
ಬೆಂಗಳೂರು, (ಮೇ 29): ಹುಬ್ಬಳ್ಳಿ ಗಲಭೆ ಪ್ರಕರಣ (Hubballi Riot) ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ. ಸಂಘಟನಾ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ 43 ಪ್ರಕರಣಗಳನ್ನು ಅಕ್ಟೋಬರ್ 10, 2024 ರಂದು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಗಿರೀಶ್ ಭಾರದ್ವಾಜ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠ ಇಂದು (ಮೇ 29) ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಂಭವಾಗಿದೆ.
ಇನ್ನು ಈ ಬಗ್ಗೆ ವರದಿಗಾರರು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ, ಸರ್ಕಾರದ ಆದೇಶವನ್ನು ಕೋರ್ಟ್ ರದ್ದು ಮಾಡಿರುವುದು ಗೊತ್ತಿಲ್ಲ ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ. ಮತ್ತೊಂದೆಡೆ ಸಿಟಿ ರವಿ ಪ್ರತಿಕ್ರಿಯಿಸಿ, ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ . ಆ್ಯಂಟಿ ಕಮ್ಯುನಲ್ ಫೋರ್ಸ್ ತರುತ್ತಾರೆ. ಇನ್ನೊಂದೆಡೆ ಕೋಮು ಸಂಘರ್ಷ ಮಾಡುವವರಿಗೆ ರಾಜಾಶ್ರಯ ಕೊಡುತ್ತಾರೆ. ಕ್ಯಾಬಿನೆಟ್ ಗೆ ಕೋಮು ವೈರಸ್ ಅಂಟಿಕೊಂಡಿದೆ. ಹಿಂದೂ ಸತ್ತರೆ ರೌಡಿ ಶೀಟರ್, ಹಿಂದುಯೇತರರಾದರೆ ಕರುಳು ಕಿತ್ತು ಬರುತ್ತದೆ. ಹೀಗಾಗಿ ನ್ಯಾಯಾಲಯ ಕೊಟ್ಟ ತೀರ್ಪು ಸಮಯೋಚಿತ .ಕೇಸ್ ವಾಪಸ್ ಪಡೆದ ಪರಿಣಾಮವೇ ಉದಯಗಿರಿ ಘಟನೆ ನಡೆಯಿತು. ಯಾವುದನ್ನು ರಾಜಕೀಯಕ್ಕೆ ಬಳಸಬಾರದು ಎಂಬ ಪ್ರಜ್ಞೆ ಇಲ್ಲ. ಹಾಗಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಐಎಲ್ ವಿಚಾರಣೆಯ ಸಂದರ್ಭದಲ್ಲೇ ಕೋರ್ಟ್, ಸಚಿವ ಸಂಪುಟದ ಕ್ರಮ ನಿಯಮಬಾಹಿರವಾಗಿದ್ದರೆ ಒಪ್ಪುವುದಿಲ್ಲ, ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡುವುದಿಲ್ಲ ಎಂದು ಹೇಳಿತ್ತು. ಅಲ್ಲದೇ ಅರ್ಜಿದಾರರ ಪರ ವಕೀಲರು ಪ್ರಭಾವಿ ವ್ಯಕ್ತಿಗಳೂ ಸೇರಿದಂತೆ ಕೆಲವು ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಅಪರಾಧ ದಂಡ ಸಂಹಿತೆ ಸೆಕ್ಷನ್ 321ಕ್ಕೆ ವಿರುದ್ಧವಾಗಿ ಸರಕಾರ ಹಿಂಪಡೆದಿದೆ ಎಂದು ಹೇಳಿರುವುದು ಮೇಲ್ನೋಟಕ್ಕೆ ಸಮರ್ಥನೀಯವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಸಿದ್ದರಾಮಯ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ತೀರ್ಮಾನಿಸಿದ ಬೆನ್ನಲ್ಲೇ ವಿರೋಧ ಪಕ್ಷವಾದ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಸರ್ಕಾರದ ನಡೆ ಬಗ್ಗೆ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸುಳ್ಳು ಕೇಸ್ ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದಾರೆ. ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳುವ ಅವಕಾಶವಿದೆ. ಎಲ್ಲರ ಕಾಲದಲ್ಲೂ ಪ್ರಕರಣ ವಾಪಸ್ ಪಡೆದ ಉದಾಹರಣೆಗಳಿವೆ. ಸುಳ್ಳು ಕೇಸ್ ಇದೆ ಎಂಬ ಕಾರಣಕ್ಕೆ ವಾಪಸ್ ಪಡೆಯಲಾಗಿದೆ. ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೇಸ್ ಹಿಂಪಡೆಯುತ್ತೇವೆ. ನಮ್ಮ ಕ್ಯಾಬಿನೆಟ್ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ ಎಂದು ಎಂದಿದ್ದರು.
ಏಪ್ರಿಲ್ 16, 2022 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್ ದಾಖಲಾಗಿ 155 ಮದಿ ಮೇಲೆ ಕೇಸ್ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.
ಸೆಪ್ಟೆಂಬರ್ 2024 ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಪತ್ರ ಬರೆದಿದ್ದ ಡಿಜಿ-ಐಜಿ ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರಿಂದ ವಿಪಕ್ಷ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕೇಸ್ ವಾಪಸ್ ಪಡೆದುಕೊಂಡು ಆದೇಶ ಹೊರಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Thu, 29 May 25