
ಬೆಂಗಳೂರು, ಆಗಸ್ಟ್ 01: ನಾಳೆ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ (Police Constable Recruitment) ಲಿಖಿತ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಶುಭಾಶಯ ತಿಳಿಸಿದ್ದಾರೆ. ನೇಮಕಾತಿ ಪರೀಕ್ಷೆ ಆಯೋಜನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದ್ದು, ಯುವ ಜನರ ಭವಿಷ್ಯ ಭದ್ರಪಡಿಸಲು ಸಂಪೂರ್ಣ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಯಾವುದೇ ರೀತಿಯ ಅಕ್ರಮದ ಬಗ್ಗೆ ಸುಳಿವಿದ್ದರೆ ನೇರವಾಗಿ ಸಂಪರ್ಕಿಸುವಂತೆ ಉದ್ಯೋಗಾಂಕ್ಷಿಗಳಿಗೆ ಗೃಹ ಸಚಿವರು ಕರೆ ನೀಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ‘ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲು ಪ್ರಶ್ನೆಪತ್ರಿಕೆಯು ಪರೀಕ್ಷಾ ಕೇಂದ್ರವನ್ನು ತಲುಪಿದ ನಂತರ ಪ್ರಾಂಶುಪಾಲರ ನೇತೃತ್ವದಲ್ಲಿ ಹಾಗೂ ಐವರು ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಸೀಲ್ ತೆರೆಯುವಂತೆ ಆದೇಶಿಸಲಾಗಿದೆ. ನಕಲು ಎಸಗಲು ಅವಕಾಶ ನೀಡದಂತೆ ವಿವಿಧ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ನಿರ್ಬಂಧಿಸಲಾಗಿದೆ. ಆದರೆ ಧಾರ್ಮಿಕ ನಂಬಿಕೆಯನ್ನು ಗೌರವಿಸಲು ಶಿವದಾರ, ಜನಿವಾರ, ಮಾಂಗಲ್ಯಸರ ಮುಂತಾದವುಗಳನ್ನು ಧರಿಸಲು ಅನುಮತಿ ನೀಡಲಾಗಿದೆ’ ಎಂದಿದ್ದಾರೆ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪರೀಕ್ಷೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲು ಪ್ರಶ್ನೆಪತ್ರಿಕೆಯು ಪರೀಕ್ಷಾ ಕೇಂದ್ರವನ್ನು ತಲುಪಿದ ನಂತರ ಪ್ರಾಂಶುಪಾಲರ… pic.twitter.com/cyX7Zo9Bv6
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 1, 2026
‘ಈ ಹಿಂದೆ ವಿವಿಧ ನೇಮಕಾತಿಗಳಲ್ಲಿ ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಯನ್ನು ತಿದ್ದಿದ ಆರೋಪಗಳು ಕೇಳಿಬಂದಿದ್ದರಿಂದ, ಈ ಬಾರಿ ಒಎಂಆರ್ ಶೀಟ್‌ನಲ್ಲಿ ಐದನೇ ಆಯ್ಕೆಯನ್ನು ನೀಡಲಾಗಿದೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದವರು ಒಎಂಆರ್ ಶೀಟ್‌ನಲ್ಲಿ ಖಾಲಿ ಬಿಡುವಂತಿಲ್ಲ. 5ನೇ ಕಾಲಂ ಅನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು. ಯಾವುದೇ ಉತ್ತರ ಗುರುತಿಸದೆ ಇದ್ದಲ್ಲಿ ಅರ್ಧ ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪರೀಕ್ಷೆ ಮುಗಿದ 30 ನಿಮಿಷದೊಳಗೆ ಒಎಂಆರ್ ಶೀಟ್ ಅನ್ನು ಕೆಇಎ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಪ್ರತಿ ಪರೀಕ್ಷಾ ಕೊಠಡಿಯಲ್ಲಿಯೂ ಹೈ ಡೆಫಿನಿಷನ್ ಕ್ಯಾಮೆರಾ, ಲೈವ್ ವೆಬ್‌ಕಾಸ್ಟಿಂಗ್, ನೆಟ್‌ವರ್ಕ್ ಜಾಮರ್, ಬೆರಳಚ್ಚು ಬಯೋಮೆಟ್ರಿಕ್ ಮತ್ತು ಮುಖಗುರುತು ಪತ್ತೆ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 1 ಗಂಟೆ ಮುಂಚಿತವಾಗಿ ಆಗಮಿಸಿ, ಕಡ್ಡಾಯ ತಪಾಸಣೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವುದು ಕಂಡುಬಂದರೆ ಅಂತಹ ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗುತ್ತದೆ. ಈ ನೇಮಕಾತಿಯು ಲಕ್ಷಾಂತರ ಅಭ್ಯರ್ಥಿಗಳ ಕನಸು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ, ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ಪ್ರಕ್ರಿಯೆಯನ್ನು ನಡೆಸುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ’ ಎಂದು ಹೇಳಿದ್ದಾರೆ.
‘ಇನ್ನು ಪರೀಕ್ಷಾ ಕೇಂದ್ರಕ್ಕೆ ತರಬಹುದಾದ ಹಾಗೂ ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್ನಲ್ಲಿ ವಿವರವಾಗಿ ನೀಡಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಿಲು ಕೋರಿದರು. ಧಾರ್ಮಿಕ ಉಡುಪು ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸುವವರು, ಪರೀಕ್ಷೆ ಆರಂಭಕ್ಕೆ2:30 ಗಂಟೆ ಮೊದಲು ಕೇಂದ್ರದಲ್ಲಿ ಹಾಜರಿದ್ದು, ತಪಾಸಣೆಗೆ ಒಳಪಟ್ಟು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಗೊಂದಲಕ್ಕೆ ಒಳಗಾಗದೇ, ಆತ್ಮವಿಶ್ವಾಸದಿಂದ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಪರೀಕ್ಷೆ ಎದುರಿಸುವಂತೆ ಗೃಹ ಸಚಿವರು ಕೋರಿದ್ದಾರೆ.’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:14 pm, Sat, 1 August 26