Karnataka Rain: ಬೆಂಗಳೂರಿನಲ್ಲಿ ಇಂದೂ ಮಳೆ ಸಾಧ್ಯತೆ; ಉತ್ತರ ಒಳನಾಡು, ಮಲೆನಾಡು, ಕರಾವಳಿಯಲ್ಲಿ 4 ದಿನ ವರುಣನ ಆರ್ಭಟ
Bengaluru Rains: ಕರ್ನಾಟಕದ ಉತ್ತರ ಒಳನಾಡಿನ ರಾಯಚೂರು, ಬೀದರ್ ಹಾಗೂ ಯಾದಗಿರಿ ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ 4 ದಿನಗಳವರೆಗೆ ಚದುರಿದ ಮಳೆಯಾಗಲಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ (Bangalore Rain) ಸುರಿದ ಮಳೆಯಿಂದ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿತ್ತು. ಹೊರಗೆ ನಿಲ್ಲಿಸಿದ್ದ ಕಾರುಗಳು ಮಳೆನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಯೂ ನಡೆಯಿತು. ಇನ್ನೂ 4 ದಿನ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಮಳೆಯಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನೆರಡು ದಿನ ಬೆಂಗಳೂರು (Bengaluru Rains), ಮೈಸೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ 2 ದಿನಗಳೂ ಇದೇ ರೀತಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಉತ್ತರ ಒಳನಾಡಿನ ರಾಯಚೂರು, ಬೀದರ್ ಹಾಗೂ ಯಾದಗಿರಿ ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಕರಾವಳಿಯ ಬಹುತೇಕ ಕಡೆ ಗುಡುಗು-ಸಿಡಿಲು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ 4 ದಿನಗಳವರೆಗೆ ಚದುರಿದ ಮಳೆಯಾಗಲಿದೆ. ತಮಿಳುನಾಡು, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮಾ ಮತ್ತು ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗಲಿದೆ. ಮುಂದಿನ 4 ದಿನಗಳಲ್ಲಿ ಕೇರಳ-ಮಾಹೆ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲೂ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ಬೆಂಗಳೂರಿಗೆ ಇನ್ನೂ ಮೂರು ದಿನಗಳ ಕಾಲ ‘ಭಾರೀ ಮಳೆ’ಯ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ, ಕೊಡಗಿನಲ್ಲಿ ಕೂಡ ಮಳೆಯಾಗಲಿದೆ.
#WATCH | Karnataka: Several parts of Bengaluru face waterlogging amidst heavy rainfall in the city.
An emergency operation in waterlogged areas is underway by BBMP (Bruhat Bengaluru Mahanagara Palike) & fire department.
Visuals from Banashankari, Kathreguppe, Jayaprakash Nagara pic.twitter.com/XOn81C9C8d
— ANI (@ANI) April 14, 2022
ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಮಳೆಯಾಗುತ್ತಿದೆ. ಕೇರಳದಲ್ಲಿ ಸೋಮವಾರದವರೆಗೂ ವ್ಯಾಪಕ ಮಳೆಯಾಗಲಿದ್ದು, 10 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಾಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಪಲಕ್ಕಾಡ್, ವಯನಾಡ್ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಭಾರತದಾದ್ಯಂತ ಮುಂದಿನ ಐದು ದಿನಗಳವರೆಗೆ ಮಳೆಯ ಅಬ್ಬರವಿರಲಿದೆ. ಏಪ್ರಿಲ್ 17ರವರೆಗೆ ಕೇರಳವು ಭಾರೀ ಮಳೆಯನ್ನು ಅನುಭವಿಸಬಹುದು. ವಾಯುವ್ಯ ಭಾರತ ಮತ್ತು ಮಧ್ಯಪ್ರದೇಶದಲ್ಲಿ ಏಪ್ರಿಲ್ 17ರವರೆಗೆ ತೀವ್ರವಾದ ಶಾಖದ ಅಲೆಯು ಮುಂದುವರಿಯುತ್ತದೆ ಎಂದು ಭಾರತೀಯ ಮಾಪನಶಾಸ್ತ್ರ ಇಲಾಖೆ (ಐಎಂಡಿ) ಹೇಳಿದೆ. ತಮಿಳುನಾಡು-ಪುದುಚೇರಿ-ಕಾರೈಕಲ್, ಕೇರಳ-ಮಾಹೆ, ಅಸ್ಸಾಂ-ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 17ರವರೆಗೆ ವ್ಯಾಪಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ಸೂಚನೆಯ ಪ್ರಕಾರ, ಕೇರಳ, ತಮಿಳುನಾಡು, ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಹೆಚ್ಚಾಗಲಿದೆ. ಮುಂದಿನ 4 ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ-ಮೇಘಾಲಯ ಮತ್ತು ನಾಗಾಲ್ಯಾಂಡ್-ಮಣಿಪುರ-ಮಿಜೋರಾಂ-ತ್ರಿಪುರಾದಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.
ಇನ್ನೆರಡು ದಿನ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ-ಮೇಘಾಲಯದಲ್ಲಿ ಮತ್ತು ಏಪ್ರಿಲ್ 17ರಂದು ನಾಗಾಲ್ಯಾಂಡ್-ಮಣಿಪುರ-ಮಿಜೋರಾಂ-ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 4 ದಿನಗಳಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಏಪ್ರಿಲ್ 17ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಏ. 19ರಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಬಿಸಿಗಾಳಿ ಉಂಟಾಗಲಿದೆ. ಏ. 18ರವರೆಗೆ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ. ಏಪ್ರಿಲ್ 17-19ರ ಅವಧಿಯಲ್ಲಿ ರಾಜಸ್ಥಾನ ಮತ್ತು ಏಪ್ರಿಲ್ 17 ಮತ್ತು 18ರಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿಗಳಲ್ಲಿ ತೀವ್ರ ಶಾಖ ಉಂಟಾಗಲಿದೆ.
ಇದನ್ನೂ ಓದಿ: Rain Updates: ದಕ್ಷಿಣ ಭಾರತ ಸೇರಿ ಈ ರಾಜ್ಯಗಳಲ್ಲಿ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
Karnataka Rain: ಕರ್ನಾಟಕದಲ್ಲಿ ಏ. 18ರವರೆಗೆ ಕರ್ನಾಟಕದಲ್ಲಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ