ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಹೇರಲಾಗಿದ್ದ ಲಾಕ್ಡೌನ್ ಹಂತಹಂತವಾಗಿ ಸಡಿಲಿಕೆಯಾಗುತ್ತಿದೆ. ಇಂದಿನಿಂದ ರಾಜ್ಯದ ಹಲವೆಡೆ ಬಸ್ ಸಂಚಾರ ಆರಂಭವಾಗುತ್ತಿದ್ದು, ಲಾಕ್ಡೌನ್ ಸಡಿಲಿಕೆಯ ಮೊದಲ ದಿನವೇ ಜನರು ಬಸ್ಗಾಗಿ ಮುಗಿಬಿದ್ದ ಘಟನೆಗಳೂ ವರದಿಯಾಗಿವೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಎರಡು ಸಾವಿರ ಬಿಎಂಟಿಸಿ ಬಸ್ಗಳನ್ನು ರಸ್ತೆಗಿಳಿಸುವುದಾಗಿ ಹೇಳಿಕೆ ಹೊರಬಿದ್ದಿತ್ತಾದರೂ ಸದ್ಯ ಬೆರಳೆಣಿಕೆಯಷ್ಟು ಬಸ್ ಮಾತ್ರ ಸಂಚಾರ ಆರಂಭಿಸಿದ್ದು, ಬಿಎಂಟಿಸಿ ಇರಲಿದೆ ಎಂದು ನಂಬಿಕೊಂಡು ಬಂದ ಪ್ರಯಾಣಿಕರು ಪರದಾಡುವಂತಾಗಿದೆ. ಸರಿಸುಮಾರು 2 ತಿಂಗಳ ನಂತರ ಮೆಟ್ರೋ ಸಂಚಾರವೂ ಶುರುವಾಗುತ್ತಿದ್ದು, ಮೆಟ್ರೋದಲ್ಲಿ ಸಂಚರಿಸುವುದಕ್ಕೂ ಒಂದಷ್ಟು ನಿಯಮಾವಳಿಗಳನ್ನು ಪಾಲಿಸಬೇಕಿದೆ. ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ವರದಿಯಲ್ಲಿದೆ.
ಮೆಟ್ರೋ ಸಂಚಾರ: ಸುಮಾರು 2 ತಿಂಗಳ ನಂತರ ಆರಂಭವಾಗುತ್ತಿರುವ ಮೆಟ್ರೋ ಇಂದಿನಿಂದ ಬೆಳಗ್ಗೆ 7ರಿಂದ 11ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5ನಿಮಿಷಕ್ಕೆ ಒಂದರಂತೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸಂಚಾರ ನಡೆಸಲಿದೆ. ಆದರೆ, ಸ್ಮಾರ್ಟ್ಕಾರ್ಡ್ ಇದ್ದವರಿಗೆ ಮಾತ್ರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ನಿಲ್ದಾಣಗಳಲ್ಲಿ ಸ್ಮಾರ್ಟ್ಕಾರ್ಡ್ ರೀಚಾರ್ಜ್ ಮಾಡಿಕೊಂಡು ಪಯಣಿಸಬಹುದಾಗಿದೆ. ಮೆಟ್ರೋ ನಿಲ್ದಾಣದಲ್ಲಿ ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯವಾಗಿರಲಿದ್ದು, ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳಬೇಕಿದೆ. ಮುಖಗವಸು ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಹಾಗೂ ಎಲ್ಲಾ ಸಂದರ್ಭದಲ್ಲೂ ದೈಹಿಕ ಅಂತರ ಪಾಲಿಸಲೇಬೇಕು. ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು ಅಥವಾ ನಿಂತು ಪ್ರಯಾಣ ಮಾಡಬೇಕಿದ್ದು, ವಾರಾಂತ್ಯದ ಕರ್ಫ್ಯೂ ನಿಮಿತ್ತ ಶನಿವಾರ, ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ.
ಬಿಎಂಟಿಸಿ ಬಸ್ ಸಂಚಾರ: ಅನ್ಲಾಕ್ ಹಿನ್ನೆಲೆ ಇಂದಿನಿಂದ ಸುಮಾರು ಎರಡು ಸಾವಿರ ಬಸ್ಗಳು ಬೆಂಗಳೂರು ನಗರದಲ್ಲಿ ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ, ಮುಂಜಾನೆಯಿಂದ ಇಲ್ಲಿಯ ತನಕ ಕೇವಲ ಬೆರಳೆಣಿಕೆ ಬಸ್ಗಳು ಸಂಚಾರ ನಡೆಸುತ್ತಿದ್ದು, ಬಿಎಂಟಿಸಿ ಮಾತು ನಂಬಿಕೊಂಡು ಬಸ್ ಹತ್ತಲು ಬಂದವರು ಪರದಾಡುತ್ತಿದ್ದಾರೆ. ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ಗೆ ಬಸ್ಗಳು ಬಾರದ ಹಿನ್ನೆಲೆಯಲ್ಲಿ ಜನರು ಬೇರೆ ದಾರಿಯಿಲ್ಲದೇ ಆಟೋ ಹಿಡಿದು ತಾವು ತಲುಪಬೇಕಾದ ಜಾಗದತ್ತ ಮುಖ ಮಾಡುತ್ತಿದ್ದಾರೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆಕ್ಸಿಜನ್ ಟೆಸ್ಟ್ ಮಾಡಲಾಗುತ್ತಿದ್ದು, ಪರೀಕ್ಷೆಯ ನಂತರವಷ್ಟೇ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ ಸಂಚಾರ: ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ ಕೆಎಸ್ಆರ್ಟಿಸಿ ಬಸ್ ಸಂಚರಿಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ. ಅದರನ್ವಯ ತುಮಕೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ ಹೀಗೆ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ. ಆದರೆ, ಚಿಕ್ಕಮಗಳೂರು, ನೆಲಮಂಗಲ ಸೇರಿದಂತೆ ಕೆಲವೆಡೆ ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಆಗಮಿಸಿದ್ದರೂ ಬಸ್ ಬಾರದ ಹಿನ್ನೆಲೆ ಗೊಂದಲ ಉಂಟಾಗಿದೆ. ಕೆಲವು ಕಡೆಗಳಲ್ಲಿ ಜನ ಬಸ್ಗಾಗಿ ಮುಗಿಬಿದ್ದು ದೈಹಿಕ ಅಂತರ, ಕೊರೊನಾ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿರುವ ಘಟನೆಯೂ ನಡೆದಿದೆ. ಬಸ್, ಚಾಲಕರು ಹಾಗೂ ನಿರ್ವಾಹಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿಸಲು ಹೇಳಿ ಕರ್ತವ್ಯಕ್ಕೆ ಅವಕಾಶ ನೀಡಲಾಗುತ್ತಿದ್ದು, ಅನೇಕ ದಿನಗಳ ನಂತರ ಬಸ್ ಆರಂಭವಾಗುತ್ತಿರುವುದರಿಂದ ಸಿಬ್ಬಂದಿ ಬಸ್ಗೆ ಪೂಜೆ ಸಲ್ಲಿಸಿ, ಅಲಂಕಾರ ಮಾಡಿರುವ ದೃಶ್ಯಗಳೂ ಕಂಡುಬಂದಿವೆ.
ಇದನ್ನೂ ಓದಿ: Karnataka Unlock: 2ನೇ ಹಂತದ ಅನ್ಲಾಕ್: ಸೋಮವಾರದಿಂದಲೇ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್, ಶರತ್ತುಗಳು ಅನ್ವಯ