Karnataka Weather: ಕರ್ನಾಟಕದಲ್ಲಿ ಮತ್ತೆ ಮುಂದುವರೆಯಲಿದೆ ವರುಣನ ಆರ್ಭಟ; ಜುಲೈ 5ರ ತನಕ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗವಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 5ರವರೆಗೆ ಉತ್ತಮ ಮಳೆಯಾಗಲಿದೆ. ಮೂರ್ನಾಲ್ಕು ದಿನಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿದ್ದ ಮಳೆ ಅಲ್ಲಿ ಇಂದಿನಿಂದ ಕೊಂಚ ಕಡಿಮೆಯಾಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಜೂನ್ ತಿಂಗಳ ಆರಂಭದಲ್ಲಿ ಅಬ್ಬರಿಸಿದ್ದ ಮುಂಗಾರು ಕ್ರಮೇಣ ಇಳಿಮುಖವಾಗಿತ್ತು. ಇದೀಗ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಳೆ ಮತ್ತೆ ಮುಂದುವರೆದಿದ್ದು, ಜುಲೈ 5ರವರೆಗೂ ವರುಣನ ಆರ್ಭಟ ಮುಂದುವರೆಯುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಮಲೆನಾಡು ಭಾಗದಲ್ಲಿ ನಿನ್ನೆ ರಾತ್ರಿ ಗುಡುಗು, ಮಿಂಚು ಸಮೇತ ಮಳೆ ಸುರಿದಿದ್ದು, ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದೆ. ದಕ್ಷಿಣ ಒಳನಾಡಿನಲ್ಲಿ ಇನ್ನು 4 ದಿನ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಉತ್ತರ ಒಳನಾಡಿನಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇರಲಿದೆ. ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಲಭಿಸಿದೆ.
ಕರಾವಳಿ ಜಿಲ್ಲೆಗಳಲ್ಲೂ ನಾಲ್ಕೈದು ದಿನಗಳಿಂದ ಮಳೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿದ್ದು, ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಸಂಭವ ಇದೆ. ಉತ್ತರ ಒಳನಾಡಿನಲ್ಲೂ ಜುಲೈ 5ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದಿಂದಲೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ಕೆಲ ಭಾಗದಲ್ಲಿ ಉತ್ತಮ ಮಳೆಯಾಗಿತ್ತು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗವಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 5ರವರೆಗೆ ಉತ್ತಮ ಮಳೆಯಾಗಲಿದೆ. ಮೂರ್ನಾಲ್ಕು ದಿನಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿದ್ದ ಮಳೆ ಅಲ್ಲಿ ಇಂದಿನಿಂದ ಕೊಂಚ ಕಡಿಮೆಯಾಗಲಿದೆ. ಆದರೆ, ನೈರುತ್ಯ ಮುಂಗಾರು ದುರ್ಬಲವಾದ್ದರಿಂದ ಕರಾವಳಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೆರಡು ದಿನಗಳ ಕಾಲ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಅಕ್ಕಪಕ್ಕದ ರಾಜ್ಯಗಳು ಹಾಗೂ ದೇಶದ ಉತ್ತರ ಭಾಗದ ಕೆಲ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಒಡಿಶಾ, ಭುವನೇಶ್ವರದಲ್ಲಿ ಒಂದು ವಾರದಿಂದ ಭಾರೀ ಪ್ರಮಾಣದ ಮಳೆ ಸುರಿದಿದೆ. ಭುವನೇಶ್ವರದ ಅನೇಕ ಕಡೆ ರಸ್ತೆಗಳು ಬಂದ್ ಆಗಿದ್ದು, ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿ ಅವ್ಯವಸ್ಥೆಯಾಗಿದೆ. ಜತೆಗೆ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ರಾಜ್ಯಗಳಲ್ಲೂ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Monsoon ಈ ತಿಂಗಳಲ್ಲಿ ಸಾಧಾರಣ ಮುಂಗಾರು ಸಾಧ್ಯತೆ; ಎರಡನೇ ವಾರದಲ್ಲಿ ಅಬ್ಬರಿಸಲಿದೆ ಮಳೆ