ವಿರೇಂದ್ರ, ವಿನಯ್ ಕುಲಕರ್ಣಿ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನ ಮೂರನೇ ಶಾಸಕ ಅರೆಸ್ಟ್
ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರು ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಇಡಿ ಬಂಧನಕ್ಕೊಳಗಾಗಿದ್ದು, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಬಂಧನವಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಕಾಂಗ್ರೆಸ್ ನ ಮತ್ತೋರ್ವ ಶಾಸಕನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಯಾರು? ಯಾವ ಪ್ರಕರಣ ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 09): ಕಾಂಗ್ರೆಸ್ (Congress) ಶಾಸಕ ವಿರೇಂದ್ರ ಪಪ್ಪಿ (Veerendra Puppy), ವಿನಯ್ ಕುಲಕರ್ಣಿ (Vinay Kulkarni) ಬಂಧನದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನ ಮತ್ತೋರ್ವ ಶಾಸಕ ಸತೀಶ್ ಸೈಲ್ ಅವರನ್ನು ಇಂದು(ಸೆಪ್ಟೆಂಬರ್ 09) ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದಾರೆ. ಹೌದು… ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಅರೆಸ್ಟ್ ಮಾಡಿದೆ. ಇದರೊಂದಿಗೆ ಬಂಧನಕ್ಕೊಳಗಾದ ಕರ್ನಾಟಕ ಕಾಂಗ್ರೆಸ್ನ ಮೂರನೇ ಶಾಸಕ ಇವರಾಗಿದ್ದಾರೆ.
ಆಗಸ್ಟ್ 13, 14ರಂದು ಇಡಿ ಅಧಿಕಾರಿಗಳಿಂದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ದಾಳಿ ನಡೆದಿತ್ತು. ಈ ವೇಳೆ ಅಕ್ರಮ ಆಸ್ತಿ, ನಗದು ಹಣ, ಚಿನ್ನಾಭರಣ ಪತ್ತೆಯಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ವಿಚಾರಣೆ ಬಳಿಕ ಶಾಸಕ ಸತೀಶ್ ಸೈಲ್ ಅವರನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಸುರಿ ಕಾರು, ಚಿನ್ನಾಭರಣ ಪತ್ತೆ
ಅಕ್ರಮ ಅದಿರು ಸಾಗಾಟ ಪ್ರಕರಣ ಸಂಬಂಧ ಇದೇ ಆಗಸ್ಟ್ 13, 14 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ಶಾಸಕ ಸತೀಶ್ ಸೈಲ್ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆದಿತ್ತು. ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆಯಾಗಿತ್ತು. ಇವುಗಳನ್ನು ಇಡಿ ಅಧಿಕಾರಿಗಳು 2 ಟ್ರಂಕ್ಗಳಲ್ಲಿ ಚಿನ್ನ, ಹಣ, ದಾಖಲೆ ಸಮೇತ ಪ್ಯಾಕ್ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದರು.
ಬಂಧನಕ್ಕೊಳಗಾದ ಕಾಂಗ್ರೆಸ್ನ ಮೂರನೇ ಶಾಸಕ
ಹೌದು…ಆನ್ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರನ್ನು ಇಡಿ ಬಂಧಿಸಿದ್ದು, ಸದ್ಯ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಯೋಗೇಶ್ ಗೌಡ ಕೊಲೆ ಕೇಸಿನ ಸಾಕ್ಷ್ಯ ನಾಶ ಸಂಬಂಧ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ಅವರೂ ಸಹ ಪರಪ್ಪನ ಅಗ್ರಹಾರ ಜೈಲಿದ್ದು, ಮಗನ ಆಪರೇಷನ್ ಸಂಬಂಧ ಎರಡು ದಿನಗಳ ಮಟ್ಟಿಗೆ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಇದೀಗ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಸಹ ಇಡಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್ನ ಮೂರನೇ ಶಾಸಕ ಅರೆಸ್ಟ್ ಆದಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:39 pm, Tue, 9 September 25




