ಪಠ್ಯ ಪುಸ್ತಕ ವಿವಾದ: ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ, ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದ ದೇವನೂರ ಮಹಾದೇವ

| Updated By: ರಶ್ಮಿ ಕಲ್ಲಕಟ್ಟ

Updated on: May 24, 2022 | 5:01 PM

ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟ ಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ.

ಪಠ್ಯ ಪುಸ್ತಕ ವಿವಾದ: ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ, ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದ ದೇವನೂರ ಮಹಾದೇವ
ದೇವನೂರು ಮಹಾದೇವ
Image Credit source: Deccan Herald
Follow us on

ರಾಜ್ಯದಲ್ಲಿ ಪಠ್ಯ ಪುಸ್ತಕ (Text Book) ವಿವಾದ ದಿನಕ್ಕೊಂದು ಚರ್ಚೆಯನ್ನು ಹುಟ್ಟುಹಾಕುತ್ತಿರುವ ಹೊತ್ತಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ದೇವನೂರು ಮಹಾದೇವ (Devanur Mahadeva) ಅವರು ನನ್ನ ಬರಹವನ್ನು ಪಠ್ಯಪುಸ್ತಕದಲ್ಲಿ ಬಳಸುವುದು ಬೇಡ ಎಂದು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರತ್ರ ಬರೆದಿರುವ ಅವರು ಪಠ್ಯ ಪರಿಷ್ಕರಣೆಯ ವಾದ ವಿವಾದಗಳು ನಡೆಯುತ್ತಿದೆ. ಹತ್ತನೆ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ ಕೆಲವು ಸಲ ಸೇರಿದನ್ನು ಕೈ ಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿ ಗಳಿಗೆಗಳಿಗೆಗಳಿಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟ ಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಇದಕ್ಕೆ  ಕಾರಣವನ್ನೂ ನೀಡಿರುವ  ದೇವನೂರು ಯಾಕೆಂದರೆ,
(1) ಈ ಹಿಂದೆ ಪಠ್ಯಗಳಲ್ಲಿದ್ದ ಎಲ್. ಬಸವರಾಜು, ಎ. ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಎಂತಲೇ ಅರ್ಥ.
(2) ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎನ್ನುತ್ತಾರೆ. ಭಾರತದಂತಹ ಸಂಕೀರ್ಣ ದೇಶದಲ್ಲಿ, ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ.90ರಷ್ಟು ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ, ಅವರವರ ಅಡಿಗೆ ಮನೆ ವಾಸನೆ ಪ್ರಿಯವಾಗುವಂತೆ! ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ| ಮುರಳಿ ಮನೋಹರ ಜೋಷಿಯವರು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುರ್ವರ್ಣ ಹಿಂದೂ ಪುಭೇದದ ಆರ್‍‌ಎಸ್‌ಎಸ್‌ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ.

ಈ ಪಠ್ಯಗಳೆಲ್ಲಾ ಪಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸಾಪ್, ಇ-ಮೇಲ್, ಆನ್‌ಲೈನ್ ಕ್ಲಾಸ್ ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕುವೆಂಪು ಪಾಠ ಕೈಬಿಟ್ಟಿಲ್ಲ: ಬರಗೂರು ರಾಮಚಂದ್ರಪ್ಪ

ಇದನ್ನೂ ಓದಿ
ಪಠ್ಯ ಪುಸ್ತಕ ಪರಿಷ್ಕರಣೆ: ಕುವೆಂಪು ಪಾಠ ಕೈಬಿಟ್ಟಿಲ್ಲ- ಬರಗೂರು ರಾಮಚಂದ್ರಪ್ಪ, ಕಾಂಗ್ರೆಸ್​ಗೆ ಕನ್ನಡದ ಸಮಸ್ಯೆ- ಬಿಸಿ ನಾಗೇಶ್
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಭಗತ್​, ಹೆಡ್ಗೆವಾರ್, ನಾರಾಯಣ ಗುರು ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ: ರೋಹಿತ್ ಚಕ್ರತೀರ್ಥ
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೆವಾರ್ ವಿಚಾರ ಸೇರಿಸಿದರೆ ಏನು ತಪ್ಪು: ಸಚಿವ ಸುನಿಲ್​ ಕುಮಾರ್

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ನಡೆಯುತ್ತಿರುವ ವಾದ-ವಿವಾದಗಳಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪಠ್ಯ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷರಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್, ಕೆಂಪೇಗೌಡ, ಮದಕರಿ ನಾಯಕರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ.
ಕುವೆಂಪು ಪಠ್ಯವನ್ನು ನಾವು ಕೈಬಿಟ್ಟಿದ್ದೇವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಇದು ಅಪ್ಪಟ ಸುಳ್ಳು. ಕುವೆಂಪು ಪಾಠ ಕೈಬಿಟ್ಟು ಕನ್ನಡ ಪಠ್ಯ ರಚಿಸಲು ಸಾಧ್ಯವೇ? 10ನೇ ತರಗತಿ, 7ನೇ ತರಗತಿಯಲ್ಲಿ ಕುವೆಂಪು ಪಾಠ ಇದೆ. 7ನೇ ತರಗತಿ ಸಮಾಜ ವಿಜ್ಞಾನದ ಭಾಗ 2ರಲ್ಲಿ ಮಹಾತ್ಮ ಗಾಂಧಿ ಪಾಠ ಇದೆ. ಸಾವರ್ಕರ್ ಕುರಿತಂತೆ ಯಾವುದೇ ಅಂಶಗಳನ್ನು ನಾವು ಸೇರಿಸಿಲ್ಲ. ಪ್ರೌಢಶಾಲೆಯವರೆಗೂ ಸಕಾರಾತ್ಮಕ ಅಂಶಗಳನ್ನು ಕೊಡಬೇಕು. ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಪರ-ವಿರೋಧ ಚರ್ಚೆ, ವಾಗ್ವಾದ ಕುರಿತಂತೆ ಅಧ್ಯಯನ ಮಾಡಬೇಕು. ಈ ವಿವಾದ ಅಂತ್ಯ ಮಾಡುವತ್ತ ಶಿಕ್ಷಣ ಸಚಿವರು ಗಮನಹರಿಸಲಿ. ಶೈಕ್ಷಣಿಕ ಕ್ಷೇತ್ರ ಕಲುಷಿತವಾಗದಿರಲಿ ಎಂದು ಅವರು ಸಲಹೆ ಮಾಡಿದರು.

ಅಂಬೇಡ್ಕರ್ ಕುರಿತಂತೆ 8ನೇ ತರಗತಿ ಭಾಗ 1ರಲ್ಲಿ ಪಾಠ ಇದೆ. ಹತ್ತನೇ ತರಗತಿಯ ಭಾಗ 2ರಲ್ಲಿ ಪಾಠ ಇದೆ. 9ನೇ ತರಗತಿಯ ಪಠ್ಯದಲ್ಲೂ ಸಂವಿಧಾನ ರಚನೆಯ ಬಗ್ಗೆ ಅಂಬೇಡ್ಕರ್ ಪೋಟೋ ಹಾಕಿ ವಿವರ ನೀಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕುರಿತಂತೆ ಆರನೇ ತರಗತಿ ಭಾಗ 2ರಲ್ಲಿ , ಹತ್ತನೇ ತರಗತಿ ಭಾಗ 1ರಲ್ಲಿ ಮಾಹಿತಿ ಇದೆ. 5ನೇ ತರಗತಿಯಲ್ಲಿ ಪ್ರತೇಕ ಪಾಠ ಇದೆ. ಮದಕರಿ ನಾಯಕರ ಬಗ್ಗೆ ನಾಡಪ್ರಭು, ಪಾಳೇಗಾರರ ಬಗ್ಗೆ ಪ್ರತೇಕ ಪಾಠ ಬರೆಸಿದ್ದೇವೆ. ಅದರಲ್ಲಿ ಮದಕರಿ ನಾಯಕರ ಬಗ್ಗೆ ಪಾಠ ಇದೆ. ಅದರ ಜೊತೆಗೆ ಸುರಪುರ ನಾಯಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು. ರಾಣಿ ಅಬ್ಬಕ್ಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನದ ಭಾಗ 2 ರಲ್ಲಿ ಅನೇಕ ವಿವರ ಕೊಟ್ಟಿದ್ದೇವೆ. ಯಲಹಂಕ ಪ್ರಭುಗಳ ಬಗ್ಗೆ 7ನೇ ತರಗತಿ ಭಾಗ 1 ರಲ್ಲಿ ಪ್ರತೇಕ ಪಾಠ ನೀಡಲಾಗಿದೆ.

ಸಚಿವರು ತಪ್ಪು ಮಾಹಿತಿ ನೀಡಬಾರದು. ನನ್ನ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಮೈಸೂರು ಒಡೆಯರ್ ಬಗ್ಗೆ ಪಠ್ಯಗಳಲ್ಲಿ ಕಡಿಮೆ ಮಾಹಿತಿ ಇದೆ ಎಂದಾದರೆ ಕಡಿಮೆ ಇದ್ದರೆ, ಪರಿಷ್ಕರಣೆ ಮೂಲಕ ಹೆಚ್ಚಿಸಬಹುದಿತ್ತಲ್ಲವೇ ಎಂದು ಶಿಕ್ಷಣ ಸಚಿವರನ್ನು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು. ವಾಸ್ತವದಲ್ಲಿ ಸಮಾಜ ವಿಜ್ಞಾನದ ಭಾಗ 1ರಲ್ಲಿ ಮೈಸೂರು ಒಡೆಯರ್ ಎಂಬ ಪ್ರತೇಕ ಅಧ್ಯಾಯವನ್ನೇ ಬರೆಯಲಾಗಿದೆ. ಇದರಲ್ಲಿ ಮೈಸೂರು ಒಡೆಯರ್ ಬಗ್ಗೆ ಎಲ್ಲ ವಿವರ ಕೊಡಲಾಗಿದೆ. ಮೈಸೂರು ಯುದ್ದಗಳ ಬಗ್ಗೆ ಪ್ರಸ್ತಾಪ ಮಾಡುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಬಗ್ಗೆ ವಿವರ ಕೊಡಲಾಗಿದೆ ಎಂದು ವಿವರಿಸಿದರು.

ಪಠ್ಯ ಪುಸ್ತಕ ವಿವಾದದ ಬಗ್ಗೆ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Tue, 24 May 22