. ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ತೀರ್ಪು ಸಹ ಇಂದೇ ಹೊರಬೀಳಲಿದೆ. ಹೀಗಾಗಿ ಈ ಇಬ್ಬರಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಎಲ್ಲರ ಚಿತ್ತ ಕೋರ್ಟ್​ನತ್ತ ನೆಟ್ಟಿದೆ.

ಲೋಕಾಯುಕ್ತ ಮುಡಾ ತನಿಖೆ ಕೈಗೆತ್ತಿಕೊಂಡ ದಿನದಿಂದಲೂ ದೂರುದಾರ ಸ್ನೇಹಮಯಿ ಕೃಷ್ಣರದ್ದು ಒಂದೇ ಅಸಮಾಧಾನ. ಸಮರ್ಪಕ ತನಿಖೆಯಾಗಲ್ಲ, ನಮಗೆ ನ್ಯಾಯ ಸಿಗಲ್ಲ ಅಂತಿದ್ದ ಸ್ನೇಹಮಯಿ ಕೃಷ್ಣ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರೂ ತನಿಖೆ ಪೂರ್ಣಗೊಳಿಸಿ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ವರದಿಯನ್ನೂ ಹೈಕೋರ್ಟ್ ಪರಿಶೀಲನೆ ನಡೆಸಿದೆ. ಹಾಗೇ ಸ್ನೇಹಮಯಿ ಕೃಷ್ಣ ಅವರ ಪರ ವಕೀಲ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಪರ ವಕೀಲರ ವಾದ-ಪ್ರತಿವಾದವನ್ನು ಕೋರ್ಟ್ ಆಲಿಸಿದ್ದು, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು?

ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿರುವ ವಕೀಲ ಮಣಿಂದರ್ ಸಿಂಗ್, ಸಿಬಿಐ ತನಿಖೆ ಯಾಕೆ ಅಗತ್ಯ ಎನ್ನುವುದರ ಬಗ್ಗೆ ಉಲ್ಲೇಖ ಮಾಡಿದ್ದಾರೆ. 3ಲಕ್ಷ26 ಸಾವಿರ ಮೊತ್ತದ ಜಮೀನು ಸ್ವಾಧೀನಕ್ಕೆ ಬದಲಾಗಿ ದುಬಾರಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ. ಕ್ಯಾಬಿನೆಟ್ ಟಿಪ್ಪಣಿ, ಮುಖ್ಯ ಕಾರ್ಯದರ್ಶಿ ಟಿಪ್ಪಣಿಯೂ ಸಿಎಂ ಪತ್ನಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ಮಣಿಂದರ್ ಸಿಂಗ್ ವಾದ ಮಂಡಿಸಿದ್ದಾರೆ.

ನಿಯಮಗಳನ್ನು ತಮಗಿಷ್ಟ ಬಂದಂತೆ ತಿರುಚಲಾಗಿದೆ. ಪ್ರಭಾವಿಗಳಿರುವ ಈ ಕೇಸಿನಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಆರೋಪಿ ಮುಖ್ಯಮಂತ್ರಿ ಎಂಬ ಒಂದೇ ಕಾರಣಕ್ಕೆ ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಉದಾಹರಣೆಗಳಿವೆ ಎಂದು ಸ್ನೇಹಮಯಿ ಪರ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮುಡಾದ 160 ನಿವೇಶನ​​ಗಳನ್ನು ಜಪ್ತಿಗೆ ಇಡಿ ಆದೇಶ

ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯ

ಮುಖ್ಯಮಂತ್ರಿ ರಕ್ಷಣೆಗೆ ಇಡೀ ಸಚಿವ ಸಂಪುಟವೇ ಒಟ್ಟಾಗಿರುವಾಗ ಸ್ಥಳೀಯ ಪೊಲೀಸರಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯವಿದ್ದು, ಸ್ವತಂತ್ರ ನ್ಯಾಯಸಮ್ಮತ ತನಿಖೆಯಾಗಬೇಕಿದೆ ಎಂದು ದೂರದಾರ ಸ್ನೇಹಮಯಿ ಪರ ವಕೀಲ ಮಣಿಂದರ್ ಸಿಂಗ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ಸಿಬಿಐ ಕೂಡ ಕೇಂದ್ರದ ಹಿಡಿತದಲ್ಲಿದೆ ಎಂದ ಕಪಿಲ್ ಸಿಬಲ್

ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಲೋಕಾಯುಕ್ತ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಿದ್ದಾರೆ. ಆದರೆ ಸಿಬಿಐ ಕೂಡ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ಕಳಂಕಿತ ಎಂದು ಹೇಳಲು ಆಗಲ್ಲ. ಯಾಕಂದ್ರೆ ಲೋಕಾಯುಕ್ತ ಪೊಲೀಸರ ಮೇಲೆ ಲೋಕಾಯುಕ್ತ ಸಂಸ್ಥೆಯ ನಿಗಾ ಇದೆ. ಹೀಗಾಗಿ ಲೋಕಾಯುಕ್ತ ತನಿಖೆ ಸ್ವತಂತ್ರವಾಗಿರಲಿದೆ ಎಂದು ವಾದ ಮಂಡಿಸಿದ್ದಾರೆ.

ಲೋಕಾಯುಕ್ತ ತನಿಖೆಯ ಲೋಪವೆಂದು ಹೇಳಿಲ್ಲ

ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆ ಕೋರಿದರು. ತನಿಖೆ ಆಗುವ ಮೊದಲೇ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಯ ಲೋಪವೇನೆಂದು ಹೇಳಿಲ್ಲ. ಆರೋಪಿ ಸ್ಥಾನದಲ್ಲಿ ಸಿಎಂ ಇದ್ದಾರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದು ತಪ್ಪು ಮೇಲ್ಪಂಕ್ತಿಗೆ ಕಾರಣವಾಗುತ್ತೆ ಎಂದು ಕೋರ್ಟ್​ಗೆ ತಿಳಿಸಿದ್ದಾರೆ.

ಮುಡಾದ 812 ನಿವೇಶನಗಳ ಜಪ್ತಿಗೆ ಮುಂದಾದ ಇಡಿ

ಮುಡಾ ಹಗರಣ ಸಂಬಂಧ ಮುಡಾದ 160 ನಿವೇಶನಗಳ ಜಪ್ತಿಗೆ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಮತ್ತೆ 812 ನಿವೇಶನಗಳನ್ನು ಜಪ್ತಿ ಮಾಡಲು ಮುಂದಾಗಿದೆ. 812 ನಿವೇಶನ ಸಂಬಂಧ ಯಾರೊಬ್ಬರ ಹೆಸರಿಗೆ ಪರಭಾರೆ ಇಲ್ಲವೇ ನೋಂದಣಿ ಮಾಡದಂತೆ ಮೈಸೂರಿನ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿ ಹಾಗೂ ಮುಡಾ ಆಯುಕ್ತರಿಗೆ ಇ.ಡಿ ಪತ್ರ ಬರೆದಿದೆ. ಮುಡಾದ ಮಾಜಿ ಆಯುಕ್ತ ನಟೇಶ್‌ರ ಅಧಿಕಾರಾವಧಿಯಲ್ಲಿ ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಾಜಿ ಸಿಎಂ ಬಿಎಸ್​​ವೈಗೂ ನಿರ್ಣಾಯಕ ದಿನ

ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ತೀರ್ಪು ಸಹ ಇಂದು ಪ್ರಕಟವಾಗಲಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, ಇಂದು ಬೆಳಗ್ಗೆ 10.30ಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಅಂತಿಮ ತೀರ್ಪು ನೀಡಲಿದೆ. ಹೀಗಾಗಿ ಬಿಎಸ್​ವೈಗೆ ಟೆನ್ಷನ್ ಶುರುವಾಗಿದೆ.

ಬಿ.ಎಸ್. ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್​ ಹಾಗೂ ಸರ್ಕಾರದ ಪರ ಹಿರಿಯ ವಕೀಲ ಪ್ರೋ. ರವಿವರ್ಮ ಕುಮಾರ್ ವಾದ ಮಂಡಿಸಿದ್ದು. ಈವರೆಗೆ ಖುದ್ದು ಹಾಜರಾತಿಯಿಂದ ಬಿಎಸ್‌ವೈಗೆ ಕೋರ್ಟ್​ ವಿನಾಯಿತಿ ನೀಡಿತ್ತು. ಅಲ್ಲದೇ ಬಂಧನದಿಂದಲೂ ಮಧ್ಯಂತರ ರಕ್ಷಣೆ ಸಹ ನೀಡಿತ್ತು. ಆದ್ರೆ, ಏನು ತೀರ್ಪು ನೀಡಲಿದೆ ಎನ್ನುವುದು ಕಾದುನೋಡಬೇಕಿದೆ.

Published On - 7:00 am, Fri, 7 February 25