ಚೊಂಬನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯಿಂದ ಪಿಕ್ಪಾಕೆಟ್ ಜಾಹೀರಾತು: ಡಿಕೆ ಶಿವಕುಮಾರ್ ತಿರುಗೇಟು
ನಾವು ಪಿಕ್ಪಾಕೆಟ್ ಮಾಡಿದ್ದೇವೆ ಎಂದು ಜಾಹೀರಾತು ನೀಡಿದ್ದಾರೆ. ಬಿಜೆಪಿಯವರು ಮಾಡಿದ ಪಿಕ್ ಪಾಕೆಟ್ ನಮ್ಮ ಮೇಲೆ ಹಾಕ್ತಿದ್ದಾರೆ. ಬಿಜೆಪಿಯವರಿಗೆ ನಾವು ನೀಡಿದ ಚೊಂಬನ್ನು ಅರಗಿಸಿಕೊಳ್ಳಲು ಆಗ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಜತೆಗೆ, ದೇವೇಗೌಡರು ಬೆಂಗಳೂರು ಗ್ರಾಮಾಂತರದ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 23: ಲೋಕಸಭೆ ಚುನಾವಣೆಯ (Lok Sabha Elections) ಸಂದರ್ಭದಲ್ಲಿ ಜಾಹೀರಾತುಗಳ ಮೂಲಕ ಆರೋಪ – ಪ್ರತ್ಯಾರೋಪ ಮಾಡುವ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ತಂತ್ರ ಮುಂದುವರಿದಿದೆ. ಈ ಮಧ್ಯೆ, ಕಾಂಗ್ರೆಸ್ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಟೀಕಿಸಿ ಬಿಜೆಪಿ ನೀಡಿರುವ ಜಾಹೀರಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ನೀಡಿರುವ ಚೊಂಬಿನ ಜಾಹೀರಾತನ್ನು ಅರಗಿಸಿಕೊಳ್ಳುವುದು ಬಿಜೆಪಿಯವರಿಂದ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ಮೇಲೆ ಆರೋಪ ಮಾಡಿ ಜಾಹೀರಾತು ನೀಡುತ್ತಿದ್ದಾರೆ ಎಂದು ಹೇಳಿದರು.
ನಾವು ಪಿಕ್ಪಾಕೆಟ್ ಮಾಡಿದ್ದೇವೆ ಅಂತ ಜಾಹೀರಾತು ನೀಡಿದ್ದಾರೆ. ಬಿಜೆಪಿಯವರು ಮಾಡಿದ ಪಿಕ್ ಪಾಕೆಟ್ ನಮ್ಮ ಮೇಲೆ ಹಾಕ್ತಿದ್ದಾರೆ. ಬಿಜೆಪಿಯವರಿಗೆ ನಾವು ನೀಡಿದ ಚೊಂಬನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಬರ ಪರಿಹಾರ ನೀಡುವುದಾಗಿ ಕೇಂದ್ರ ಹೇಳಿದೆ, ನಮಗೆ ಪರಿಹಾರ ಸಿಗುತ್ತೆ. ನಮಗೆ ನ್ಯಾಯ ಸಿಗುತ್ತೆ. ಸಾಂಕೇತಿಕವಾಗಿ ಹೋರಾಟ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.
ತಮಿಳುನಾಡಿನ ಸಂಸದ, ವಿಸಿಕೆ ಪಕ್ಷದ ಅಧ್ಯಕ್ಷ ಅತುಲ್ ತಿರುಮಲವರನ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ತಮಿಳುನಾಡಿನ ವಿಸಿಕೆ- ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದಿಂದ ಕಾಂಗ್ರೆಸ್ ಗೆ ಬೆಂಬಲ ದೊರೆತಿದೆ. ಕರ್ನಾಟಕ ಹಲವು ಕ್ಷೇತ್ರದಲ್ಲಿ ಸ್ವರ್ಧೆ ಮಾಡಿದ್ದ ವಿಸಿಕೆ ಪಕ್ಷದ ಅಭ್ಯರ್ಥಿಗಳಿಂದ ನಿವೃತ್ತಿ ಘೋಷಣೆ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
‘ದೇವೇಗೌಡರನ್ನು ಹಾಸನದವರಲ್ಲ, ನಾವು ಪ್ರಧಾನಿ ಮಾಡಿದ್ದು’
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ವಿಶೇಷ ಗಮನ ಹರಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಚಾರ ಮಾಡಲು ಎಲ್ಲರಿಗೂ ಅವಕಾಶ ಇದೆ. ನಾವು ಈಗಿನಿಂದ ರಾಜಕೀಯ ಮಾಡುತ್ತಿರುವುದಲ್ಲ. ಕೋವಿಡ್ ಸಮಯದಲ್ಲಿ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪರ ಮತ ಪ್ರಚಾರ ಮಾಡುವಾಗ ಇನ್ನೆಷ್ಟು ದಿನ ಬದುಕಿರುತ್ತೇನೆಯೋ ಅಂತ ಭಾವುಕರಾದ ದೇವೇಗೌಡ
ದೇವೇಗೌಡರು ಕಣ್ಣೀರು ಹಾಕಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿ, ಅವರನ್ನು ಪ್ರಧಾನಿ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ದೇವೇಗೌಡರನ್ನು ಪ್ರಧಾನಿ ಮಾಡಿದ್ದೇ ವಿನಹ ಹಾಸನದವರಲ್ಲ. ಅವರ ಕೊಡುಗೆ ಬಗ್ಗೆ ಚರ್ಚೆ ಮಾಡಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ