ರಾಜ್ಯದಲ್ಲಿ ಕೊರೊನಾ 2ನೇ ಅಲೆ ವೇಳೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 50 ಮಕ್ಕಳು ಪತ್ತೆ: ಶಶಿಕಲಾ ಜೊಲ್ಲೆ
ಅನಾಥ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಹಾಗೂ ಬಾಲಸೇವಾ ಯೋಜನೆ ಅಡಿಯಲ್ಲಿ ಮಾಸಿಕ 3,500ರೂಪಾಯಿ ನೀಡಲಾಗುವುದು, ಪೋಷಕರನ್ನು ಕಳೆದುಕೊಂಡ 21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು: ಶಶಿಕಲಾ ಜೊಲ್ಲೆ
ಬೆಂಗಳೂರು: ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಆತಂಕ ಸೃಷ್ಟಿಸಲು ಮಧ್ಯವಯಸ್ಕರ ಮರಣವೂ ಒಂದು ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದು. ಕೊರೊನಾ ಸೋಂಕು ವೃದ್ಧರಿಗೆ, ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚು ಅಪಾಯಕಾರಿ ಎಂದು ನಂಬಿಕೊಂಡಿದ್ದು ಎರಡನೇ ಅಲೆ ವೇಳೆಗೆ ಅಪ್ರಸ್ತುತ ಎನ್ನುವಂತಾಯಿತು. ದೇಶದಲ್ಲಿ ಎಷ್ಟೋ ಕುಟುಂಬಗಳ ಆಧಾರಸ್ತಂಭಗಳಾಗಿದ್ದವರೇ ಈ ಬಾರಿ ಪ್ರಾಣ ತ್ಯಜಿಸಿದ್ದಾರೆ. ವೃದ್ಧರು ಮಕ್ಕಳನ್ನು ಕಳೆದುಕೊಂಡು ತಬ್ಬಿಬ್ಬಾಗಿದ್ದಾರೆ. ಅನೇಕ ಮಕ್ಕಳು ತಂದೆ, ತಾಯಿಯರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಇದೀಗ ಅಂತಹ ತಬ್ಬಲಿ ಮಕ್ಕಳ ಪೋಷಣೆ ಮಾಡುವ ಹೊಣೆಯೂ ವ್ಯವಸ್ಥೆಯ ಮೇಲಿದೆ. ಪ್ರಸ್ತುತ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಸುಮಾರು 50 ಮಕ್ಕಳನ್ನು ಕರ್ನಾಟಕದಲ್ಲಿ ಪತ್ತೆಹಚ್ಚಲಾಗಿದೆ ಎಂದು ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ಈವರೆಗೆ ಕೊರೊನಾ ಎರಡನೇ ಅಲೆಯಿಂದ ಇಬ್ಬರು ಪೋಷಕರನ್ನೂ ಕಳೆದುಕೊಂಡ ಒಟ್ಟು 50 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಈ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಹಾಗೂ ಬಾಲಸೇವಾ ಯೋಜನೆ ಅಡಿಯಲ್ಲಿ ಮಾಸಿಕ 3,500ರೂಪಾಯಿ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಪೋಷಕರನ್ನು ಕಳೆದುಕೊಂಡ 21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಒಂದುವೇಳೆ ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಸಾಧ್ಯವಾಗದೇ ಇದ್ದಲ್ಲಿ, ಅಂತಹ ಮಕ್ಕಳನ್ನು ದತ್ತು ಯೋಜನೆಯ ಭಾಗವಾಗಿಸಲಾಗುವುದು. ಸಹೃದಯರು ಅಂತಹ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಮುಂದೆ ಬಂದಲ್ಲಿ ಸರ್ಕಾರ ಅದಕ್ಕೆ ಸೂಕ್ತ ವೇದಿಕೆಯನ್ನೂ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೂರನೇ ಅಲೆ ಬಗ್ಗೆ ನಿಗಾ ವಹಿಸಲಾಗುತ್ತಿದೆ ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತೊಂದರೆ ಉಂಟುಮಾಡಬಹುದು ಎಂಬ ಲೆಕ್ಕಾಚಾರವಿರುವುದರಿಂದ ಆ ಬಗ್ಗೆ ಮಾತನಾಡಿದ ಶಶಿಕಲಾ ಜೊಲ್ಲೆ, ಮೂರನೇ ಅಲೆ ಎದುರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಾಲ್ಲೂಕು ಮಟ್ಟದಲ್ಲಿಯೇ ತಜ್ಞ ವೈದ್ಯರನ್ನು ಗುರುತಿಸುವ ಕೆಲಸ ಆಗುತ್ತಿದೆ. ಮಕ್ಕಳಿಗೆಂದೇ ಪ್ರತ್ಯೇಕ ಘಟಕ ಸ್ಥಾಪಿಸಲು ಸಾಕಷ್ಟು ಸಲಹೆ ಬಂದಿದೆ. ಅದನ್ನು ಮುಖ್ಯಮಂತ್ರಿ ಬಳಿ ತುರ್ತಾಗಿ ಚರ್ಚಿಸಿ ನಿರ್ಧರಿಸುತ್ತೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,419ಬೆಡ್ಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 149 ವೆಂಟಿಲೇಟರ್ ಬೆಡ್ ಹಾಗೂ 430 ಹೆಚ್ಡಿಯು ಬೆಡ್ ಇವೆ. ಇದರ ಬಗ್ಗೆ ಸವಿಸ್ತಾರ ಚರ್ಚೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇಲ್ಲಿಯ ತನಕ 2.38ಲಕ್ಷ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅದರಲ್ಲಿ 0-9ರ್ಷ ವಯೋಮಾನದ 67,687 ಮಕ್ಕಳು ಹಾಗೂ 9-18 ವರ್ಷ ವಯೋಮಾನದ 1,70,565 ಮಕ್ಕಳು ಇದ್ದರು. ಈ ಪೈಕಿ ಸುಮಾರು 51 ಮಕ್ಕಳು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳನ್ನು ತಿಳಿಸಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿ ಸುಮಾರು 30 ಮಕ್ಕಳು ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Coronavirus Third Wave: ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ; ಐಐಟಿ ಅಧ್ಯಯನ
ದೇಶದಲ್ಲಿ ಕೊವಿಡ್ನಿಂದ 577 ಮಕ್ಕಳು ಅನಾಥರಾಗಿದ್ದಾರೆ: ಸಚಿವೆ ಸ್ಮೃತಿ ಇರಾನಿ