ರಾಜ್ಯದ ಇತಿಹಾಸದಲ್ಲೇ ಮೊದಲ: ಕರ್ನಾಟಕದಲ್ಲಿ ಸಬ್ ರಿಜಿಸ್ಟರ್ ವರ್ಗಾವಣೆಗೆ ಹೊಸ ನಿಯಮ
ಕಂದಾಯ ಇಲಾಖೆಯಲ್ಲಿ ಮೊದಲ ಬಾರಿಗೆ, ಬೆಂಗಳೂರಿನಲ್ಲಿ 90 ಉಪ ನೋಂದಣಿ ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿವಾರಣೆಗೆ ಈ ಕ್ರಮ ಸಹಕಾರಿಯಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ ಈ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹೊಸ ವ್ಯವಸ್ಥೆಯು ಇಲಾಖೆಯಲ್ಲಿನ ವರ್ಗಾವಣೆ ದಂಧೆಗೆ ಕಡಿವಾಣ ಹಾಕುವ ನಿರೀಕ್ಷೆಯಿದೆ.
ಬೆಂಗಳೂರು, ಡಿಸೆಂಬರ್ 12: ಕಂದಾಯ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕೌನ್ಸಿಲಿಂಗ್ (Counseling-based transfers) ಮೂಲಕ 31 ಜಿಲ್ಲೆಯ 90 ಉಪ ನೋಂದಣಿ ಅಧಿಕಾರಿಗಳನ್ನು ಏಕಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ ಉಪ ನೋಂದಣಾಧಿಕಾರಿಗಳ ವರ್ಗಾವಣೆ ಜಾರಿ ಮಾಡಲಾಗಿದೆ. ಆ ಮೂಲಕ ವರ್ಗಾವಣೆಯಲ್ಲಿ ಭ್ರಷ್ಟಾಚಾರ ತಡೆಗೆ ನಿರ್ಣಾಯಕ ಕ್ರಮಕೈಗೊಳ್ಳಲಾಗಿದೆ.
ಇತಿಹಾಸದಲ್ಲೇ ಇದು ಮೊದಲ ಪ್ರಯತ್ನ
ಕಂದಾಯ ಇಲಾಖೆಯಲ್ಲಿ ವರ್ಗಾವಣೆ ಇತಿಹಾಸದಲ್ಲೇ ಇದು ಮೊದಲ ಪ್ರಯತ್ನವಾಗಿದ್ದು, ಒಂದು ರೂಪಾಯಿ ಭ್ರಷ್ಟಾಚಾರದ ಆರೋಪವಿಲ್ಲದೆ ವರ್ಗಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 31 ಜಿಲ್ಲೆಯ 90 ನೋಂದಣಾಧಿಕಾರಿಗಳ ವರ್ಗಾವಣೆಗೆ ಇಂದು ಅಂಕಿತ ಹಾಕಲಾಗಿದೆ.
ಇದನ್ನೂ ಓದಿ: 8 ವರ್ಷಗಳ ನಂತ್ರ ಆರೋಗ್ಯ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ: ಸಚಿವ ದಿನೇಶ್ ಗುಂಡೂರಾವ್
ಉಪ ನೋಂದಣಾಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಹಿವಾಟು ಸೇರಿದಂತೆ ಭ್ರಷ್ಟಾಚಾರದ ಬಗ್ಗೆ ಈ ಹಿಂದೆ ಹಲವು ಬಾರಿ ದೂರುಗಳು ಕೇಳಿಬಂದಿದ್ದವು. ವರ್ಗಾವಣೆ ದಂಧೆಯ ಬಗ್ಗೆ ಹಲವು ನಾಯಕರು ಸದನದಲ್ಲೇ ಧ್ವನಿ ಎತ್ತಿದ್ದರು. ಹೀಗಾಗಿ ಈ ಎಲ್ಲಾ ಅವ್ಯವಹಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
ಸಚಿವ ಕೃಷ್ಣ ಬೈರೇಗೌಡರಿಂದ ದಿಟ್ಟ ಹೆಜ್ಜೆ
ವರ್ಗಾವಣೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವ ಸಲುವಾಗಿ ಸಚಿವ ಕೃಷ್ಣ ಬೈರೇಗೌಡರಿಂದ ದಿಟ್ಟ ಹೆಜ್ಜೆ ಇಡಲಾಗಿದ್ದು, ಈ ಸಾಲಿನಿಂದ ಉಪ-ನೋಂದಣಾಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸುವುದಾಗಿ ಭರವಸೆ ನೀಡಲಾಗಿತ್ತು. ಇಂದು ರಾಜ್ಯದ 31 ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 90 ಜನ ಕೇಂದ್ರಸ್ಥಾನ ಸಹಾಯಕರು, ಹಿರಿಯ ಉಪನೋಂದಣಾಧಿಕಾರಿಗಳನ್ನು ಇಂದು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರ ನೇತೃತ್ವದಲ್ಲಿ ನವೆಂಬರ್ 04ರಿಂದಲೇ ಕೌನ್ಸಿಲಿಂಗ್ ನಡೆಸಲಾಗಿತ್ತು. ಈ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಸ್ವ-ಇಚ್ಚೆಯಿಂದ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆಯನ್ನು ಆಧರಿಸಿ ವರ್ಗಾಯಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಿಕ್ಷಕರಿಗೆ ಅನ್ಯಾಯ: ವರ್ಗಾವಣೆ ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹ
ಈ ನಡುವೆ ಕೆಲವು ಉಪ-ನೋಂದಣಾಧಿಕಾರಿಗಳು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದ್ದ ನ್ಯಾಯಾಲಯ, ವರ್ಗಾವಣೆ ವಿಚಾರವು ಸರ್ಕಾರದ ನೀತಿ ನಿರ್ಧಾರವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ತಿಳಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.