Weekend Curfew: ಕರ್ನಾಟಕದಲ್ಲಿ 2ನೇ ವಾರದ ವೀಕೆಂಡ್ ಕರ್ಫ್ಯೂ: ರಸ್ತೆಗಳಿದ ಪೊಲೀಸರಿಂದ ಅಂಗಡಿ, ಮುಂಗಟ್ಟು ಬಂದ್
ಶುಕ್ರವಾರ ರಾತ್ರಿ 10 ಗಂಟೆಗೆ ಜಾರಿಯಾಗಿರುವ ವೀಕೆಂಡ್ ಕರ್ಫ್ಯೂ ಆದೇಶವು ಸೋಮವಾರ ಮುಂಜಾನೆ 5ರವರೆಗೂ ಜಾರಿಯಲ್ಲಿರುತ್ತದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಪ್ರಬಲವಾಗುತ್ತಿದೆ. ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯದಲ್ಲಿ ಸತತ ಎರಡನೇ ವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರು ರಸ್ತೆಗಳಿಗೆ ಇಳಿದಿದ್ದು, ರಾತ್ರಿ 9.30ರಿಂದಲೇ ಜನರಿಗೆ ಎಚ್ಚರಿಕೆ ಹೇಳಿದರು. 10 ಗಂಟೆಯ ನಂತರವೂ ತೆಗೆದಿದ್ದ ಅಂಗಡಿಗಳ ಬಾಗಿಲು ಹಾಕಿಸಿದರು. ಹಲವು ನಗರಗಳಲ್ಲಿ ಜನರು ಸ್ವಪ್ರೇರಣೆಯಿಂದಲೇ 10 ಗಂಟೆಗೆ ಮೊದಲೇ ಸಂಚಾರ, ವಾಣಿಜ್ಯ ಚಟುವಟಿಕೆ ಸ್ತಬ್ಧಗೊಳಿಸಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ರಸ್ತೆಗಳ ಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಜಂಕ್ಷನ್ಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ರಾತ್ರಿ 10 ಗಂಟೆ ಬಳಿಕ ಸಂಚರಿಸುವ ಎಲ್ಲ ವಾಹನಗಳನ್ನೂ ತಡೆದು ತಪಾಸಣೆ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಗೆ ಜಾರಿಯಾಗಿರುವ ವೀಕೆಂಡ್ ಕರ್ಫ್ಯೂ ಆದೇಶವು ಸೋಮವಾರ ಮುಂಜಾನೆ 5ರವರೆಗೂ ಜಾರಿಯಲ್ಲಿರುತ್ತದೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡಿದರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಕೊರೊನಾ ತಡೆಗೆ ವೀಕೆಂಡ್ ಕರ್ಫ್ಯೂ ಆದೇಶ ಜಾರಿಯಾಗುವ ಮೊದಲೇ ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಊರುಗಳನ್ನು ತಲುಪಲು ಸಾಕಷ್ಟು ಜನರು ವಿಮಾನ ನಿಲ್ದಾಣಕ್ಕೆ ತೆರಳಿದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಸೇರಿತ್ತು.
ತುಮಕೂರು ಜಿಲ್ಲೆಯಲ್ಲಿ 10 ಗಂಟೆಗೆ ಮುಂಚಿತವಾಗಿಯೇ ವರ್ತಕರು ಅಂಗಡಿಗಳ ಬಾಗಿಲು ಹಾಕಿದ್ದರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಬಾರದು, ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ಇಲ್ಲ. ಮನೆಗಳಲ್ಲಿಯೇ ಹಬ್ಬ ಆಚರಿಸಬೇಕು. ಮನೆಯಿಂದ ಮನೆಗೆ ತೆರಳದಂತೆ ಸೂಚನೆ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸಿರುವ ಮಡಿಕೇರಿಯಲ್ಲಿ ಪೊಲೀಸರು ರಸ್ತೆಗಳಿಗೆ ಇಳಿದಿದ್ದಾರೆ. ನಗರದ ಜ.ತಿಮ್ಮಯ್ಯ ವೃತ್ತದ ಬಳಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯ ಓಡಾಡುತ್ತಿರುವವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಬೇಗ ಮನೆ ಸೇರಿಕೊಳ್ಳುವಂತೆ ತಾಕೀತು ಮಾಡುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಹಾಸನದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಬಸ್ ನಿಲ್ದಾಣವು ಜನರಿಲ್ಲದೆ ಬಿಕೋ ಎನ್ನುತ್ತಿದ್ದು, ರಸ್ತೆಯಲ್ಲಿ ವಾಹನಗಳು ಬೆರಳೆಣಿಕೆಯಷ್ಟು ಮಾತ್ರ ಸಂಚರಿಸುತ್ತಿವೆ. ತರಾತುರಿಯಲ್ಲಿ ಹಬ್ಬದ ಖರೀದಿ ಮುಗಿಸಿ ಜನರು ಮನೆ ಸೇರಿದ್ದಾರೆ. ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಅವದಿಗೂ ಮುನ್ನವೇ ವ್ಯಾಪಾರ ಸ್ಥಗಿತಗೊಂಡಿದೆ.
ಎರಡನೇ ವಾರದ ವೀಕೆಂಡ್ ಕರ್ಫ್ಯೂ ಆರಂಭ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿ ನಗರದ ಬಹುತೇಕ ರಸ್ತೆಗಳು ಸ್ತಬ್ಧವಾಗಿವೆ. ಫೀಲ್ಡಿಗಿಳಿದ ಪೊಲೀಸರು ನಗರದ ಖಡೇಬಜಾರ್, ರವಿವಾರ ಪೇಟೆ, ಗಣಪತಿ ಗಲ್ಲಿ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾರೆ. ಅಂಗಡಿ ಮುಂಗಟ್ಟು ಬಂದ್ ಮಾಡಿ, ಜನರು ಮನೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: Covid 19 Karnataka Update: 28 ಸಾವಿರ ದಾಟಿತು ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ಪ್ರಮಾಣ ಶೇ 13 ಇದನ್ನೂ ಓದಿ: Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು