Karnataka Politics: ಮುಖ್ಯಮಂತ್ರಿ ಹೆಸರು ಘೋಷಣೆ ಬಳಿಕ ಯಡಿಯೂರಪ್ಪ ಕಾಲಿಗೆ ನಮಸ್ಕಾರ ಮಾಡಿದ ಬಸವರಾಜ ಬೊಮ್ಮಾಯಿ
Karnataka BJP Updates: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿ ಕೇಳಿಬಂದಿತ್ತು. ಇಂದೇ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡಲಾಗಿದೆ.
Karnataka Politics Live: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೊಮ್ಮಾಯಿ ಹೆಸರು ಪ್ರಸ್ತಾಪಿಸಿದ್ದಾರೆ. ಯಡಿಯೂರಪ್ಪ ಪ್ರಸ್ತಾಪವನ್ನು, ಬೊಮ್ಮಾಯಿ ಹೆಸರನ್ನು ಗೋವಿಂದ ಕಾರಜೋಳ ಅನುಮೋದಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿ ಕೇಳಿಬಂದಿತ್ತು. ಇಂದು ಖಾಸಗಿ ಹೊಟೇಲ್ನಲ್ಲಿ ನಡೆದ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ನಡೆದಿದೆ. ಇಂದೇ ಮುಖ್ಯಮಂತ್ರಿ ಹೆಸರು ಘೋಷಣೆಯನ್ನೂ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಂಸದೀಯ ಮಂಡಳಿಯಿಂದ ವೀಕ್ಷಕರ ನೇಮಕ ಮಾಡಲಾಗಿತ್ತು. ರಾಜ್ಯದಲ್ಲಿ ನೂತನ ಸಿಎಂ ಆಯ್ಕೆಗೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಆಗಮಿಸಿದ್ದರು. ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್ಗಾಗಿ ಕೆಳಗೆ ಓದಿರಿ.
LIVE NEWS & UPDATES
-
ನೂತನ ಮುಖ್ಯಮಂತ್ರಿ ಆಯ್ಕೆ; ನಾಡಿನ ವಿವಿಧೆಡೆ ಸಂಭ್ರಮಾಚರಣೆ
ದೇವರ ಆಶೀರ್ವಾದದಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಒಳ್ಳೆ ಕೆಲಸ ಮಾಡುವ ಭರವಸೆ ಇದೆ. ಜನರಿಗೆ ಒಳ್ಳೆಯದಾಗಲಿ, ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಲಿ ಎಂದು ಬಸವರಾಜ ಬೊಮ್ಮಾಯಿ ಪತ್ನಿ ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದಲ್ಲಿ ಸಂಭ್ರಮ ಹೆಚ್ಚಿದೆ. ನಮ್ಮ ಮಾವನ, ಅವರ ತಂದೆಯ ಕೆಲಸವೇ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ. ನೂತನ ಸಿಎಂ ಆಗಿ ಬೊಮ್ಮಾಯಿ ಘೋಷಣೆ ಹಿನ್ನೆಲೆಯಲ್ಲಿ ಬೆಂಬಲಿಗರ, ಬಿಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಂಭ್ರಮಾಚರಣೆ ಕರ್ನಾಟಕದ ವಿವಿಧೆಡೆ ಕಂಡುಬಂದಿದೆ.
-
ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾಗೆ ಬೊಮ್ಮಾಯಿ ಆಗಮನ
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಬಿಜೆಪಿ ಕಚೇರಿಯಿಂದ ನೇರವಾಗಿ ಕೇಶವಕೃಪಾಕ್ಕೆ ಆಗಮಿಸಿದ್ದಾರೆ.
-
ನಾನು ಸಿಎಂ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ, ಲಾಬಿ ಮಾಡಿರಲಿಲ್ಲ: ಬಸವರಾಜ ಬೊಮ್ಮಾಯಿ
ನಾನು ಸಿಎಂ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ. ನಾನು ದೆಹಲಿಗೆ ಹೋಗಿ ಲಾಬಿ ಮಾಡಿರಲಿಲ್ಲ. ನನ್ನನ್ನು ಗುರುತಿಸಿ ಹೈಕಮಾಂಡ್ ಜವಾಬ್ದಾರಿ ನೀಡಿದೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ. ಉತ್ತಮ ಆಡಳಿತ ನೀಡುವುದೇ ನನ್ನ ಗುರಿ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ನಮ್ಮ ತಂದೆಯವರ ಮಾರ್ಗದರ್ಶನವೇ ನನಗೆ ದಾರಿದೀಪ. ವರಿಷ್ಠರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡುತ್ತೇವೆ. ನನಗೆ ಸಂಪೂರ್ಣವಾದ ಸ್ವಾತಂತ್ರ್ಯ ಇರುತ್ತೆ. ನನ್ನ ಆಡಳಿತ ಅತ್ಯಂತ ಪ್ರಾಮಾಣಿಕವಾಗಿರುತ್ತೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜಭವನಕ್ಕೆ ತೆರಳಿದ ಬಸವರಾಜ ಬೊಮ್ಮಾಯಿ
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ತೆರಳಿದ್ದಾರೆ. ಐವರು ನಾಯಕರೊಂದಿಗೆ ಬೊಮ್ಮಾಯಿ ರಾಜಭವನಕ್ಕೆ ತೆರಳಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಮೂವರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ
ಮುಖ್ಯಮಂತ್ರಿ ಘೋಷಣೆ ಬಳಿಕ ಮೂವರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ ಮಾಡಲಾಗಿದೆ. ಈ ಮೊದಲು ಕಂದಾಯ ಸಚಿವರಾಗಿದ್ದ ಹಾಗೂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆರ್. ಅಶೋಕ್, ಗೋವಿಂದ ಕಾರಜೋಳ ಮತ್ತು ಬಿ. ಶ್ರೀರಾಮುಲು ಉಪಮುಖ್ಯಮಂತ್ರಿಗಳಾಗಿ ನೇಮಕಗೊಂಡಿದ್ದಾರೆ.
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ಹೆಸರು ಘೋಷಣೆ ಬಳಿಕ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ನಿಯೋಜಿತ ಸಿಎಂ, ನಿರ್ಗಮಿತ ಮುಖ್ಯಮಂತ್ರಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಘೋಷಣೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಬೆಂಬಲಿಗರಿಂದ ಸಂಭ್ರಮಾಚರಣೆ ಆರಂಭವಾಗಿದೆ. ನೂತನ ಸಿಎಂ ಆಗಿ ಬೊಮ್ಮಾಯಿ ಘೋಷಣೆ ಮಾಡಿರುವ ಕಾರಣ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆದಿದೆ. ಬಸವರಾಜ ಬೊಮ್ಮಾಯಿ ಭಾವಚಿತ್ರ ಹಿಡಿದು, ಬೆಂಬಲಿಗರು ನೂತನ ಮುಖ್ಯಮಂತ್ರಿಗೆ ಜೈಕಾರ ಕೂಗಿದ್ದಾರೆ.
ವೀಕ್ಷಕರ ಜೊತೆ ಕಾವೇರಿ ನಿವಾಸದಿಂದ ತೆರಳಿದ ಬಿಎಸ್‌ವೈ
ವೀಕ್ಷಕರ ಜೊತೆ ಕಾವೇರಿ ನಿವಾಸದಿಂದ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ. ವೀಕ್ಷಕರಾದ ಪ್ರಧಾನ್, ಕಿಶನ್ ರೆಡ್ಡಿ ಜೊತೆ ಬಿಎಸ್‌ವೈ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುತ್ತಿದ್ದಾರೆ.
ಕೆ.ಕೆ.ಗೆಸ್ಟ್ ಹೌಸ್‌ಗೆ ಆಗಮಿಸಿದ ಬಸವರಾಜ ಬೊಮ್ಮಾಯಿ
ಕೆ.ಕೆ.ಗೆಸ್ಟ್ ಹೌಸ್‌ಗೆ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಕಾವೇರಿ ನಿವಾಸದಿಂದ ವೀಕ್ಷಕರ ಭೇಟಿಗೆ ಬೊಮ್ಮಾಯಿ ಆಗಮಿಸಿದ್ದಾರೆ. ಕೆ.ಕೆ ಗೆಸ್ಟ್ ಹೌಸ್‌ಗೆ ರೇಣುಕಾಚಾರ್ಯ, ಅರ್. ಅಶೋಕ್, ಎಸ್.ಆರ್. ವಿಶ್ವನಾಥ್, ರಾಜುಗೌಡ ಕೂಡ ಆಗಮಿಸಿದ್ದಾರೆ. ಜೊತೆಗೆ ಅರುಣಾ ಕುಮಾರಿ, ಧರ್ಮೇಂದ್ರ ಪ್ರಧಾನ್ , ಸಿ.ಟಿ ರವಿ ಆಗಮಿಸಿದ್ದಾರೆ. ಶಾಸಕ ಅರವಿಂದ್ ಬೆಲ್ಲದ್ ಕೆಕೆ ಗೆಸ್ಟ್ ಹೌಸ್ನಿಂದ ಶಾಸಕಾಂಗ ಸಭೆಗೆ ತೆರಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲಿರುವ ಬಿಎಸ್ ಯಡಿಯೂರಪ್ಪ ಇಬ್ಬರು ವೀಕ್ಷಕರ ಜತೆ ಸಭೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕಾವೇರಿ ನಿವಾಸದಿಂದ ಶಾಸಕಾಂಗ ಸಭೆಗೆ ಯಡಿಯೂರಪ್ಪ ತೆರಳಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ.
ಸಿಎಂ ಯಾರಾಗುತ್ತಾರೆ ಎಂದು ನನಗೆ ಮಾಹಿತಿ ಇಲ್ಲ: ಬಸವರಾಜ್ ಬೊಮ್ಮಾಯಿ
ಸಿಎಂ ಯಾರಾಗುತ್ತಾರೆ ಎಂದು ನನಗೆ ಮಾಹಿತಿ ಇಲ್ಲ. ಶಾಸಕಾಂಗ ಪಕ್ಷದಲ್ಲಿನ ಅಭಿಪ್ರಾಯವೇ ಅಂತಿಮ ಎಂದು ಬೆಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಾನು ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡುತ್ತೇನೆ. ಧರ್ಮೇಂದ್ರ ಪ್ರಧಾನ್ರನ್ನು ಭೇಟಿ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಉಸ್ತುವಾರಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಬೊಮ್ಮಾಯಿ ಆಗಮಿಸಿದ್ದಾರೆ. ಬಿಎಸ್‌ವೈ ಜೊತೆ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ.
ನನಗೂ ಮಾಧ್ಯಮಗಳ ಮೂಲಕವೇ ಈ ವಿಷಯ ತಿಳಿದಿದೆ: ಶಾಸಕ ಅರವಿಂದ ಬೆಲ್ಲದ್ ತಂದೆ ಚಂದ್ರಕಾಂತ ಬೆಲ್ಲದ್
ಸಿಎಂ ರೇಸ್‌ನಲ್ಲಿ ಅರವಿಂದ ಬೆಲ್ಲದ್ ಹೆಸರು ಚರ್ಚೆ ವಿಚಾರವಾಗಿ ಧಾರವಾಡದಲ್ಲಿ ಮಾಜಿ ಶಾಸಕ ಹಾಗೂ ಶಾಸಕ ಅರವಿಂದ ಬೆಲ್ಲದ್ ತಂದೆ ಚಂದ್ರಕಾಂತ ಬೆಲ್ಲದ್ ಹೇಳಿಕೆ ನೀಡಿದ್ದಾರೆ. ನನಗೂ ಮಾಧ್ಯಮಗಳ ಮೂಲಕವೇ ಈ ವಿಷಯ ತಿಳಿದಿದೆ. ನಾನು ಈವರೆಗೆ ಯಾರ ಜೊತೆಯಲ್ಲಿಯೂ ಮಾತನಾಡಿಲ್ಲ. ನಾಲ್ಕು ದಿನಗಳಿಂದ ಇಡೀ ರಾಜ್ಯದಿಂದ ಕರೆಗಳು ಬರುತ್ತಿವೆ. ಒಳಗಿನ ವಿಷಯ ನಾನು ತಿಳಿದುಕೊಳ್ಳಲು ಹೋಗಿಲ್ಲ. ಮುಖ್ಯಮಂತ್ರಿ ವಿಚಾರ ಇಂದು ಶಾಸಕಾಂಗ ಸಭೆ ಬಳಿಕ ನಿರ್ಣಯ ಆಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಧಾರವಾಡದಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ತಿಳಿಸಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆ ನಡೆಯುವ ಹೋಟೆಲ್ಗೆ ಭದ್ರತೆ
ಬಿಜೆಪಿ ಶಾಸಕಾಂಗ ಸಭೆ ನಡೆಯುವ ಹೋಟೆಲ್ಗೆ ಭದ್ರತೆ ಒದಗಿಸಲಾಗಿದೆ. ಕೇಂದ್ರ ವಿಭಾಗ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಎಮ್.ಎನ್. ಅನುಚೇತ್ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಓರ್ವ ಡಿಸಿಪಿ, ಓರ್ವ ಎಸಿಪಿ, ಐವರು ಇನ್ಸ್ಪೆಕ್ಟರ್ ಸೇರಿದಂತೆ, 150 ಪೊಲೀಸ್ ಸಿಬ್ಬಂದಿ, 2 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿಗೆ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಆಗಮನ
ಬೆಂಗಳೂರಿಗೆ ಕೇಂದ್ರದ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಆಗಮಸಿದ್ದಾರೆ. ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಜತೆ ಸಿ.ಟಿ.ರವಿ ಕೂಡ ಆಗಮಿಸಿದ್ದಾರೆ. ಕೇಂದ್ರದ ವೀಕ್ಷಕರನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಗಿದೆ.
ಇತ್ತ ಉಸ್ತುವಾರಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿಗೆ ಅರುಣ್ ಸಿಂಗ್ ಹಾಗೂ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಗೆ ನಾಯಕರು ಆಗಮಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ಬಿಡುಗಡೆ ಬಳಿಕೆ ಇದೇ ಮೊದಲ ಬಾರಿಗೆ ಬಿಎಸ್‌ವೈ ಹಾಗೂ ಕಟೀಲ್ ಭೇಟಿಯಾಗುತ್ತಿದ್ದಾರೆ. ಇದೇ ವೇಳೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕೂಡ ಯಡಿಯೂರಪ್ಪ ಭೇಟಿಗೆ ಬಂದಿದ್ದಾರೆ.
ಸರ್ಕಾರ ರಚನೆಗೆ ಕಾರಣರಾದ ನಮಗೆ ಸಚಿವ ಸ್ಥಾನ ನೀಡ್ತಾರೆ
ಸರ್ಕಾರ ರಚನೆಗೆ ಕಾರಣರಾದ ನಮಗೆ ಸಚಿವ ಸ್ಥಾನ ನೀಡ್ತಾರೆ. ನಮ್ಮೆಲ್ಲರಿಗೂ ವರಿಷ್ಠರು ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಕೆಐಎಬಿಯಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ. ವರಿಷ್ಠರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ತಾರೆ ಎಂಬ ನಂಬಿಕೆಯಿದೆ. ಪಕ್ಷದ ಮೇಲೆ ನಮಗೆ ನಂಬಿಕೆ ಹಾಗೂ ವಿಶ್ವಾಸವಿದೆ. ಖಂಡಿತ ವರಿಷ್ಠರು ನಮ್ಮನ್ನು ಕೈಬಿಡಲ್ಲ ಎಂಬ ವಿಶ್ವಾಸವಿದೆ ಎಂದು ಕೆಐಎಬಿಯಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ನಾಯಕನೇ ಮುಂದಿನ ಸಿಎಂ?
ಲಿಂಗಾಯತ ಸಮುದಾಯದ ನಾಯಕನೇ ಮುಂದಿನ ಸಿಎಂ ಎಂಬ ಬಗ್ಗೆ ಟಿವಿ9ಗೆ ಬಿಜೆಪಿ ಹೈಕಮಾಂಡ್ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ. ಮುಂದಿನ ಮುಖ್ಯಮಂತ್ರಿ ಲಿಂಗಾಯತ ನಾಯಕರೇ ಆಗುವ ಸಾಧ್ಯತೆ ದಟ್ಟವಾಗಿದೆ. ಬಿಎಸ್‌ವೈ ನಂತರ ಲಿಂಗಾಯತ ನಾಯಕನಿಗೇ ಸಿಎಂ ಪಟ್ಟ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಯಾರು ಆ ನಾಯಕ ಎಂಬ ಬಗ್ಗೆ ಹೈಕಮಾಂಡ್ ಗುಟ್ಟುಬಿಟ್ಟಿಲ್ಲ. ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಈ ಮೂವರು ಲಿಂಗಾಯತ ನಾಯಕರ ಹೆಸರು ಮುನ್ನೆಲೆಯಲ್ಲಿ ಕೇಳಿಬರುತ್ತಿದೆ.
ಅರವಿಂದ ಬೆಲ್ಲದ್ ಹೆಸರು ಪ್ರಸ್ತಾಪವಾದರೆ ವಿರೋಧವಿದೆ
ಬಿಜೆಪಿ ಶಾಸಕರು ಇಂದು ನಡೆಯಲಿರುವ ಸಭೆ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಶಾಸಕರು ಮುಂದಿನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಹೆಚ್ಚೇ ಕುತೂಹಲ ಹೊಂದಿದ್ದಾರೆ. ಯಡಿಯೂರಪ್ಪ ಆಪ್ತ ಶಾಸಕರು ಸಭೆಯಲ್ಲಿ ಪ್ರಸ್ತಾಪಿಸುವ ಹೆಸರನ್ನಾಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯಡಿಯೂರಪ್ಪ ವಿರೋಧಿ ಬಣದ ಶಾಸಕರ ಹೆಸರು ಸೂಚಿಸಿದ್ರೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುವ ಬಗ್ಗೆ ಕೆಲ ಶಾಸಕರು ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅರವಿಂದ ಬೆಲ್ಲದ್ ಹೆಸರು ಪ್ರಸ್ತಾಪವಾದರೆ ವಿರೋಧವಿದೆ ಎಂದು ಯಡಿಯೂರಪ್ಪ ಆಪ್ತ ಶಾಸಕರು ಹೇಳಿದ್ದಾರೆ. ಬೆಳಗ್ಗೆ ಬಿಎಸ್‌ವೈ ಭೇಟಿ ವೇಳೆ ಬೆಲ್ಲದ್ ಹೆಸರಿಗೆ ವಿರೋಧ ಕೇಳಿಬಂದಿದೆ. ಆದರೆ ಬಿಎಸ್‌ವೈ ಇದಕ್ಕೆ ಪ್ರತಿಕ್ರಿಯಿಸದೇ ಸುಮ್ಮನೆ ಇದ್ದರು ಎಂದು ಮಾಹಿತಿ ಕೇಳಿಬಂದಿದೆ. ಬಳಿಕ ಬೊಮ್ಮಾಯಿ ಹೆಸರು ಸಿಎಂ ರೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ.
ಕೇಂದ್ರ ನಾಯಕರ ಸ್ವಾಗತಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ನಾಯಕರು
ನಮ್ಮ ಸಂಘಟನೆ ನಮ್ಮನ್ನ ಇಲ್ಲಿಯವರೆಗೆ ಕರೆತಂದಿದೆ. ಸಂಘಟನೆಗಾಗಿ ಮಂತ್ರಿ ಸ್ಥಾನ ಬಿಡು ಅಂದ್ರೆ ಬಿಡ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ಧಾರೆ. ಈಶ್ವರಪ್ಪ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಿ ಹೀಗೆ ಮಾತನಾಡಿದ್ದಾರೆ. ಮತ್ತೊಂದೆಡೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ನಾಯಕರು ಸೇರಿದ್ದಾರೆ. ಕೇಂದ್ರದ ನಾಯಕರನ್ನು ಸ್ವಾಗತಿಸಲು ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಮುನಿರತ್ನ, ಕೇಂದ್ರದ ನಾಯಕರ ಸ್ವಾಗತಕ್ಕೆ ಆಗಮಿಸಿದ್ದೇನೆ. ಪಕ್ಷಕ್ಕೆ ನಿಷ್ಟಾವಂತನಾಗಿದ್ದೇನೆ. ಯಾವುದರಲ್ಲಿಯೂ ತಲೆ ಹಾಕದೇ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಯಾವುದೇ ಸ್ಥಾನ ನೀಡಿದ್ರು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ವೀಕ್ಷಕರಾದ ಕಿಶನ್ ರೆಡ್ಡಿ, ಪ್ರಧಾನ್ ಆಗಮನ ಹಿನ್ನೆಲೆ ವಲಸಿಗ ಶಾಸಕರು ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ. ಆರ್. ಅಶೋಕ್, ಡಾ. ಅಶ್ವತ್ಥ್ ನಾರಾಯಣ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಎಸ್.ಆರ್. ವಿಶ್ವನಾಥ್, ರಾಜು ಗೌಡ ಆಗಮಿಸಿದ್ದಾರೆ.
ನಮಗೆ ಕೊಕ್ ಕೊಡುವುದಾದರೆ ಕೊಡಲಿ, ಸಂತೋಷ
ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನಮಗೆ ಕೊಕ್ ಕೊಡುವುದಾದರೆ ಕೊಡಲಿ, ಸಂತೋಷ. ಪಕ್ಷದ ಹೈಕಮಾಂಡ್ ಮೇಲೆ ನಮಗೆ ನಂಬಿಕೆ ಇದೆ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ನನಗೆ ಸಂಪುಟದಿಂದ ಕೊಕ್ ಕೊಟ್ಟರೆ ಕೊಡಲಿ ಬಿಡಿ ಎಂದೂ ಈ ವೇಳೆ ಅವರು ಹೇಳಿದ್ದಾರೆ. ನಾನು ಯಾರಿಗೂ ಏನೂ ಅನ್ಯಾಯ ಮಾಡಿಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಮಾಡಲಿ ಎಂದು ತಿಳಿಸಿದ್ದಾರೆ.
ನಮ್ಮ ಬೆಲ್ಲದ್ ನಮ್ಮ ಸಿಎಂ ಎಂದು ವಿಡಿಯೋ!
ಬಿಜೆಪಿ ಶಾಸಕಾಂಗ ಸಭೆ ಮುನ್ನವೇ ಬೆಲ್ಲದ್ ಸಿಎಂ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಲ್ಲದ್ ಬೆಂಬಲಿಗರು ವಿಡಿಯೋ ಹರಿಬಿಟ್ಟಿದ್ದಾರೆ. ನಮ್ಮ ಬೆಲ್ಲದ್ ನಮ್ಮ ಸಿಎಂ ಎಂದು ವಿಡಿಯೋ ಹರಿಬಿಡಲಾಗಿದೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪರವಾಗಿ ಈ ವಿಡಿಯೋ ಇದ್ದು, ಬೆಲ್ಲದ್ ಸಿಎಂ ಎಂಬ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯಕ್ಕೆ ಹೊಸ ಸಿಎಂ ಆಯ್ಕೆ ವಿಚಾರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಬೆಲ್ಲದ್ ಆಪ್ತರಿಂದ ವೀಡಿಯೋ ಬಿಡುಗಡೆ ಮಾಡಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೇಂದ್ರ ನಾಯಕರ ತೀರ್ಮಾನವೇ ಅಂತಿಮ: ಎಸ್.ಆರ್. ವಿಶ್ವನಾಥ್
ಕರ್ನಾಟಕ ಮುಖ್ಯಮಂತ್ರಿ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೇಂದ್ರ ನಾಯಕರ ತೀರ್ಮಾನವೇ ಅಂತಿಮ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಪಕ್ಷದ ತೀರ್ಮಾನದಂತೆ ನಾವು ಕೆಲಸ ಮಾಡುತ್ತೇವೆ. ನಾನು ಯಾವುದೇ ಮಂತ್ರಿಗಿರಿ ಆಸೆಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಆಗೋ ಆಸೆ ನನಗೂ ಇದೆ, ಬೇರೆಯವರಿಗೂ ಇದೆ
ಮುಖ್ಯಮಂತ್ರಿ ಆಗೋ ಆಸೆ ನನಗೂ ಇದೆ, ಬೆರೆಯವರಿಗೂ ಇದೆ. ಪಕ್ಷದ ಒಬ್ಬ ಕಾರ್ಯಕರ್ತನಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೂ ಸಿಗಬಹುದು ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಟ್ರೇನಿಂಗ್ ಆಗಿರೋ ಒಬ್ಬ ಕಾರ್ಯಕರ್ತನಿಗೆ ಸಿಎಂ ಸ್ಥಾನ ಸಿಗಲಿ ಅನ್ನೋದು ನಮ್ಮ ಅಭಿಪ್ರಾಯ. ದೇವರ ಆರ್ಶರ್ವಾದ ಪಕ್ಷ ಆಶಿರ್ವಾದ, ಅದೃಷ್ಟ ಇದ್ದವರು ಮುಖ್ಯಮಂತ್ರಿ ಆಗಬಹದು. ಪಕ್ಷದ ಸಂಸದೀಯ ಮಂಡಳಿಯೇ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಆಯ್ಕೆ ಇಂದೇ ತಿರ್ಮಾನ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ
ಕರ್ನಾಟಕದ ನೂತನ ಮುಖ್ಯಮಂತ್ರಿ ಅಯ್ಕೆ ಇಂದೇ ತಿರ್ಮಾನ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಬಿಜೆಪಿ ಕಚೇರಿಗೆ ಆಗಮಿಸಿದ ಉಸ್ತುವಾರಿ ಅರುಣ್ ಸಿಂಗ್ ಹೀಗೆ ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಬರ್ತಿದ್ದಾರೆ. ಸಂಜೆ ಶಾಸಕಾಂಗ ಸಭೆ ನಡೆಯುತ್ತೆ. ಸಭೆಯ ಬಳಿಕ ಸಿಎಂ ಹೆಸರು ಬಹಿರಂಗ ಮಾಡ್ತಿವಿ ಎಂದು ತಿಳಿಸಿದ್ದಾರೆ.
ಇವತ್ತಿನಿಂದ ಬಿಜೆಪಿ ಅವನತಿ ಆರಂಭ: ರುದ್ರಮುನಿ ಸ್ವಾಮೀಜಿ
ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ನಡೆ ಸರಿಯಲ್ಲ. ಯಡಿಯೂರಪ್ಪ ಕೇವಲ ವ್ಯಕ್ತಿ ಅಲ್ಲ ಅದು ಒಂದು ಶಕ್ತಿ. ಇವತ್ತಿನಿಂದ ಬಿಜೆಪಿ ಅವನತಿ ಆರಂಭ, ಬಿಜೆಪಿ ಸರ್ವನಾಶವಾಗುತ್ತೆ. ಬಿ.ಎಸ್. ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇರುವುದಿಲ್ಲ ಎಂದು ಬೆಂಗಳೂರಿನಲ್ಲಿ ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.
ನಾಳೆ ಸಂಜೆಯೇ ನೂತನ ಸಿಎಂ ಪ್ರಮಾಣವಚನ ಸಾಧ್ಯತೆ
ನಾಳೆ ಸಂಜೆ ಸಿಎಂ ಒಬ್ಬರು ಮಾತ್ರ ಪ್ರಮಾಣವಚನ ಪಡೆಯುವ ಸಾಧ್ಯತೆ ಇದೆ. ಬಳಿಕ 1 ವಾರದಲ್ಲಿ ಸಂಪುಟ ರಚನೆ ಪ್ರಕ್ರಿಯೆ ಮುಗಿಯಲಿದೆ. ಶಾಸಕಾಂಗ ಪಕ್ಷದ ಸಭೆ ನಿರ್ಣಯದ ಬಗ್ಗೆ ಇಂದೇ ಮಾಹಿತಿ ನೀಡಲಾಗುತ್ತದೆ. ಸಭೆ ಬಳಿಕ ಇಂದೇ ವೀಕ್ಷಕರು ವರಿಷ್ಠರಿಗೆ ಮಾಹಿತಿ ರವಾನಿಸಲಿದ್ದಾರೆ. ನಾಳೆ ಬೆಳಗ್ಗೆ ಹೊಸ ಶಾಸಕಾಂಗ ಪಕ್ಷದ ನಾಯಕನ ಹೆಸರು ತಿಳಿದುಬರಲಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಹೆಸರು ಪ್ರಕಟ ಸಾಧ್ಯತೆಯ ಬಗ್ಗೆಯೂ ಅಂದಾಜಿಸಲಾಗಿದೆ. ನಾಳೆ ಬೆಳಗ್ಗೆ ಸಿಎಂ ಹೆಸರು ಘೋಷಣೆಯಾದರೆ, ಮಧ್ಯಾಹ್ನ ವೇಳೆಗೆ ಹೊಸ ಸಿಎಂ ರಾಜಭವನಕ್ಕೆ ತೆರಳಲಿದ್ದಾರೆ. ರಾಜಭವನಕ್ಕೆ ತೆರಳಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ. ಬಳಿಕ ನಾಳೆ ಸಂಜೆಯೇ ಸಿಎಂ ಒಬ್ಬರು ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿಬಂದಿವೆ.
ಯಡಿಯೂರಪ್ಪನವರ ಮಾರ್ಗದರ್ಶನ, ಸಹಕಾರ ಪಡೆಯುತ್ತೇವೆ: ಅರುಣ್ ಸಿಂಗ್
ಎರಡು ವರ್ಷದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಒಳ್ಳೆ ಕೆಲಸ ಆಗಿದೆ. ಎಲ್ಲ ವರ್ಗ, ಕ್ಷೇತ್ರದಲ್ಲಿ ಸರ್ಕಾರದಿಂದ ಉತ್ತಮ ಕೆಲಸ ಮಾಡಲಾಗಿದೆ. ಮುಂದೆಯೂ ಯಡಿಯೂರಪ್ಪನವರ ಮಾರ್ಗದರ್ಶನ, ಸಹಕಾರ ಪಡೆಯುತ್ತೇವೆ ಎಂದು ಕೆಐಎಎಬಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಪಕ್ಷ ಸಂಘಟನೆಗೆ ಯಡಿಯೂರಪ್ಪನವರ ಮಾರ್ಗದರ್ಶನ ಅಗತ್ಯವಿದೆ. ಹಾಗೂ ಸಂಸದೀಯ ಮಂಡಳಿ ನಿರ್ದೇಶನದಂತೆ ನೂತನ ಸಿಎಂ ಆಯ್ಕೆ ಮಾಡುತ್ತೇವೆ. ಶಾಸಕಾಂಗ ಪಕ್ಷಸ ಸಭೆಯಲ್ಲಿ ನೂತನ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಿಎಂ ಆಯ್ಕೆ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನಿಸ್ತಾರೆ ಎಂದು ಕೆಐಎಎಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಶಾಸಕರಿಗೆ ವೆಜ್, ನಾನ್ ವೆಜ್ ಊಟದ ವ್ಯವಸ್ಥೆ
ಹೊಸ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ, ಮುಂದಿನ ಸಿಎಂ ಆಯ್ಕೆಗಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ ನಿಗದಿಯಾಗಿದೆ. ಈ ವೇಳೆ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಶಾಸಕಾಂಗ ಪಕ್ಷದ ಸಭೆ ವೇಳೆ ಭೂರಿ ಭೋಜನದ ವ್ಯವಸ್ಥೆ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ನಿಗದಿಯಾಗಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಬಿಜೆಪಿ ಶಾಸಕರಿಗೆ ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಟನ್ ಪೆಪ್ಪರ್ ಫ್ರೈ, ಬಿರಿಯಾನಿ, ಫ್ರೂಟ್ ಚಾಟ್ಸ್, ಚಿಕನ್ ಸೂಪ್, ಚಿಕನ್ ಕಬಾಬ್, ಜಾಮೂನ್, ಸ್ವೀಟ್ ಕಾರ್ನ್, ಮೊಸರೊಡೆ, ದಾಲ್ ಕಿಚಡಿ, ಮ್ಯಾಂಗೋ ಐಸ್ ಕ್ರೀಂ, ಕಾಶಿ ಹಲ್ವಾ, ಪನ್ನೀರ್ ಮಸಾಲ ಮೆನುವಿನಲ್ಲಿ ಇದೆ ಎಂದು ಮಾಹಿತಿ ದೊರೆತಿದೆ.
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ. ಅರುಣ್ ಸಿಂಗ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದಾರೆ. ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಿ.ಕೆ.ಅರುಣಾ ಕೂಡ ಬಂದಿದ್ದಾರೆ. ಸಂಜೆ 4.55ಕ್ಕೆ ವೀಕ್ಷಕ ಕಿಶನ್ ರೆಡ್ಡಿ ಕೆಐಎಬಿ ತಲುಪಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ ಸಂಜೆ 5.45ಕ್ಕೆ ಕಿಶನ್ ರೆಡ್ಡಿ ಬಿಜೆಪಿ ಕಚೇರಿ ತಲುಪಲಿದ್ದಾರೆ. ನೂತನ ಸಿಎಂ ಆಯ್ಕೆಗಾಗಿ ಬಿಜೆಪಿ ಕೇಂದ್ರೀಯ ವೀಕ್ಷಕರಾಗಿರುವ ಕಿಶನ್ ರೆಡ್ಡಿ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ ಬಳಿಕ ರಾಜಕೀಯ ಏನಾಗುತ್ತೆಂದು ನೋಡ್ತೀರಿ!
ಸೆಪ್ಟೆಂಬರ್ ಬಳಿಕ ರಾಜಕೀಯ ಏನಾಗುತ್ತೆಂದು ನೋಡ್ತೀರಿ. ರಾಜ್ಯದಲ್ಲಿ ಒಂದು ಹೊಸ ಪರ್ವ ಶುರುವಾಗುತ್ತದೆ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. 3 ತಿಂಗಳ ಹಿಂದೆಯೇ ಬದಲಾವಣೆಯ ಬಗ್ಗೆ ಹೇಳಿದ್ದೆ. ನಾನು ಹೇಳಿಕೆ ನೀಡಿದಾಗ ಎಲ್ಲರೂ ನಗಾಡಿದ್ದರು. ನಾನು ಹೇಳಿದ್ದು ಇಂದು ನಿಜವಾಗಿದೆ ಎಂದು ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ. ನಮ್ಮ ನಾಯಕನನ್ನು ನಾವು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನ್ಯರ ಮನೆ ಮುಂದೆ ನಾವು ನಿಲ್ಲಬೇಕಾಗುತ್ತದೆ. ಆ ಅಧಿಕಾರ ನಾವು ಕಳೆದುಕೊಂಡರೆ ಎಲ್ಲ ಕಳೆದುಕೊಳ್ತೇವೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತೆ ಎಂದು ಮುಖ್ಯಮಂತ್ರಿ ಬದಲಾವಣೆಯ ವಿರುದ್ಧ ಇಬ್ರಾಹಿಂ ಗುಡುಗಿದ್ದಾರೆ.
ತಾಯಿ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ
ನಾನು ಸಂಪೂರ್ಣ ಬಹುಮತದಿಂದ ಸಿಎಂ ಆಗಿರಲಿಲ್ಲ. ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಸಿಎಂ ಆಗಿದ್ದೆ ಎಂದು ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. 2 ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಆದಾಗ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ. ಜೆಡಿಎಸ್ ಪಕ್ಷ ಮುಗಿದೇ ಹೋಯ್ತು ಎನ್ನುತ್ತಿದ್ದಾರೆ. ತಾಯಿ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ವಿವಿಧ ಪಕ್ಷಗಳಿಂದ ಮುಂದಿನ ಮುಖ್ಯಮಂತ್ರಿ ಹಾಗೂ ಮುಂದಿನ ಚುನಾವಣೆಗೆ ಸಂಬಂಧಿಸಿದ ಹೇಳಿಕೆಗಳೂ ಕೇಳಿಬರುವುದು ಜೋರಾಗಿದೆ. ಈ ಮಧ್ಯೆ, ಕುಮಾರಸ್ವಾಮಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಮಾತನಾಡಿದ್ದಾರೆ.
ಬಿಎಸ್‌ವೈ ಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ -ಸಿ.ಎಂ.ಇಬ್ರಾಹಿಂ
ಕೇರಳದಲ್ಲಿ ಶ್ರೀಧರನ್ 80 ವರ್ಷದ ಮುದಿಯಾ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಇಲ್ಲಿ ಯಡಿಯೂರಪ್ಪಗೆ 75 ವರ್ಷ ವಯಸ್ಸು.ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ. ಅವರಿಗೆ ವಯಸ್ಸಿನ ಕಾರಣ ಹೇಳಿ ತೆಗೆದಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಭೇಟಿ ಬಳಿಕ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕೇಂದ್ರ ನಾಯಕರ ಆಗಮನ
ಸಿಎಂ ಆಯ್ಕೆಗೆ ಕೇಂದ್ರ ಬಿಜೆಪಿ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಅಭಿಮಾನಿಗಳು, ಮುಖಂಡರು ಮುಗಿಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಆಗಮನ ದ್ವಾರದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಕೇಂದ್ರ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಸಿ.ಟಿ.ರವಿ ಸಿಎಂ ಆಗಲೆಂದು ವಿಶೇಷ ಪೂಜೆ
ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸಿಎಂ ಆಗುವಂತೆ ಪ್ರಾರ್ಥಿಸಿ ಚಿಕ್ಕಮಗಳೂರು ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಹೋಮ, ಹವನ ನಡೆಯುತ್ತಿದೆ. ಸಂಕಷ್ಟ ಚತುರ್ಥಿ ದಿನದಂದು ಸಿ.ಟಿ.ರವಿಗಾಗಿ ಬಿಜೆಪಿ ಕಾರ್ಯಕರ್ತರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಶಾಸಕಾಂಗ ಸಭೆಗೆ ಸಕಲ ಸಿದ್ಧತೆ
ಸಂಜೆ 7 ಗಂಟೆಗೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು ಸಭೆಗೆ ಸಿಬ್ಬಂದಿ ತಯಾರಿ ಮಾಡುತ್ತಿದ್ದಾರೆ. ಸ್ವಚ್ಛತ ಕಾರ್ಯ ಸೇರಿದಂತೆ ಹೋಟೆಲ್ ಸಿಬ್ಬಂದಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಬಿಎಸ್‌ವೈ ಭೇಟಿಗೆ ಆಗಮಿಸಿದ ಇಬ್ರಾಹಿಂ
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಸಿಎಂ ಬಿಎಸ್‌ವೈ ಭೇಟಿಗೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಬಂದಿದೆ-ಪೇಜಾವರ ಶ್ರೀಗಳು
ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಬಂದಿದೆ. ರಾಜ್ಯವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ಬೇಕು. ಯಡಿಯೂರಪ್ಪ ಸಹ ಈ ಹಿಂದೆ ಒಳ್ಳೆ ಕೆಲಸ ಮಾಡಿದ್ದಾರೆ. ಸಮಸ್ಯೆಗಳನ್ನ ಸಮರ್ಥವಾಗಿ ಎದುರಿಸುವ ನಾಯಕ ಬೇಕು. ಬಿಎಸ್‌ವೈ ನಾಯಕತ್ವ ಸಮಾಧಾನ ತಂದಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೇಜಾವರದ ವಿಶ್ವಪ್ರಸನ್ನತೀರ್ಥ ಶ್ರೀ ಹೇಳಿಕೆ ನೀಡಿದ್ದಾರೆ.
2023ರ ಚುನಾವಣೆಗೆ ಕಾಂಗ್ರೆಸ್ ದಾರಿ ಸುಗಮವಾಯಿತು -ಸಿದ್ದರಾಮಯ್ಯ
ರಾಜ್ಯದ ಜನರ ಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ. ಬಿಜೆಪಿಯವರು ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಇದ್ದೇ ಇರುತ್ತೆ. ಈಗ ಜೆಡಿಎಸ್‌ಗೆ ಯಾವ ಕಮಾಂಡ್ ಇದೆ ಎಂದು ಸಿದ್ದರಾಮಯ್ಯ ವ್ಯಂಗ ಮಾಡಿದ್ದಾರೆ.
ಸಿಎಂರನ್ನೇ ಕೇಂದ್ರ ಸರ್ಕಾರದವರು ತೆಗೆದುಹಾಕಿಬಿಟ್ಟರು. ಬಿಜೆಪಿಯಲ್ಲಿ ಎಲ್ಲಿ ಪ್ರಜಾಪ್ರಭುತ್ವವಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೇಂದ್ರದವರು ಅವರಿಗೆ ಇಷ್ಟಬಂದಂತೆ. ತೆಗೆದುಹಾಕುತ್ತಾರೆ. BSY ಇದ್ದರೂ ಲಾಭವಿಲ್ಲ, ಇಲ್ಲದಿದ್ರೂ ನಮಗೆ ಲಾಭವಿಲ್ಲ. 2023ರ ಚುನಾವಣೆಗೆ ಕಾಂಗ್ರೆಸ್ ದಾರಿ ಸುಗಮವಾಯಿತು ಎಂದು ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಗೆ ಎಂಎಲ್‌ಸಿ ರವಿ ಆಗಮನ
ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಎಂಎಲ್‌ಸಿ ರವಿ ಆಗಮಿಸಿದ್ದಾರೆ. ಇವತ್ತು ರಾಜ್ಯಾಧ್ಯಕ್ಷರು ಮತ್ತು ಉಸ್ತುವಾರಿ ಅರುಣ್ ಸಿಂಗ್ ಬರ್ತಿದ್ದಾರೆ. ಸಂಜೆ ಶಾಸಕಾಂಗ ಸಭೆ ಕೂಡ ಇದೆ. ಅಲ್ಲಿ ಯಾವ ಅಭಿಪ್ರಾಯ ಉದ್ಭವವಾಗುತ್ತೋ ನೋಡಬೇಕು. ಕೇಂದ್ರದವರು ಎಷ್ಟು ಬೇಗ ಸೂಚಿಸ್ತಾರೊ ಅಷ್ಟು ಬೇಗ ನೂತನ ಸಿಎಂ ಹೆಸರು ಗೊತ್ತಾಗುತ್ತೆ ಎಂದರು.
ಕಾಂಗ್ರೆಸ್ದು ಓಲೈಕೆ ರಾಜಕೀಯ -ಹೆಚ್‌ಡಿಕೆ ವಾಗ್ದಾಳಿ
ಪ್ರಧಾನಿ ಮೋದಿ ಎಲ್ಲ ಮಾಹಿತಿ ಪಡೆದುಕೊಂಡಿರುತ್ತಾರೆ. ಬಿಜೆಪಿ ಹೈಕಮಾಂಡ್ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ ಎಂದು ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇನ್ನು ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ಕಾಂಗ್ರೆಸ್‌ನವರು ಸಮುದಾಯವನ್ನು ಓಲೈಸಲು ಯತ್ನಿಸ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಲಪ್ಪ ಆಚಾರ್ ಮುಂದಿನ ಸಹಕಾರ ಸಚಿವರು
ಕೊಪ್ಪಳ ಜಿಲ್ಲೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮುಂದಿನ ಸಹಕಾರ ಸಚಿವರು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ.
ಬಿಎಸ್‌ವೈ ನನಗೆ ತುಂಬಾ ಸಹಾಯ ಮಾಡಿದ್ದಾರೆ
ನಾನು ಇಂದು ಯಡಿಯೂರಪ್ಪ ಅವರನ್ನ ಭೇಟಿ ಮಾಡಿದೆ. ಅವರು ನನಗೆ ಸಹಾಯ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ತಿಳಿಸಿದ್ರು. ಇನ್ನು ಅವರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾರ್ಯಕರ್ತರ ಅಭಿಪ್ರಾಯ ಬಿಜೆಪಿ ಸೇರಿ ಅಂತ ಇದೆ. ನಾನು ಇನ್ನೂ ನಿರ್ಧಾರ ಮಾಡಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರೆಯಬೇಕು ಅನ್ನೋದು ನನ್ನ ಅಭಿಪ್ರಾಯ. ಆದ್ರೆ ಅದು ಹೈಕಮಾಂಡ್ ನಿರ್ಧಾರ. ಹೀಗಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು.
ಸಿಎಂ ಬಗ್ಗೆ ಟೀಕೆ ಮಾಡಿದವರೇ ಸಿಎಂ ಕುರ್ಚಿಗಾಗಿ ಟವಲ್ ಹಾಸಿದ್ದಾರೆ
ಪ್ರಧಾನಿ ಮೋದಿ ಎಲ್ಲ ಮಾಹಿತಿ ಪಡೆದುಕೊಂಡಿರುತ್ತಾರೆ. ಬಿಜೆಪಿ ಹೈಕಮಾಂಡ್ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ ಎಂದು ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇನ್ನು ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ಕಾಂಗ್ರೆಸ್‌ನವರು ಸಮುದಾಯವನ್ನು ಓಲೈಸಲು ಯತ್ನಿಸ್ತಿದ್ದಾರೆ. ಸಿಎಂ ಬಗ್ಗೆ ಟೀಕೆ ಮಾಡಿದವರೇ ಸಿಎಂ ಕುರ್ಚಿಗಾಗಿ ಟವಲ್ ಹಾಸಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಒಂದು ಹೊಸ ಪರ್ವ ಶುರುವಾಗುತ್ತದೆ -ಎಂಎಲ್‌ಸಿ ಸಿ.ಎಂ.ಇಬ್ರಾಹಿಂ
ಸೆಪ್ಟೆಂಬರ್ ಬಳಿಕ ರಾಜಕೀಯ ಏನಾಗುತ್ತೆಂದು ನೋಡ್ತೀರಿ. ರಾಜ್ಯದಲ್ಲಿ ಒಂದು ಹೊಸ ಪರ್ವ ಶುರುವಾಗುತ್ತದೆ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. 3 ತಿಂಗಳ ಹಿಂದೆಯೇ ಬದಲಾವಣೆಯ ಬಗ್ಗೆ ಹೇಳಿದ್ದೆ. ನಾನು ಹೇಳಿಕೆ ನೀಡಿದಾಗ ಎಲ್ಲರೂ ನಗಾಡಿದ್ದರು. ನಾನು ಹೇಳಿದ್ದು ಇಂದು ನಿಜವಾಗಿದೆ. ನಮ್ಮ ನಾಯಕನನ್ನು ನಾವು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನ್ಯರ ಮನೆ ಮುಂದೆ ನಾವು ನಿಲ್ಲಬೇಕಾಗುತ್ತದೆ. ಆ ಅಧಿಕಾರ ನಾವು ಕಳೆದುಕೊಂಡರೆ ಎಲ್ಲ ಕಳೆದುಕೊಳ್ತೇವೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತೆ ಎಂದರು.
Published On - Jul 27,2021 1:33 PM