
ಬೆಂಗಳೂರು, ಆಗಸ್ಟ್ 04: ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ರೈತರ ಮುಖದಲ್ಲಿ ಹರ್ಷ ಮೂಡಿಸುವ ಜೊತೆಗೆ, ಕೆಲವು ಕಡೆ ಕಾಲುವೆ ದುರಸ್ತಿ ಕೊರತೆಯಿಂದ ಭೀತಿಯೂ ಎದುರಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡ್ಯಾಂಗೆ ಬೃಹತ್ ಪ್ರಮಾಣದ ಒಳಹರಿವು ದಾಖಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಭರವಸೆ ಮೂಡಿಸಿದೆ.
ಕಳೆದ ವರ್ಷ ಇದೇ ದಿನ 2921.80 ಅಡಿ ಅಂದರೆ 36.910 ಟಿಎಂಸಿ ನೀರಿತ್ತು ಹಾಗೂ 9,859 ಕ್ಯೂಸೆಕ್ ಒಳಹರಿವಿತ್ತು.
ಮಲೆನಾಡಿನ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 50 ಟಿಎಂಸಿ ನೀರು ಸಂಗ್ರಹವಾಗಿದೆ. ಸರ್ಕಾರ ಯಾವುದೇ ಕ್ಷಣದಲ್ಲಿ ಕೃಷಿಗೆ ನೀರು ಹರಿಸಲು ಸಿದ್ಧತೆ ನಡೆಸಿದೆಯಾದರೂ, ಕಾಲುವೆ ಒಡೆಯುವ ಭೀತಿ ಎದುರಾಗಿದೆ.
ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಈಗಾಗಲೇ ಕುಸಿದಿದ್ದು, ದುರಸ್ತಿ ಮಾಡದೆ ನೀರು ಬಿಟ್ಟರೆ ಕಾಲುವೆ ಕಟ್ಟೆಯೊಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಬಸಾಪುರ ಬಳಿ ಕಾಲುವೆ ಒಡೆದಿದ್ದನ್ನು ನೆನಪಿಸಿಕೊಳ್ಳುತ್ತಿರುವ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು, ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೀರು ಹರಿಸುವ ಮುನ್ನ ತಕ್ಷಣವೇ ಕಾಲುವೆ ದುರಸ್ತಿಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ