ಸಾರಿಗೆ ನೌಕರರ ಮುಷ್ಕರ: ನಾಳೆ ಮಹಿಳಾ ಪ್ರಯಾಣಿಕರಿಗಿಲ್ಲ ಉಚಿತ ಪ್ರಯಾಣದ ಭಾಗ್ಯ
ಸಾರಿಗೆ ನೌಕರರ ಮುಷ್ಕರ ನಾಳೆ ನಡೆಯುವ ಸಾಧ್ಯತೆ ಇದೆ. ಈ ಮುಷ್ಕರದಿಂದ 4 ನಿಗಮದ ಬಸ್ ಸಂಚಾರ ಬಂದ್ ಆಗಲಿದೆ. ಇದರಿಂದ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ. ಮುಷ್ಕರದಿಂದ ಬಸ್ ಸಂಚಾರ ಸ್ಥಗಿತಗೊಳ್ಳುವುದರಿಂದ, ಮಹಿಳಾ ಉದ್ಯೋಗಿಗಳು, ವಿದ್ಯಾರ್ಥಿನಿಯರು ಮತ್ತು ಯಾತ್ರಿಕರಿಗೆ ತೊಂದರೆಯಾಗುತ್ತದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಲಕ್ಷಾಂತರ ಮಹಿಳೆಯರು ಪ್ರತಿದಿನ ಪ್ರಯಾಣಿಸುತ್ತಾರೆ.

ಬೆಂಗಳೂರು, ಆಗಸ್ಟ್ 04: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಮಂಗಳವಾರ (ಆ.05) ದಂದು ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ (Transport Employees Strike) ನಡೆಸುತ್ತಾರೆ ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ. ಆದರೆ ಮತ್ತೊಂದಡೆ, ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಸಾರಿಗೆ ನೌಕರರು ನಾಳೆ ಮುಷ್ಕರ ನಡೆಸಿದರೇ, ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಲಿದೆ. ಅದರಲ್ಲೂ, ಮಹಿಳಾ ಪ್ರಯಾಣಿಕರು ಅತಿ ಹೆಚ್ಚು ಪರದಾಡುತ್ತಾರೆ.
ಹೌದು, ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕೂ ನಿಗಮದ (KSRTC, NWKRTC, KKRTC, BMTC) ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಾಲ್ಕೂ ನಿಗಮಗಳಲ್ಲಿ 2025ರ ಜುಲೈ 14ರವರೆಗೆ 500 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಒಂದು ವೇಳೆ ಮಂಗಳವಾರ ಮುಷ್ಕರದಿಂದ ಬಸ್ ಸಂಚಾರ ಸ್ಥಗಿತಗೊಂಡರೇ ಈ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳಾ ಉದ್ಯೋಗಿಗಳು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಮತ್ತು ಪುಣ್ಯಕ್ಷೇತ್ರಗಳಿಗೆ ತೆರಳಬೇಕು ಅಂತ ಯೋಚಿಸಿರುವ ಮಹಿಳಾ ಯಾತ್ರಿಕರಿಗೆ ಬಸ್ ಸಂಚಾರ ಸ್ಥಗಿತದ ಬಿಸಿ ಮುಟ್ಟಲಿದೆ. ಮಹಿಳಾ ಪ್ರಯಾಣಿಕರು ಸಾಕಷ್ಟು ಪರದಾಡುವ ಸಾಧ್ಯತೆ ಇದೆ.
4 ನಿಗಮಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರು
ನಾಲ್ಕೂ ನಿಗಮಗಳಲ್ಲಿ 2025ರ ಜುಲೈ 14ರವರೆಗೆ 500 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ನಾಲ್ಕೂ ನಿಗಮಗಳಲ್ಲಿ ಪ್ರತಿದಿನ ಅಂದಾಜು 80 ಲಕ್ಷಕ್ಕೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ.
ಬಿಎಂಟಿಸಿಯಲ್ಲಿ 157.33 ಕೋಟಿ, ಕೆಎಸ್ಆರ್ಟಿಸಿಯಲ್ಲಿ 151 ಕೋಟಿ, ಎನ್ಡಬ್ಲೂಕೆಆರ್ಟಿಸಿಯಲ್ಲಿ 117 ಕೋಟಿ ಮತ್ತು ಕೆಕೆಆರ್ಟಿಸಿಯಲ್ಲಿ 72 ಕೋಟಿ ಮಹಿಳೆಯರು ಜುಲೈ 14ರವರೆಗೆ ಸಂಚಾರ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಈಗ ಏರಿಕೆಯಾಗಿರುವ ಸಾಧ್ಯತೆಯೂ ಇದೆ. ಇಷ್ಟು ಮಂದಿ ಮಹಿಳಾ ಪ್ರಯಾಣಿಕರು ನಾಲ್ಕೂ ನಿಗಮಗಳಲ್ಲಿ ಸಂಚರಿಸಿದ್ದು, ಮುಷ್ಕರಿಂದ ಬಸ್ ಸಂಚಾರ ಸ್ಥಗಿತಗೊಂಡರೇ ಇವರು ಪರದಾಡಲಿದ್ದಾರೆ.
4 ನಿಗಮಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ, ಆದಾಯ, ನೌಕರರ ಸಂಖ್ಯೆ ಮತ್ತು ಬಸ್ಸುಗಳ ಸಂಖ್ಯೆ
KSRTC
- ಕೆಎಸ್ಆರ್ಟಿಸಿ ಬಸ್ಸುಗಳ ಸಂಖ್ಯೆ- 8893
- ಎಸಿ ಬಸ್ಸುಗಳ ಸಂಖ್ಯೆ- 447
- ಸಿಬ್ಬಂದಿಗಳ ಸಂಖ್ಯೆ- 32,907
- ಪ್ರಯಾಣಿಕರ ಸಂಖ್ಯೆ ಪ್ರತಿದಿನ- 33 ಲಕ್ಷದ 91 ಸಾವಿರ
- ಒಂದು ದಿನದ ಕೆಎಸ್ಆರ್ಟಿಸಿ ಕಲೆಕ್ಷನ್- ಸುಮಾರು 15ಕೋಟಿ ರೂ.
BMTC
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ- ಬಸ್ಸುಗಳ ಸಂಖ್ಯೆ- 6949
- ವಿದ್ಯುತ್ ಚಾಲಿತ ಬಸ್ಸುಗಳ ಸಂಖ್ಯೆ-1492
- ಎಸಿ ಬಸ್ಸುಗಳ ಸಂಖ್ಯೆ- 523
- ನಾರ್ಮಲ್ ಬಸ್ಸುಗಳ ಸಂಖ್ಯೆ- 5673 ಬಸ್ಸುಗಳು.
- ಸಿಬ್ಬಂದಿಗಳ ಸಂಖ್ಯೆ- 29,457
- ಪ್ರತಿದಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ- 43 ಲಕ್ಷ
- ಒಂದು ದಿನದ ಕಲೆಕ್ಷನ್ – 6 ರಿಂದ 7 ಕೋಟಿ
- ಎಲೆಕ್ಟ್ರಿಕ್ ಬಸ್ಗಳ ಮಾಹಿತಿ
- ಸ್ವಿಚ್ ಸಂಸ್ಥೆಯ ಬಸ್ಸುಗಳು-300
- ಟಾಟಾ ಸಂಸ್ಥೆಯ ಬಸ್ಸುಗಳು – 958
- ಅಶೋಕ್ ಲೇಲ್ಯಾಂಡ್ ಬಸ್ಸುಗಳು-163
- ಎನ್.ಟಿ.ಪಿ.ಸಿ – 90
KKRTC (ಕಲ್ಯಾಣ ಕರ್ನಾಟಕ)
- ಬಸ್ಸುಗಳ ಸಂಖ್ಯೆ-4673
- ಎಸಿ ಆ್ಯಂಡ್ ನಾನ್ ಎಸಿ ಬಸ್ಸುಗಳ ಸಂಖ್ಯೆ- 167
- ಸಿಬ್ಬಂದಿಗಳ ಸಂಖ್ಯೆ- 19,286
- ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ- 16 ಲಕ್ಷದ 50 ಸಾವಿರ
- ಒಂದು ದಿನದ ಕಲೆಕ್ಷನ್- ಸುಮಾರು 6 ಕೋಟಿ 94 ಲಕ್ಷದ 36 ಸಾವಿರ.
NWKRTC- (ವಾಯುವ್ಯ ಕರ್ನಾಟಕ)
- ಬಸ್ಸುಗಳ ಸಂಖ್ಯೆ- 5307
- ಅದರಲ್ಲಿ 61 ಎಸಿ ಬಸ್ಸುಗಳಿವೆ.
- ಒಟ್ಟು ಸಿಬ್ಬಂದಿಗಳ ಸಂಖ್ಯೆ – 20877
- ಪ್ರತಿದಿನ ಪ್ರಯಾಣ ಮಾಡುವ ಸರಾಸರಿ ಪ್ರಯಾಣಿಕರ ಸಂಖ್ಯೆ- 25 ಲಕ್ಷದ 77 ಸಾವಿರ.
- ಒಂದು ದಿನದ ಸಾರಿಗೆ ಕಲೆಕ್ಷನ್- ಸುಮಾರು 7 ಕೋಟಿ 76 ಲಕ್ಷದ 9 ಸಾವಿರ.
ಇದನ್ನೂ ಓದಿ: ಸಿಎಂ ಸಂಧಾನ ಸಭೆ ವಿಫಲ: ಸಾರಿಗೆ ಮುಷ್ಕರ ಫಿಕ್ಸ್, ನಾಳೆ ಸಾರಿಗೆ ಬಸ್ಗಳು ರಸ್ತೆಗೆ ಇಳಿಯಲ್ಲ
ಒಟ್ಟು ನಾಲ್ಕು ನಿಗಮದ ಬಸ್ಸುಗಳ ಸಂಖ್ಯೆ- 24,154, ನಾಲ್ಕು ನಿಗಮದ- ಸಿಬ್ಬಂದಿಗಳ ಸಂಖ್ಯೆ- 1,02,527, ನಾಲ್ಕು ನಿಗಮದ ಸಾರಿಗೆ ಆದಾಯ- 37 ಕೋಟಿ ರೂ. ಮತ್ತು ಪ್ರತಿದಿನ ನಾಲ್ಕು ನಿಗಮದ ಬಸ್ಸುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಒಟ್ಟು ಸಂಖ್ಯೆ- 1 ಕೋಟಿ 17 ಲಕ್ಷ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Mon, 4 August 25




