ದಸರಾಗೆ ಪ್ರಾಯೋಗಿಕ ಕಾವೇರಿ ಆರತಿ: ಆರತಿಗೆ ಇರುವ ಸವಾಲುಗಳೇನು?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2024 | 6:49 PM

ಆರಂಭದಲ್ಲಿ ಕಾವೇರಿ ಆರತಿಯನ್ನು ಮುಂಬರುವ ದಸರಾದಲ್ಲಿಯೇ ಪ್ರಾರಂಭಿಸಲು ಚರ್ಚಿಸಲಾಗಿತ್ತು. ಆದರೆ ಇದಕ್ಕೆ ಸಾಕಷ್ಟು ಪೂರ್ವ ತಯಾರಿಯ ಅಗತ್ಯವಿರುವುದರಿಂದ ಅಧ್ಯಯನ ಹಾಗೂ ಸಿದ್ಧತೆಯಾಗುವುದು ಅನಿವಾರ್ಯ. ಆದ್ದರಿಂದ ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿಯನ್ನು ಮಾಡಬಹುದು. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

ದಸರಾಗೆ ಪ್ರಾಯೋಗಿಕ ಕಾವೇರಿ ಆರತಿ: ಆರತಿಗೆ ಇರುವ ಸವಾಲುಗಳೇನು?
ದಸರಾಗೆ ಪ್ರಾಯೋಗಿಕ ಕಾವೇರಿ ಆರತಿ: ಆರತಿಗೆ ಇರುವ ಸವಾಲುಗಳೇನು?
Follow us on

ಬೆಂಗಳೂರು, ಸೆಪ್ಟೆಂಬರ್ 22: ಗಂಗಾ ಆರತಿ (ganga aarti) ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಪರಿಶೀಲನೆ ನಡೆಸಲು ಮತ್ತೊಂದು ನಿಯೋಗದ ಭೇಟಿ ಅಗತ್ಯವಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲು ತೀರ್ಮಾನಿಸಿದ್ದಾರೆ. ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿಯನ್ನು ಮಾಡಬಹುದು ಎನ್ನಲಾಗುತ್ತಿದೆ.

ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಈ ವೇಳೆ ಗಂಗಾ ಆರತಿ ಟ್ರಸ್ಟ್​ ಸದಸ್ಯರೊಂದಿಗೆ ಚರ್ಚಿಸಿದ್ದಾರೆ.

ಸಭೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿ ನಾವು ನೋಡಿರುವ ಅಂಶ ಹಾಗೂ ಕಾವೇರಿ ಆರತಿಗೆ ಆಗಬೇಕಿರುವ ಮೂಲಸೌಕರ್ಯದ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ವರದಿ ಸಲ್ಲಿಸಲಾಗುವುದು. ಇದರೊಂದಿಗೆ ಕಾವೇರಿ ಆರತಿಗೆ ಇನ್ನಷ್ಟು ಅಧ್ಯಯನ ಅಗತ್ಯವಿರುವುದರಿಂದ ರಾಜ್ಯದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ದಸರಾಗೆ ಪ್ರಾಯೋಗಿಕ ಆರತಿ

ಆರಂಭದಲ್ಲಿ ಕಾವೇರಿ ಆರತಿಯನ್ನು ಮುಂಬರುವ ದಸರಾದಲ್ಲಿಯೇ ಪ್ರಾರಂಭಿಸಲು ಚರ್ಚಿಸಲಾಗಿತ್ತು. ಆದರೆ ಇದಕ್ಕೆ ಸಾಕಷ್ಟು ಪೂರ್ವ ತಯಾರಿಯ ಅಗತ್ಯವಿರುವುದರಿಂದ ಅಧ್ಯಯನ ಹಾಗೂ ಸಿದ್ಧತೆಯಾಗುವುದು ಅನಿವಾರ್ಯ. ಆದ್ದರಿಂದ ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿಯನ್ನು ಮಾಡಬಹುದು. ಬಳಿಕ ಧಾರ್ಮಿಕ ಹಾಗೂ ಮೂಲಸೌಕರ್ಯ ತಯಾರಿಗಳು ಪೂರ್ಣಗೊಂಡ ಬಳಿಕ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು. ನಿತ್ಯ ಆರತಿಯೋ ಅಥವಾ ವಾರಕ್ಕೆ ಎರಡು, ಮೂರು ದಿನಬವೋ ಎನ್ನುವ ಬಗ್ಗೆ ಸಿಎಂ, ಡಿಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಹರಿದ್ವಾರ, ಕಾಶಿಯಿಂದ ಪಂಡಿತರಿಗೆ ಆಹ್ವಾನ

ಇದೇ ಮೊದಲ ಬಾರಿಗೆ ಕಾವೇರಿ ಆರತಿ ಮಾಡುತ್ತಿರುವುದರಿಂದ ಇದಕ್ಕೆ ಬೇಕಾದ ತಯಾರಿ, ಕರ್ನಾಟಕದ ಅರ್ಚಕರಿಗೆ ತರಬೇತಿ ಸೇರಿದಂತೆ ಧಾರ್ಮಿಕ ವಿಧಿವಿಧಾನದ ಬಗ್ಗೆ ತರಬೇತಿಯನ್ನು ನೀಡಲು ಹರಿದ್ವಾರ ಹಾಗೂ ಕಾಶಿಯ ಪಂಡಿತರಿಗೆ ನಿಯೋಗ ಮನವಿ ಮಾಡಿದೆ. ಈ ಬಗ್ಗೆ ಸಿಎಂ, ಡಿಸಿಎಂ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮನ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಗಂಗಾ ಆರತಿಯ ವಿಶೇಷತೆಗಳೇನು?

ಹರಿದ್ವಾರ ಹಾಗೂ ಕಾಶಿಯಲ್ಲಿ ನಿತ್ಯ ಸೂರ್ಯೋದಯ ಹಾಗೂ ಸೂರ್ಯಸ್ತದ ಸಮಯದಲ್ಲಿ ನಡೆಯುವ ಗಂಗಾರತಿಗೆ ಐತಿಹಾಸಿಕ ಹಿನ್ನಲೆಯಿದೆ. ಕಾಶಿಯಲ್ಲಿ ಈ ಆರತಿ ಆರಂಭಗೊಂಡು 35 ವರ್ಷ ಕಳೆದಿದೆ. ಆದರೆ ಹರಿದ್ವಾರದ ಹರ್‌ ಕೀ ಪೌಡಿಯಲ್ಲಿ ನಡೆಯುವ ಗಂಗಾರತಿಗೆ ಅಧಿಕೃತ ದಾಖಲೆಗಳಲ್ಲಿ ಶತಮಾನದ ಇತಿಹಾಸವಿದೆ. ಈಗಲೂ ಪ್ರತಿನಿತ್ಯ ಹರಿದ್ವಾರದಲ್ಲಿರುವ ಮೂಲ ನಿವಾಸಿಗಳು ಗಂಗಾರತಿಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ. ಗಂಗಾರತಿಯ ವೇಳೆ ಕನಿಷ್ಠ 40ರಿಂದ 50 ಸಾವಿರ ಜನ ಭಾಗವಹಿಸುತ್ತಾರೆ. ವಿಶೇಷ ದಿನಗಳಲ್ಲಿ 10 ರಿಂದ 20 ಲಕ್ಷ ಜನ ಸೇರುತ್ತಾರೆ. ಆರತಿಯನ್ನು 21 ಪಂಡಿತರು, 21 ಅಭಿಷೇಕವನ್ನು ನೆರವೇರಿಸುತ್ತಾರೆ.

ಪ್ರವಾಸಕ್ಕಿಂತ ಧಾರ್ಮಿಕ ಭಾವನೆ ಮುಖ್ಯ

ಕರ್ನಾಟಕ ನಿಯೋಗದೊಂದಿಗೆ ಸಭೆ ನಡೆಸಿದ ಹರಿದ್ವಾರ ಗಂಗಾ ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ, ಗಂಗಾ ಆರತಿಯ ರೀತಿಯಲ್ಲಿ ಕಾವೇರಿ ಆರತಿಯನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯ. ಆದರೆ ಇದನ್ನು ಉದ್ಯಮದ ರೀತಿಯಾಗಿ ನೋಡುವ ಬದಲು ಧಾರ್ಮಿಕ ಭಾವನೆ ಮುಖ್ಯ ಎಂದಿದ್ದಾರೆ. ಟ್ರಸ್ಟ್​ ಅಥವಾ ನಿಗಮವನ್ನು ಮಾಡಿದರೂ, ಅದರಲ್ಲಿ ಕಾನೂನು ಸುವ್ಯವಸ್ಥೆ, ಮೂಲಸೌಕರ್ಯದ ನಿರ್ವಹಣೆಯನ್ನು ಅಧಿಕಾರಿಗಳು ಮಾಡಿದರೂ, ಧಾರ್ಮಿಕ ವಿಧಿವಿಧಾನಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಧಾರ್ಮಿಕ ಮುಖ್ಯಸ್ಥರು ತಗೆದುಕೊಂಡರೆ ಸೂಕ್ತ ಎನ್ನುವ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರ, ವಾರಣಾಸಿಯಲ್ಲಿ ಅಧ್ಯಯನ

ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ನದಿಗೆ ಕಾವೇರಿ ಆರತಿ ಮಾಡುಬೇಕು ಎಂದು ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕಾವೇರಿ ಆರತಿ ಕಾರ್ಯಕ್ರಮದ ಕುರಿತು ಸಮಿತಿ ರಚಿಸಲಾಗಿತ್ತು. ಇದೀಗ ಅಧ್ಯಯನ ಸಮಿತಿ ತಂಡ ಹರಿದ್ವಾರ ಮತ್ತು ವಾರಣಾಸಿಗೆ ಭೇಟಿ ನೀಡಿದೆ. ಇಂತಹದ್ದೊಂದು ಮಹತ್ವದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದ ದಿನೇಶ್ ಗೂಳಿಗೌಡ ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.

ಕಾವೇರಿ ಆರತಿಗೆಂದೇ ಸಾಧು ಕೋಕಿಲ ಸಂಗೀತ

ಹರಿದ್ವಾರ ಹಾಗೂ ಕಾಶಿಯಲ್ಲಿ ನಡೆಯುವ ಗಂಗಾರತಿ ವೇಳೆ ಮಂತ್ರಘೋಷದೊಂದಿಗೆ ಗಂಗಾದೇವಿಯ ಮೇಲೆ ರಚಿಸಿರುವ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಎರಡು ಭಾಗದಲ್ಲಿಯೂ ಒಂದು ಗಂಟೆಗಳ ಕಾಲ ಆರತಿ ನಡೆಯುತ್ತದೆ. ಅದಕ್ಕೂ ಒಂದು ತಾಸಿಗೂ ಮೊದಲೇ ಜನರು ನದಿದಂಡೆಯಲ್ಲಿ ಆಸೀನರಾಗಿರುತ್ತಾರೆ. ಕರ್ನಾಟಕದಲ್ಲಿ ನಡೆಸುವ ಕಾವೇರಿ ಆರತಿಯೂ ಬಹುತೇಕ ಇದೇ ಮಾದರಿಯಲ್ಲಿ ನಡೆಯುವುದರಿಂದ ಸುಮಾರು ಎರಡು ಗಂಟೆಗಳ ಕಾಲ ಜನರನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕಾವೇರಿ ಮಾತೆಯ ಇತಿಹಾಸ, ವೈಶಿಷ್ಟ್ಯ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುವ ಸಾಹಿತ್ಯವನ್ನು ರಚಿಸಿ, ಅದಕ್ಕೆ ಸಂಗೀತ ನಿರ್ದೇಶನವನ್ನು ಕರ್ನಾಟಕ ಸಿನಿಮಾ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಸಾಧುಕೋಕಿಲ ಕೂಡ ನಿಯೋಗದಲ್ಲಿದ್ದಾರೆ.

ಯಾವ ಭಾಗದಲ್ಲಿ ಎನ್ನುವ ಬಗ್ಗೆಯೂ ಪರಿಶೀಲನೆ

ಕಾವೇರಿ ಆರತಿಯನ್ನು ನಡೆಸುವುದಕ್ಕೆ ಪೂರ್ವ ತಯಾರಿಗೂ ಮೊದಲು ಯಾವ ಭಾಗದಲ್ಲಿ ಆರತಿ ಕಟ್ಟೆಯನ್ನು ನಿರ್ಮಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಕಾವೇರಿ ಹರಿಯುವ ಬಹುತೇಕ ಭಾಗದಲ್ಲಿ ಸಮತಟ್ಟಾದ ಪ್ರದೇಶಗಳಿಲ್ಲ. ಆದ್ದರಿಂದ ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭಾ ದೇವಾಲಯ, ಕೆಆರ್‌ಎಸ್‌ ಅಣೆಕಟ್ಟು ಅಥವಾ ಬಲಮುರಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಡೆಸಬಹುದೇ ಎನ್ನುವ ಚರ್ಚೆಗಳು ನಡೆದಿವೆ. ಎಲ್ಲಿಯೇ ಮಾಡಿದರೂ, ಜನ ಸೇರುವಂತೆ ಹಾಗೂ ಕನೆಕ್ಟಿವಿಟಿ ಕಲ್ಪಿಸುವುದನ್ನು ಗಮನಿಸಿ ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ತೀರ್ಮಾನಿಸಲಿ ಎನ್ನುವ ಚರ್ಚೆ ನಿಯೋಗದಲ್ಲಿ ಕೇಳಿಬಂದಿದೆ.

ಕಾವೇರಿ ಆರತಿಗೆ ಇರುವ ಸವಾಲುಗಳೇನು?

  • ಸಮತಟ್ಟಾದ ಪ್ರದೇಶವನ್ನು ಗುರುತಿಸಬೇಕಿದೆ.
  • ಕಾವೇರಿ ಆರತಿ ಪ್ರತಿನಿತ್ಯ ನಡೆಸಿದರೆ, ಸ್ಥಳೀಯರು ಭಾಗವಹಿಸುವುದನ್ನು ಗಮನಿಸಬೇಕು.
  • ಆರತಿ ನಡೆಸುವ ಪ್ರದೇಶದಲ್ಲಿ 365 ದಿನವೂ ನೀರು ಹರಿಯುವುದೇ ಎನ್ನುವುದನ್ನು ಗಮನಿಸಬೇಕು.
  • ಆರತಿಯ ಪೂಜಾ ಕೈಂಕರ್ಯವನ್ನು ನಡೆಸಲು ಅಗತ್ಯ ತರಬೇತಿಯನ್ನು ಅರ್ಚಕರಿಗೆ ನೀಡಬೇಕು.
  • ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಕಾನೂನು ಸುವ್ಯವಸ್ಥೆಗೂ ಸಮಸ್ಯೆಯಾಗದ ರೀತಿಯಲ್ಲಿ ನಿಗಮ ಅಥವಾ ಟ್ರಸ್ಟ್​ ಮಾಡುವುದು ಹೇಗೆ? ಮಾಡಿದರೂ, ಅದಕ್ಕೆ ರಾಜಕೀಯ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬೇಕು.

ಕೆಆರ್​ಎಸ್​ನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ: ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಚಿವ ಸಂಪುಟ ಒಪ್ಪಿಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್ ಎಸ್)ದಲ್ಲಿ ವಿಶ್ವದರ್ಜೆಯ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ನದಿಗೆ ಕಾವೇರಿ ಆರತಿ ಮಾಡುವ ಕಾರ್ಯಕ್ರಮದ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಹೇಳಿದರು.

ಇದನ್ನೂ ಓದಿ: ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ, ರಾಜ್ಯದಲ್ಲೂ ಕಾವೇರಿ ಆರತಿಗೆ ಚಿಂತನೆ

ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ವಿಶ್ವದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸಲಿದ್ದಾರೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಲಿದೆ ಎಂದರು.

ಇದೇ ಪ್ರಥಮವಾಗಿ ಬಹಳ ವೈಭವದಿಂದ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವಿನ ಕಾವೇರಿ ವಿವಾದಕ್ಕೆ ಕಾವೇರಿ ಮಾತೆ ಬಗೆಹರಿಸಲಿದ್ದಾಳೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.