AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರಕ್ಕೆ ಖಾಸಗಿಯವರಿಂದಲೂ ಹಲವು ಬೇಡಿಕೆ!

ಆಗಸ್ಟ್ 5 ರಿಂದ ರಾಜ್ಯ ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಕರೆ ಕೊಟ್ಟಿರುವ ಮುಷ್ಕರಕ್ಕೆ ಬ್ರೇಕ್ ಹಾಕಲು ಸರ್ಕಾರ ನಾನಾ ಪ್ರಯತ್ನ ಮಾಡುತ್ತಿದೆ. ಆದರೆ ಯಾವ ಸಂಧಾನ ಸೂತ್ರಕ್ಕೂ ಸ್ಪಂದಿಸದ ನೌಕರರು ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಆಗಬಹುದಾದ ಅನಾನುಕೂಲ ತಪ್ಪಿಸಲು ಪರ್ಯಾಯ ಮಾರ್ಗದ ಹುಡುಕಾಟದಲ್ಲಿರುವ ಸಾರಿಗೆ ಇಲಾಖೆ, ಸರ್ಕಾರಿ ಬಸ್​ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್​​ಗಳನ್ನು ಕಾರ್ಯಾಚರಣೆಗೆ ಇಳಿಸಲು ಚಿಂತನೆ ನಡೆಸಿದೆ.

ಸಾರಿಗೆ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರಕ್ಕೆ ಖಾಸಗಿಯವರಿಂದಲೂ ಹಲವು ಬೇಡಿಕೆ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 02, 2025 | 3:58 PM

Share

ಬೆಂಗಳೂರು, ಆಗಸ್ಟ್ 2: ವೇತನ ಪರಿಷ್ಕರಣೆ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5 ರಂದು ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರ ಸಾರಿಗೆ ಇಲಾಖೆಯ (KSRTC, BMTC Employees Strike) ತಲೆ ಕೆಡಿಸಿದೆ. ಈಗಾಗಲೇ ನೌಕರರ ಜೊತೆ ಹಲವು ಸುತ್ತಿನ ಸಭೆ ನಡೆಸಿ ನೌಕರರನ್ನು ಸಮಾಧಾನಪಡಿಸಲು ವಿಫಲವಾಗಿದೆ. ಹೀಗಾಗಿ ಅಗಸ್ಟ್ 5 ಮುಷ್ಕರ ದಟ್ಟವಾಗಿದ್ದು, ಪ್ರಯಾಣಿಕರ ಪಾಡೇನು ಎಂಬ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಷ್ಕರದ (Transport Strike) ವೇಳೆ ಎದುರಾಗಬಹುದಾದ ಅನಾನುಕೂಲ, ಅವಾಂತರಗಳನ್ನು ತಪ್ಪಿಸಲು ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಚಿತ್ತ ಹರಿಸಿದೆ. ಹೀಗಾಗಿ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರ ಜೊತೆ ಸಾರಿಗೆ ಇಲಾಖೆ ಮಹತ್ವದ ಸಭೆ ನಡೆಸಿದೆ.

ಸಭೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್, ಅಪರ ಆಯುಕ್ತ ಮಲ್ಲಿಕಾರ್ಜುನ್ ಸೇರಿ ಹಿರಿಯ ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡಿರುವ ಸಾರಿಗೆ ಇಲಾಖೆ, ಮುಷ್ಕರ ಶುರುವಾದರೆ ಖಾಸಗಿ ಬಸ್ ಗಳ ಮೂಲಕ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಸೇವೆ ಒದಗಿಸಿ ಎಂದು ಹೇಳಿದ್ದಾರೆ.

ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರಿಂದಲೂ ಹಲವು ಬೇಡಿಕೆ!

ಸಭೆಯಲ್ಲಿ ಭಾಗಿ ಆಗಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಪ್ರಮುಖರು, ಮುಷ್ಕರದ ವೇಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ನಿಗಮ ಬಸ್​​ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್​​ಗಳನ್ನು ರಸ್ತೆಗೆ ಇಳಿಸಲು ಹಲವು ಬೇಡಿಕೆ ಮುಂದಿಟ್ಟಿದ್ದಾರೆ.

ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖ ಬೇಡಿಕೆಗಳೇನು?

  • ಮುಷ್ಕರದ ಅವಧಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ಖಾಸಗಿ ಸ್ಟೇಜ್ ಕ್ಯಾರೇಜ್ ನಿರ್ವಾಹಕರಿಗೆ ಕನಿಷ್ಠ 15 ದಿನಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು.
  • ಸಮಾನ ಪರವಾನಗಿ ವಿತರಣೆ (60:40 ನೀತಿ) 60:40 ಪರವಾನಗಿ ಅನುಪಾತವನ್ನು ಜಾರಿಗೆ ತರಲು ತಕ್ಷಣದ ಕ್ರಮಗಳನ್ನು ಪ್ರಾರಂಭಿಸಬೇಕು, ಇದರಲ್ಲಿ ಶೇ 60 ಸ್ಟೇಜ್ ಕ್ಯಾರೇಜ್ ಪರವಾನಗಿಗಳನ್ನು ರಾಜ್ಯ ಸಾರಿಗೆ ಸಂಸ್ಥೆಗಳಿಗೆ (STUಗಳು) ಹಂಚಲಾಗುತ್ತದೆ ಮತ್ತು ಶೇ 40 ಖಾಸಗಿ ನಿರ್ವಾಹಕರಿಗೆ ಮೀಸಲಿಡಲಾಗುತ್ತದೆ.
  • ಡಿಜಿಟಲ್ ಸರ್ವೈಲೆನ್ಸ್ ಆಡಿಟ್ (DSA) ಪ್ರಕರಣಗಳ ಅಡಿಯಲ್ಲಿ ವಿಧಿಸಲಾದ ದಂಡದ ಶೇ 50 ವಿನಾಯಿತಿಯನ್ನು ಖಾಸಗಿ ನಿರ್ವಾಹಕರಿಗೆ ವಿಸ್ತರಿಸಬೇಕು.
  • ಅಧಿಸೂಚಿತ ಸಮಯ ಮತ್ತು ಮಾರ್ಗಗಳನ್ನು ಅನಧಿಕೃತವಾಗಿ ಅತಿಕ್ರಮಿಸುವ ಸರ್ಕಾರಿ (STU) ಬಸ್‌ಗಳ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು.

ಸಾರಿಗೆ ಇಲಾಖೆ ಅಧಿಕಾರಿಗಳು, ನೌಕರರ ಜತೆ ಮಾತುಕತೆ ವಿಫಲ

ಕಾರ್ಮಿಕ ಇಲಾಖೆ ಕೂಡ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಜೊತೆ ಎರಡನೇ ಸುತ್ತಿನ ಸಂಧಾನ ಸಭೆ ನಡೆಸಿದ್ದು, ಫಲಪ್ರದವಾಗಿಲ್ಲ. ಕೊನೆಗೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಎಲ್ಲರ ಚಿತ್ತ ಸಿಎಂ ಸಿದ್ದರಾಮಯ್ಯರತ್ತ ತಿರುಗಿದೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರ!

ಆಗಸ್ಟ್ 4, ಅಂದರೆ ಸೋಮವಾರದಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಷ್ಕರಕ್ಕೆ ಮುಂದಾಗಿರುವ ನೌಕರರ ಜೊತೆ ನಿರ್ಣಾಯಕ ಸಭೆ ನಡೆಸಲಿದ್ದು, ಅಗಸ್ಟ್ 5 ರ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಾರೆ ಈ ಎಲ್ಲಾ ವಿದ್ಯಮಾನಗಳ ಮಧ್ಯೆ ರಾಜ್ಯದ ಲಕ್ಷಾಂತರ ಪ್ರಯಾಣಿಕರು ಆತಂಕದಲ್ಲಿ ಇರುವುದಂತೂ ಸತ್ಯ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ