ವಕ್ಫ್ ಅಕ್ರಮದಲ್ಲಿ ಹಾಲಿ, ಮಾಜಿ ಸಚಿವರೂ ಶಾಮೀಲು: ದಾಖಲೆ ಇದೆ ಎಂದ ಲೆಹರ್ ಸಿಂಗ್
ಕರ್ನಾಟಕದ ವಕ್ಫ್ ಹಗರಣದಲ್ಲಿ ಹಾಲಿ ಮತ್ತು ಮಾಜಿ ಸಚಿವರು ಶಾಮೀಲಾಗಿರುವ ಬಗ್ಗೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ ಆರೋಪ ಮಾಡಿದ್ದಾರೆ. 40,000 ಪುಟಗಳ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದು, ಇದು ನ್ಯಾಯಮೂರ್ತಿ ಆನಂದ್ ಸಮಿತಿ ವರದಿಯ ಭಾಗವಾಗಿದೆ. ಸರ್ಕಾರ ಈ ದಾಖಲೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದು, ಕೇಂದ್ರಕ್ಕೆ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಮಾರ್ಚ್ 8: ವಕ್ಫ್ ಅಕ್ರಮದಲ್ಲಿ (Karnataka Wakf Controversy) ಹಾಲಿ, ಮಾಜಿ ಸಚಿವರೂ ಶಾಮೀಲಾಗಿದ್ದಾರೆ ಎಂದು ಬಿಜೆಪಿ (BJP) ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ (Lehar Singh Siroya) ಗಂಭೀರ ಆರೋಪಮ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಂದಿರುವ ದಾಖಲೆಗಳು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಕೊಟ್ಟಿರುವ ದಾಖಲೆಗಳು. ಒಟ್ಟು 40 ಸಾವಿರ ಪುಟಗಳ ದಾಖಲೆ ಇದೆ. ವಕ್ಫ್ ಆಸ್ತಿಗಳ ತನಿಖೆಗೆ ಸರ್ಕಾರವು ಜಸ್ಟೀಸ್ ಎನ್. ಆನಂದ್ ಸಮಿತಿ ರಚಿಸಿತ್ತು. ಜಸ್ಟೀಸ್ ಆನಂದ್ ಎಲ್ಲಾ ಡಿಸಿಗಳಿಗೆ ಪತ್ರ ಬರೆದಿದ್ದರು. ಡಿಸಿಗಳು ಜಸ್ಟೀಸ್ ಆನಂದ್ ಸಮಿತಿಗೆ ಕೊಟ್ಟಿರುವ ಮಾಹಿತಿ ಇದು ಎಂದು ಹೇಳಿದ್ದಾರೆ.
ಪ್ರತಿ ಜಿಲ್ಲೆಗಳಲ್ಲಿ ಯಾವ್ಯಾವ ರೀತಿ ಹಗರಣ ಆಗಿದೆ ಎಂಬುದು ಈ ದಾಖಲೆಗಳಲ್ಲಿ ಇದೆ. ಬಹಳ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಕೂಡ ಈ ದಾಖಲೆಗಳಲ್ಲಿದೆ. ಹಾಲಿ ಸಚಿವರು, ಮಾಜಿ ಸಚಿವರ ಹೆಸರುಗಳು ಕೂಡಾ ಈ ದಾಖಲೆಗಳಲ್ಲಿದೆ. ನಾನು ಯಾವುದೇ ರಾಜಕಾರಣಿಗಳ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
ದಾಖಲೆಗಳನ್ನಿಟ್ಟುಕೊಂಡು ಸುಮ್ಮನೆ ಕುಳಿತ ಸರ್ಕಾರ: ಸಿಂಗ್
ದಾಖಲೆಗಳನ್ನು ಆಧರಿಸಿ ಜಸ್ಟೀಸ್ ಆನಂದ್ 50 ಪುಟಗಳ ವರದಿ ತಯಾರಿಸಿದ್ದರು. ರಾಜ್ಯ ಸರ್ಕಾರ ಈ ದಾಖಲೆಗಳನ್ನು ಇಟ್ಟುಕೊಂಡು ಸುಮ್ಮನೆ ಕುಳಿತಿದೆ. ಇಷ್ಟು ದಾಖಲೆಗಳನ್ನು ಅಧ್ಯಯನ ಮಾಡಲು ನನ್ನಿಂದ ಸಾಧ್ಯವಿಲ್ಲ. ಈ ದಾಖಲೆಗಳನ್ನು ಸೋಮವಾರ ನಾನು ದೆಹಲಿಗೆ ತೆಗೆದುಕೊಂಡು ಹೋಗುತ್ತೇನೆ. ಕೇಂದ್ರ ಕಾನೂನು ಸಚಿವರಿಗೆ ಮತ್ತು ವಕ್ಪ್ ಆಸ್ತಿ ಕುರಿತ ಜೆಪಿಸಿಗೆ ದಾಖಲೆಗಳನ್ನು ಹಸ್ತಾಂತರ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಮಾನ ಮರ್ಯಾದಿ ಇದ್ದರೆ ನೋಟಿಸ್ ನೀಡಬೇಕಿತ್ತು: ಲೆಹರ್ ಸಿಂಗ್
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ, ಮುಸ್ಲಿಮರ ಬಗ್ಗೆ ಕಳಕಳಿ ಇದ್ದಿದ್ದರೆ ಆಸ್ತಿ ಕಬಳಿಸಿದವರಿಗೆ ನೋಟಿಸ್ ಕೊಡಬೇಕಿತ್ತು. ರಾಜ್ಯ ಸರ್ಕಾರಕ್ಕೆ ಧೈರ್ಯ ಇದ್ದರೆ ಜಸ್ಟೀಸ್ ಆನಂದ್ ಸಮಿತಿ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಈ ಬಗ್ಗೆ ಒತ್ತಡ ಹಾಕುವಂತೆ ನಾನು ವಿಪಕ್ಷ ನಾಯಕರಿಗೂ ಮನವಿ ಮಾಡುತ್ತೇನೆ ಎಂದು ಲೆಹರ್ ಸಿಂಗ್ ಹೇಳಿದರು.
ನಮ್ಮ ಶಾಸಕರು ಸದನದಲ್ಲಿ ವಿಷಯ ಎತ್ತಲಿ ಎಂದು ನಾನು ಆಗ್ರಹಿಸುತ್ತೇನೆ. ಕಲಬುರಗಿಯಿಂದ ಕಳುಹಿಸಿರುವ ದಾಖಲೆಗಳಲ್ಲಿ ಅಲ್ಲಿನ ಡಿಸಿ ಆಗಿದ್ದ ರಜನೀಶ್ ಗೋಯೆಲ್ ಅವರ ಸಹಿ ಇದೆ. ಕೆಲವು ದಾಖಲೆಗಳು ಮಿಸ್ಸಿಂಗ್ ಎಂದು ವರದಿ ಕೊಟ್ಟಿದ್ದಾರೆ. ಇದು ಕ್ರಿಮಿನಲ್ ಕೇಸ್ ಆಗಬೇಕು, ರಾಜ್ಯಪಾಲರು ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಅನ್ನು ಪೂರ್ತಿ ನಾಶ ಮಾಡಿ ಹೋಗೋಣ ಎಂದು ಸಿಎಂ ಸಿದ್ದರಾಮಯ್ಯ ಸಾಹೇಬರ ಮನಸ್ಸಿನಲ್ಲಿ ಬಂದು ಬಿಟ್ಟಿದೆ ಎಂದು ಅನ್ನಿಸುತ್ತದೆ ಎಂದು ಲೆಹರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?
ದಯವಿಟ್ಟು ಟೋಪಿ ಬಿಡಬೇಡಿ ಎಂದು ಮುಸ್ಲಿಮರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ನಿಮಗೆ ಬಹಳ ಕಾಲದಿಂದ ಟೋಪಿ ಹಾಕುತ್ತಲೇ ಬಂದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಕರ್ನಾಟಕ ಬಗ್ಗೆ ಕಾಳಜಿ ಇದ್ದರೆ ಆನಂದ್ ಸಮಿತಿ ವರದಿಯ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಿ ಎಂದು ಅವರು ಆಗ್ರಹಿಸಿದ್ದಾರೆ.