Karnataka Budget 2025: ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್​ಗೆ ಕ್ಷಣಗಣನೆ, ಬೆಟ್ಟದಷ್ಟು ನಿರೀಕ್ಷೆ!

Siddaramaiah Budget 2025: 2025-26ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಗೆ ಕೌಂಟ್ ಡೌನ್ ಶುರುವಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ 16ನೇ ಬಾರಿಗೆ ಆಯಾವ್ಯಯ ಮಂಡಿಸಲಿದ್ದು, ಗ್ಯಾರಂಟಿ ಸರ್ಕಾರದ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಸಾಮಾಜಿಕ ಹರಿಕಾರರ ದಾರಿಯಲ್ಲೇ ಸಾಗುತ್ತೇನೆ ಎಂದು ಪಣತೊಟ್ಟ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಕಳೆದೆರಡು ವರ್ಷ ಗಳಲ್ಲಿ ಕೇವಲ ಗ್ಯಾರಂಟಿ ಅಬ್ಬರದಲ್ಲೇ ಮುಳುಗಿ ಹೋಗಿದ್ದ ಕಾಂಗ್ರೆಸ್ ಹೊಸದೇನಾದರೂ ಕೊಡಬಹುದಾ ಎಂಬ ನಿರೀಕ್ಷೆಗಳು ಇವೆ.

Karnataka Budget 2025: ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್​ಗೆ ಕ್ಷಣಗಣನೆ, ಬೆಟ್ಟದಷ್ಟು ನಿರೀಕ್ಷೆ!
Siddaramaiah Budget 2025

Updated on: Mar 07, 2025 | 5:30 AM

ಬೆಂಗಳೂರು, (ಮಾರ್ಚ್​ 06): ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೂರನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಬಳಿಕ ಇದೀಗ ಇಂದು (ಮಾರ್ಚ್​ 07) ಮಂಡನೆಯಾಗಲಿರೋ 2025ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ 9.30ಕ್ಕೆ ಸಚಿವ ಸಂಪುಟ ನಡೆಸಲಿದ್ದು, ಸಭೆಯಲ್ಲಿ ಬಜೆಟ್​ಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ. ಬಳಿಕ ಬೆಳಗ್ಗೆ 10.20ರ ಸುಮಾರಿಗೆ ಬಜೆಟ್​ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ತಮ್ಮ ಅವಧಿಯ ದಾಖಲೆಯನ್ನೇ ಮುರಿದು 16ನೇ ಬಾರಿಗೆ ಬಜೆಟ್ ಮಂಡಿಸಲು ಮುಂದಾಗಿದ್ದು, ಮಂಡಿನೋವಿನ ಕಾರಣದಿಂದ ನಿಂತು ಬಜೆಟ್ ಮಂಡಿಸುವ ಬದಲು ಕುಳಿತು ಬಜೆಟ್ ಓದುವ ಸಾಧ್ಯತೆ ಇದೆ. ಇನ್ನು ಬಜೆಟ್ ಗಾತ್ರ 4 ಲಕ್ಷ ಕೋಟಿ ಮೀರುವ ಸಾಧ್ಯತೆ ಇದೆ.

ಬಜೆಟ್ ಗಾತ್ರ 4 ಲಕ್ಷ ಕೋಟಿ ಮೀರುವ ಸಾಧ್ಯತೆ

ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 52 ಸಾವಿರ ಕೋಟಿ ಗೂ ಹೆಚ್ಚುಮೊತ್ತವನ್ನು ವ್ಯಯಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಈ ಬಾರಿ ಬಹಳ ನಿರೀಕ್ಷೆ ಗರಿಗೆದರಿದೆ.‌ ಕಳೆದ ಆರ್ಥಿಕ ವರ್ಷದಲ್ಲಿ ಶೇ.61 ರಷ್ಟು ಮಾತ್ರ ಆರ್ಥಿಕ ಪ್ರಗತಿ ಹಾಗೂ ಇಲಾಖಾವಾರು ಪ್ರಗತಿ ಕಂಡಿರುವ ಸರ್ಕಾರ ಇನ್ನೂ ಸಾಧಿಸುವುದು ಬೆಟ್ಟದಷ್ಟಿದೆ. ಸಾಲು ಸಾಲು ಗ್ಯಾರಂಟಿಗಳ ಜೊತೆಗೆ ಆಯಾವ್ಯಯದ ಲೆಕ್ಕ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ರೆ, ಇತ್ತ ರಾಜ್ಯ ಹಾಗೂ ರಾಜಧಾನಿಯ ಜನರು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಕಾದುಕುಳಿತಿದ್ದಾರೆ.

ಇದನ್ನೂ ಓದಿ: Karnataka Budget 2025​: ದಿನಾಂಕ, ಸಮಯ ಮತ್ತು ಎಲ್ಲಿ ಲೈವ್ ವೀಕ್ಷಿಸಬೇಕು?

ಬೆಟ್ಟದಷ್ಟು ನಿರೀಕ್ಷೆ

ಗ್ಯಾರಂಟಿ ಯೋಜನೆ ಮುಂದುವರಿಸುವ ಜೊತೆಗೆ ಹೊಸ ವಿಶೇಷವಾದ ಯೋಜನೆ ಗಳನ್ನೂ ಕೂಡ ನೀಡಬೇಕು. ಗ್ಯಾರಂಟಿ ಜೊತೆಗೆ ರಾಜ್ಯದ ಆರ್ಥಿಕತೆಗೆ ಅಭಿವೃದ್ಧಿ ಗೆ ಸಾಮಾಜಿಕ ಏಳಿಗೆಗೆ ಕೊಡುಗೆ ನೀಡುವಂತ ಯೋಜನೆಗಳನ್ನು ಬಜೆಟ್ ನಲ್ಲಿ ಮಂಡಿಸಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಗತಿ ಸರಿಯಿಲ್ಲದ ಹೊತ್ತಲ್ಲಿ ಸರ್ಕಾರ ಎಷ್ಟು ಮೊತ್ತದ ಹೊಸ ಸಾಲವನ್ನು ಮಾಡುತ್ತದೆಯೋ ಎಂಬ ಆತಂಕವೂ ಇದೆ. ಹೊಸ ಜಿಲ್ಲೆ, ಹೊಸ ತಾಲೂಕುಗಳ ಘೋಷಣೆಯಾದರೆ ಅವುಗಳ ಅಭಿವೃದ್ಧಿಗೂ ಹಣ ನೀಡಬೇಕಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿಹೋಗಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಹೊಸ ಅಭಿವೃದ್ಧಿ ಯೋಜನೆಗಳ ಸಿಂಚನವನ್ನು ಸಿದ್ದರಾಮಯ್ಯ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.

ಇದನ್ನೂ ಓದಿ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಸಿಎಂ ವ್ಹೀಲ್ ಚೇರ್​​ನಲ್ಲಿ ಹೋಗಲು ವಿಧಾನಸೌಧದಲ್ಲಿ ರ‍್ಯಾಂಪ್ ಅಳವಡಿಕೆ
Karnataka Budget 2025​: ದಿನಾಂಕ, ಸಮಯ ಮತ್ತು ಎಲ್ಲಿ ಲೈವ್ ?
ಸಿಎಂ ಬದಲಾವಣೆ: ಸಿದ್ದು-ಡಿಕೆಶಿ ಬಗ್ಗೆ ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ!

ಇನ್ನು ರಾಜ್ಯ ರಾಜಧಾನಿಯನ್ನ ಬ್ರ್ಯಾಂಡ್ ಮಾಡುತ್ತೇವೆ ಎಂದು ಕಳೆದ ಬಜೆಟ್ ನಲ್ಲಿ ಸಾಲು ಸಾಲು ಘೋಷಣೆ ಮಾಡಿ ನೆರವೇರಿಸದ ಸರ್ಕಾರ, ಈ ಬಾರೀ ಬಜೆಟ್ ನಲ್ಲಿ ರಾಜಧಾನಿಗೆ ಏನೆಲ್ಲ ಗಿಫ್ಟ್ ಕೊಡಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಸದ್ಯ ನಾಳೆ 16ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು ಸಿದ್ದು ಲೆಕ್ಕಾಚಾರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ರಾಜ್ಯಕ್ಕೆ ಸಾಕಷ್ಟು ಸಮಸ್ಯೆಗಳ ಮಹಾಪುರವೇ ಇದೆ.ಇತ್ತ ರಾಜಧಾನಿಯಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವವಾಡ್ತಿದ್ದು, ಸಿದ್ದರಾಮಯ್ಯ ಬಜೆಟ್ ನಲ್ಲಿ ಸಿಹಿ ಕೊಡ್ತಾರಾ ಅನ್ನೋ ಕುತೂಹಲ ಮನೆಮಾಡಿದೆ. ಮೂಲಭೂತ ಸೌಕರ್ಯಗಳು. ಕುಡಿಯುವ ನೀರು, ಟ್ರಾಫಿಕ್‌ ಸಮಸ್ಯೆ, ಸುಗಮ ಸಂಚಾರ ವ್ಯವಸ್ಥೆ, ಗುಂಡಿಗಳಿಲ್ಲದ ರಸ್ತೆಗಳು, ಮೆಟ್ರೋ ಕಾಮಗಾರಿ ಚುರುಕುಗೊಳಿಸುವುದು, ಬಿಎಂಟಿಸಿ ಬಸ್‌ ಸಂಚಾರ ಹೆಚ್ಚಳ, ಸಬ್‌ ಅರ್ಬನ್‌ ರೈಲು ವ್ಯವಸ್ಥೆ ಸೇರಿ ಹಲವು ನಿರೀಕ್ಷೆಗಳನ್ನ ಹೊತ್ತಿರೋ ಮಹಾನಗರಕ್ಕೆ ಗ್ಯಾರಂಟಿ ಸರ್ಕಾರ ಏನೆಲ್ಲ ಗಿಫ್ಟ್ ಕೊಡಬಹುದು ಅನ್ನೋ ಚರ್ಚೆ ಜೋರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ