ರಾಜ್ಯದಲ್ಲಿ ಹಾವು ಕಡಿತ ಪ್ರಕರಣ​ ಹೆಚ್ಚಳ: 10 ತಿಂಗಳಲ್ಲಿ 18 ಸಾವಿರ ಕೇಸ್​, 125 ಮಂದಿ ಸಾವು

ಕರ್ನಾಟಕದಲ್ಲಿ ಹಾವು ಕಡಿತ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಕೇವಲ 10 ತಿಂಗಳಲ್ಲಿ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿ 125 ಮಂದಿ ಸಾವನ್ನಪ್ಪಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದು ಮತ್ತು ನಾಟಿ ಔಷಧಿಗಳ ಮೊರೆ ಹೋಗುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ರಾಜ್ಯದಲ್ಲಿ ಹಾವು ಕಡಿತ ಪ್ರಕರಣ​ ಹೆಚ್ಚಳ: 10 ತಿಂಗಳಲ್ಲಿ 18 ಸಾವಿರ ಕೇಸ್​, 125 ಮಂದಿ ಸಾವು
ಸಾಂದರ್ಭಿಕ ಚಿತ್ರ
Edited By:

Updated on: Nov 13, 2025 | 11:23 AM

ಬೆಂಗಳೂರು, ನವೆಂಬರ್​ 13: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಜೊತೆಗೆ ಹಾವುಗಳ ಕಾಟವೂ ಹೆಚ್ಚಿದೆ. ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ಅವುಗಳ ಕಡಿತ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು 125 ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲೇ 512 ಹಾವು ಕಡಿತ ಕೇಸ್​ಗಳು ಪತ್ತೆಯಾಗಿದ್ದು, ಆ ಪೈಕಿ ಮೂವರು ಅಸುನೀಗಿದ್ದಾರೆ.

ಹಾವು ಕಡಿತ ಕೇಸ್​ಗಳ ಸಂಖ್ಯೆ ಏರಿಕೆ

ವರ್ಷ        ಕೇಸ್​ಗಳ ಸಂಖ್ಯೆ            ಸಾವು

2021                  950                    0

2022                3439                  17

2023                6596                  19

2024               13,235                 95

2025               18,246               125 (ಜನವರಿಯಿಂದ-ನವೆಂಬರ್​ 2ರ ವರೆಗೆ)

ಇದನ್ನೂ ಓದಿ: ನಾಗುಲ ಚೌತಿಯಂದು ಹುತ್ತದಿಂದ ಹೊರಬಂದು ಭಕ್ತರು ಇಟ್ಟ ಹಾಲು ಕುಡಿದ ಹಾವು!

ಹಾವು ಕಡಿತ ಕೇಸ್​​ಗಳ ಪೈಕಿ ಹಲವರು ಸಕಲಾದಲ್ಲಿ ಚಿಕಿತ್ಸೆ ಮತ್ತು ಔಷಧ ಸಿಗದೆ ಮೃತಪಟ್ಟಿದ್ದು, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಆಸ್ಪತ್ರೆಗಳಲ್ಲಿ ಬೇಡಿಕೆ ಇರುವಷ್ಟು ಆ್ಯಂಟಿ ಸ್ನೇಕ್‌ ವೀನೋಮ್ ಸ್ಟಾಕ್ ಇರಿಸುವಂತೆ ತಿಳಿಸಲಾಗಿದ್ದು, ಯಾವುದೇ ತರನಾದ ಹಾವು ಕಡಿದರೂ ನಿರ್ಲಕ್ಷ್ಯ ವಹಿಸದಂತೆ ಸಾರ್ವಜನಿಕರಿಗೂ ಸೂಚಿಸಲಾಗಿದೆ. ಹೀಗಿದ್ದರೂ ಜನ ನಿರ್ಲಕ್ಷ್ಯ ತೋರುತ್ತಿದ್ದು, ತುರ್ತು ಚಿಕಿತ್ಸೆ ಪಡೆಯುತ್ತಿಲ್ಲ. ಬದಲಾಗಿ ನಾಟಿ ಔಷಧಿಗಳ ಮೊರೆ ಹೋಗಿ ಅಂತಿಮ ಹಂತದಲ್ಲಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಹೀಗಾಗಿಯೇ ಹಾವು ಕಡಿತದಿಂದ ಮೃತರ ಸಂಖ್ಯೆಯೂ ಹೆಚ್ಚಳವಾಗಿದೆ ಎನ್ನಲಾಗಿದೆ.

ಹಾವುಗಳ ಬಗ್ಗೆ ಇರಲಿ ಎಚ್ಚರಿಕೆ

ಇದು ಹಾವುಗಳ ಮಿಲನದ ಕಾಲವಾಗಿದ್ದು, ಹೀಗಾಗಿಯೇ ಅವು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ. ಹಾವುಗಳು ಕಂಡಾಗ ಅವುಗಳಿಗೆ ತೊಂದರೆ ಕೊಡುವುದು ಅಥವಾ ಅವನ್ನು ಹಿಡಿಯಲು ಪ್ರಯತ್ನ ಮಾಡಬೇಡಿ. ಅವು ಕಡಿದಾಗ ಅಂಗಾಂಗಳ ಮೇಲೆ ಪರಿಣಾಮ ಬೀರಲಿರುವ ಕಾರಣ ತುರ್ತಾಗಿ ಚಿಕಿತ್ಸೆ ಪಡೆಯಿರಿ ಎಂದು ಉರಗ ಸಂರಕ್ಷಕ ಪ್ರಸನ್ನ ಕುಮಾರ್​ ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:20 am, Thu, 13 November 25

Follow Us