
ಬೆಂಗಳೂರು, (ನವೆಂಬರ್ 20): ಎಥೆನಾಲ್ ಉತ್ಪಾದನೆ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ದೇಶದಲ್ಲಿ ಸಕ್ಕರೆ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 2026-27ನೇ ಸಾಲಿನಲ್ಲಿ ಎಥೆನಾಲ್ ಉತ್ಪಾದಿಸುವುದನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿ ಇಂದು (ನವೆಂಬರ್ 20) ಆದೇಶ ಹೊರಡಿಸಿದೆ. ಇದರೊಂದಿಗೆ ಕೇಂದ್ರದ ಆದೇಶ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದ ಆಸ್ಕಿನ್ಸ್ ಬಯೋ ಫ್ಯುಯೆಲ್ ಪ್ರೈವೆಟ್.ಲಿಮಿಟೆಡ್ ಗೆ ಹಿನ್ನಡೆಯಾಗಿದೆ.
ಕೇಂದ್ರ ಸರ್ಕಾರದ 2026ರ ಅಕ್ಟೋಬರ್ 22ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆಸರ್ಸ್ ಆಸ್ಕಿನ್ಸ್ ಬಯೋಫ್ಯುಯೆಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಬ್ರಹ್ಮಾನಂದಸಾಗರ ಬೆಲ್ಲದ ಕೈಗಾರಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ 2026-27ನೇ ಸಾಲಿನ ಕಬ್ಬು ಉತ್ಪಾದನೆಯ ಅಂದಾಜು ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿನ ಸಕ್ಕರೆ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಬಂಧ ವಿಧಿಸಿದೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ಪರಿಸ್ಥಿತಿಯಲ್ಲಿ ಅರ್ಜಿದಾರರ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದಿದೆ.
ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಕಂಪೆನಿಯ ಪರ ವಕೀಲರು, ನಮ್ಮ ಕಕ್ಷಿದಾರರು ಸ್ವತಂತ್ರ ಡಿಸ್ಟಿಲರಿಯಾಗಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆಯಾಗುವ ಶೇ.95ರಷ್ಟು ಕಬ್ಬಿನ ಪ್ರದೇಶವನ್ನು ಬಳಸದೆ, ರೈತರ ವಿವೇಚನೆಗೆ ಬಿಟ್ಟಿರುವ ಶೇ.5ರಷ್ಟು ಕಬ್ಬನ್ನು ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಈ ಹಿಂದೆಯೂ ವಿಭಾಗೀಯ ಪೀಠ ತಮಗೆ ಅನುಮತಿ ನೀಡಿದ್ದು, ಈಗ ಉತ್ಪಾದನೆ ಸ್ಥಗಿತಗೊಂಡರೆ ಆರ್ಥಿಕ ನಷ್ಟದ ಜೊತೆಗೆ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ಸಕ್ಕರೆ (ನಿಯಂತ್ರಣ) ಆದೇಶ-2025ರ ಅಡಿಯಲ್ಲಿ ಸಾರ್ವಜನಿಕರಿಗೆ ನ್ಯಾಯಯುತ ಬೆಲೆಯಲ್ಲಿ ಸಕ್ಕರೆ ಲಭ್ಯವಾಗುವಂತೆ ನೋಡಿಕೊಳ್ಳಲು ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಸರ್ಕಾರದ ಆದೇಶಕ್ಕೆ ತಡೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು. ಈ ವಾದ, ಪ್ರತಿವಾದ ಆಲಿಸಿದ ಪೀಠ, ಆಸ್ಕಿನ್ಸ್ ಬಯೋ ಫ್ಯುಯೆಲ್ ಪ್ರೈ.ಲಿ ಅರ್ಜಿ ವಜಾ ಮಾಡಿದ್ದು, ಅರ್ಜಿದಾರ ಕಂಪನಿಗಳು ಕಾನೂನಿನಲ್ಲಿ ಲಭ್ಯವಿರುವ ಇತರೆ ವಿನಾಯಿತಿ, ಇಲ್ಲವೇ ಅನುಮತಿಗಾಗಿ ಕೇಂದ್ರ ಸರ್ಕಾರದ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಬಹುದಾಗಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಆದೇಶವು ಕೇವಲ ಕಬ್ಬಿನ ಹಾಲು ಮತ್ತು ಬಿ-ಹೆವಿ’ ಮೊಲಾಸಸ್ ಬಳಕೆಗೆ ಮಾತ್ರ ಸೀಮಿತವಾಗಿದ್ದು, ‘ಸಿ-ಹೆವಿ’ ಮೊಲಾಸಸ್‌ನಿಂದ ಎಥೆನಾಲ್ ಉತ್ಪಾದಿಸಲು ಯಾವುದೇ ನಿರ್ಬಂಧವಿಲ್ಲ ಎಂಬುದನ್ನು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.