AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಮೆರಿಕ, ಬ್ರಿಟನ್ ಮಾವಿನ ಮಾರುಕಟ್ಟೆಯತ್ತ ಮುಖ ಮಾಡಿದ ಕರ್ನಾಟಕ!

ಪಶ್ಚಿಮ ಏಷ್ಯಾದ ಪ್ರಸಕ್ತ ಬಿಕ್ಕಟ್ಟಿನಿಂದಾಗಿ ಕರ್ನಾಟಕದ ಮಾವು ಉದ್ಯಮವು ಅಮೆರಿಕ ಮತ್ತು ಬ್ರಿಟನ್ ಮಾರುಕಟ್ಟೆಗಳತ್ತ ಮುಖ ಮಾಡಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸಿರುವ ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರಿಗೆ ನೆರವಾಗಲು ಸರ್ಕಾರ ನೇರ ಮಾರುಕಟ್ಟೆ ಮತ್ತು ಸುಧಾರಿತ ರಫ್ತು ಸಂಸ್ಕರಣಾ ಕೇಂದ್ರಗಳನ್ನು ಆರಂಭಿಸಿದೆ.

ಬೆಂಗಳೂರು: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಮೆರಿಕ, ಬ್ರಿಟನ್ ಮಾವಿನ ಮಾರುಕಟ್ಟೆಯತ್ತ ಮುಖ ಮಾಡಿದ ಕರ್ನಾಟಕ!
ಮಾವುImage Credit source: PTI
ಗಣಪತಿ ಶರ್ಮಾ
|

Updated on: Jun 02, 2026 | 8:04 AM

Share

ಬೆಂಗಳೂರು, ಜೂನ್ 2: ಗಲ್ಫ್ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತು ವಿಮಾನ ಹಾರಾಟಗಳ ರದ್ದತಿಯಿಂದಾಗಿ ಕರ್ನಾಟಕದ (Karnataka) ಮಾವು (Mango) ವಲಯ ಈ ಬಾರಿ ಹೊಸ ಮಾರುಕಟ್ಟೆಗಳತ್ತ ಮುಖ ಮಾಡಿದೆ. ಸಾಂಪ್ರದಾಯಿಕ ಗಲ್ಫ್ ಮಾರುಕಟ್ಟೆಗಳಲ್ಲಿ ಎದುರಾಗಿರುವ ವ್ಯಾಪಾರ ಸಮಸ್ಯೆಗಳು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಬೆಳೆ ನಷ್ಟದ ನಡುವೆಯೂ, ಮಾವು ಬೆಳೆಗಾರರ ಕೈಹಿಡಿಯಲು ಸರ್ಕಾರವು ಅಮೆರಿಕ (US), ಬ್ರಿಟನ್ (UK), ಆಸ್ಟ್ರೇಲಿಯಾ ಮತ್ತು ಯುರೋಪ್ ಮಾರುಕಟ್ಟೆಗಳ ಮೊರೆ ಹೋಗಿದೆ. ಈ ಬಾರಿ ರಾಜ್ಯದಿಂದ ಈಗಾಗಲೇ 183 ಟನ್‌ಗೂ ಹೆಚ್ಚು ಮಾವನ್ನು ಈ ಪಾಶ್ಚಿಮಾತ್ಯ ದೇಶಗಳಿಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ.

ಮುಖ್ಯಾಂಶಗಳು

  • ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಯುರೋಪ್ ದೇಶಗಳಿಗೆ 183 ಟನ್‌ಗೂ ಅಧಿಕ ಕರ್ನಾಟಕದ ಮಾವು ರಫ್ತು.
  • ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳ ಕಠಿಣ ಸುರಕ್ಷತಾ ನಿಯಮಗಳಿಗೆ ಪೂರಕವಾಗಿ ಕರ್ನಾಟಕದಲ್ಲಿ ಮಾವು ಸಂಸ್ಕರಣೆ.
  • ಸಂಕಷ್ಟದಲ್ಲಿರುವ ಬೆಳೆಗಾರರಿಗೆ ತುರ್ತು ಪರಿಹಾರ ನಿಧಿಗೆ ಸರ್ಕಾರದ ಸಿದ್ಧತೆ.

ರಫ್ತಿಗಾಗಿ ಕಠಿಣ ಸುರಕ್ಷತಾ ತಪಾಸಣೆ

ಈ ಪ್ರೀಮಿಯಂ ಮಾರುಕಟ್ಟೆಗಳಿಗೆ ಮಾವು ಪೂರೈಕೆ ಮಾಡಬೇಕಾದರೆ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಯುರೋಪ್ ಮತ್ತು ಯುಕೆ ದೇಶಗಳಿಗೆ ರಫ್ತು ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದ್ದು, ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳು ವಿಶೇಷ ಕೀಟ ಮುಕ್ತ ಪ್ರಕ್ರಿಯೆಯನ್ನು ಬಯಸುತ್ತವೆ. ಇದಕ್ಕಾಗಿ ಮಾವುಗಳನ್ನು ಪ್ಯಾಕ್ ಮಾಡಿದ ನಂತರ ವಿಶೇಷ ಕೇಂದ್ರಗಳಲ್ಲಿ ‘ಗಾಮಾ ವಿಕಿರಣ’ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಬಿಸಿ ಮುದ್ದು ಗಂಗಾಧರ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಜಪಾನ್ ಕೂಡ ಭಾರತೀಯ ಮಾವುಗಳನ್ನು ತಿರಸ್ಕರಿಸಿಲ್ಲ. ಬದಲಿಗೆ ಇದೇ ರೀತಿಯ ಕಠಿಣ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಯುಕೆ ಮಾರುಕಟ್ಟೆಯಲ್ಲಿ ಮೆಕ್ಸಿಕೋ ಅಥವಾ ಚೀನಾದ ರುಚಿಯಿಲ್ಲದ ಮಾವುಗಳಿದ್ದು, ನಮ್ಮ ದೇಶದ ಅಲ್ಫಾನ್ಸೋ, ಮಲ್ಲಿಕಾ ಮತ್ತು ಕೇಸರ್ ತಳಿಗಳಿಗೆ ಅಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಮಾವು ಬೆಳೆ ಗಣನೀಯ ಕುಸಿತ

ರಾಜ್ಯದಲ್ಲಿ ಈ ವರ್ಷ ಮಾವು ಉತ್ಪಾದನೆ ಕಳೆದ ವರ್ಷದ 12-14 ಲಕ್ಷ ಟನ್‌ಗಳಿಂದ 10-12 ಲಕ್ಷ ಟನ್‌ಗಳಿಗೆ ಕುಸಿದಿದೆ. ಆದಾಗ್ಯೂ, ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶವು 1,39,000 ಹೆಕ್ಟೇರ್‌ನಿಂದ 1,45,000 ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಇಬ್ರಾಹಿಂ ಮೈಗೂರ್ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಕೊಪ್ಪಳದಲ್ಲಿ ಕೇಸರ್ ಮಾವು ಬೆಳೆ ಪ್ರದೇಶ 1,500 ರಿಂದ 2,500 ಹೆಕ್ಟೇರ್‌ಗೆ ವಿಸ್ತರಿಸಿದೆ. ಕೋಲಾರ ಮತ್ತು ರಾಮನಗರದಲ್ಲೂ ಮಾವಿನ ತೋಟಗಳು ಹೆಚ್ಚುತ್ತಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೋಲಾರ ಮತ್ತು ಚಿಕ್ಕಬಳ್ಳಾಪುರ (ರಾಜ್ಯದ ಶೇ 60 ರಷ್ಟು ಮಾವು ಬೆಳೆಯುವ ಜಿಲ್ಲೆಗಳು) ಭಾಗದ ರೈತರಿಗಾಗಿ ಸರ್ಕಾರ ಉಚಿತ ಸ್ಟಾಲ್‌ಗಳನ್ನು ತೆರೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್‌ಗೆ ಭಾರತೀಯ ಮಾವಿನ ರಫ್ತು ತಾತ್ಕಾಲಿಕ ಸ್ಥಗಿತ: ರೈತರಲ್ಲಿ ಆತಂಕ 

ರಫ್ತು ಸುಲಭಗೊಳಿಸಲು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಚಿಕ್ಕಬಳ್ಳಾಪುರದ ಮಡಿಕೆರೆ ಕೇಂದ್ರದಲ್ಲಿ ಈಗಾಗಲೇ 85 ಟನ್ ಮಾವನ್ನು ರಫ್ತಿಗಾಗಿ ಸಂಸ್ಕರಿಸಲಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ ಮಾವಿನ ಬಾರ್, ಪಲ್ಪ್ ಮತ್ತು ಉಪ್ಪಿನಕಾಯಿ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಭಾಗದ ರೈತರ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಚನ್ನಪಟ್ಟಣದ ಬೈರಪಟ್ಟಣದಲ್ಲಿ ಈ ವರ್ಷವೇ ನೂತನ ಪ್ಯಾಕಿಂಗ್ ಮತ್ತು ಸಂಸ್ಕರಣಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಭಾರತವು ಜಾಗತಿಕವಾಗಿ ಶೇ 45 ರಷ್ಟು ಮಾವು ಉತ್ಪಾದಿಸುವ ಮೂಲಕ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದು, 2025 ರ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ 3 ನೇ ಸ್ಥಾನ ಪಡೆದಿದೆ ಎಂದು ಮಾವು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿಆರ್ ವೇದಮೂರ್ತಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More