ವಿರಾಜಪೇಟೆ: ಪುರಾತನ ಶಿವ ದೇಗುಲ ಪತ್ತೆ, ಉತ್ಖನನ ನಡೆಸಲು ಸರ್ಕಾರಕ್ಕೆ ಸಲಹೆ ಮಾಡಿದ ಪ್ರಾಚ್ಯವಸ್ತು ತಜ್ಞ
ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಅಂದಾಜು 700 ವರ್ಷ ಹಳೆಯ ಶಿಥಿಲಾವಸ್ಥೆಯಲ್ಲಿರುವ ಶಿವನ ದೇವಾಲಯ ಪತ್ತೆಯಾಗಿದೆ. ದೇವಾಲಯ ಸಂಪೂರ್ಣ ಕುಸಿದು ಬಿದ್ದ ಸ್ಥಿತಿಯಲ್ಲಿದ್ದು, ಹಿಂದಿನ ಕಾಲದ ಕೆಂಪು ಕಲ್ಲಿನಿಂದ ನಿರ್ಮಾಣ ವಾಗಿರುವುದು ಕಂಡು ಬಂದಿದೆ.
ಕೊಡಗು: ಕೊಡಗಿನಲ್ಲಿ ಪುರಾತನ ಕಾಲದ ಅಂದಾಜು 700 ವರ್ಷ ಹಳೆಯ ಶಿಥಿಲಾವಸ್ಥೆಯಲ್ಲಿರುವ ಶಿವನ ದೇವಾಲಯ ಪತ್ತೆಯಾಗಿದೆ. ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ದೇವಾಲಯದಲ್ಲಿ ಬಲಿಪೀಠ, ಕಳಸ, ಮುಖಮಂಟಪ, ಗರ್ಭಗುಡಿ ಶಿವಲಿಂಗ ಹಾಗೂ ಆಯುಧಗಳು ಪತ್ತೆಯಾಗಿವೆ. ಸದ್ಯ ಸ್ಥಳಕ್ಕೆ ಪ್ರಾಚ್ಯವಸ್ತುತಜ್ಞ N.ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಉತ್ಖನನ ನಡೆಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ದೇವಾಲಯ ಸಂಪೂರ್ಣ ಕುಸಿದು ಬಿದ್ದ ಸ್ಥಿತಿಯಲ್ಲಿದ್ದು, ಹಿಂದಿನ ಕಾಲದ ಕೆಂಪು ಕಲ್ಲಿನಿಂದ ನಿರ್ಮಾಣ ವಾಗಿರುವುದು ಕಂಡು ಬಂದಿದೆ. ವಿರಾಜಪೇಟೆ ತಾಲೂಕಿನ ಕಡಂಗ ಪಾರಾಣೆ ರಸ್ತೆಯಲ್ಲಿರುವ ಅಂಚೆ ಕಂಚೇರಿಯ ಹಿಂಭಾಗ ಈ ದೇವಾಲಯ ಪತ್ತೆಯಾಗಿದೆ.
2008ರಲ್ಲೇ ಪತ್ತೆಯಾಗಿದ್ದ ದೇವಾಲಯಕ್ಕೆ ಸಿಗಲಿಲ್ಲ ಅಭಿವೃದ್ಧಿ ಭಾಗ್ಯ
ಈ ಭಾಗದಲ್ಲಿ ಶಿವನ ದೇವಾಲಯ ಇರುವುದಾಗಿ ತಂತ್ರಿಗಳ ಮೂಲಕ 2008ರಲ್ಲಿ ಗ್ರಾಮಸ್ಥರಿಗೆ ತಿಳಿದು ಬಂದಿತ್ತು. ಆ ಸಂದರ್ಭ ಪಾಳು ಬಿದ್ದ ದೇವಾಲಯದ ಅಭಿವೃದ್ದಿ ಮಾಡುವ ಸಲುವಾಗಿ ಗ್ರಾಮಸ್ಥರು ದೇವಾಲಯದ ಸುತ್ತಲು ಕಾಡುಗಳನ್ನು ಕಡಿದು ಸ್ವಚ್ಚಗೊಳಿಸಿದ್ದರು. ಆದರೆ ಈ ದೇವಾಲಯಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಮತ್ತೆ ಹಳೆಯ ಸ್ಥಿತಿಗೆ ತಲುಪಿತ್ತು. ಇದೀಗ ಎರಡು ದಿನಗಳ ಹಿಂದೆ ಮತ್ತೆ ದೇವಾಲಯದ ಸುತ್ತಲು ಬೆಳೆದು ನಿಂತಿದ್ದ ಕಾಡನ್ನು ಕಡಿದು ಸ್ವಚ್ಚಗೊಳಿಸಿ ಶೋಧ ಕಾರ್ಯ ನಡೆಸಲಾಯಿತು.
ಪುರಾತನ ವಸ್ತುಗಳು ಪತ್ತೆ
ಬಲಿಪೀಠ, ಕಳಸ, ಮುಖಮಂಟಪ, ಗರ್ಭಗುಡಿ, ಮತ್ತು ದೇವಾಲಯದ ಆವರಣದಲ್ಲಿರುವ ಬಾವಿಯಲ್ಲಿ ಕಲ್ಲಿನಲ್ಲಿ ಕೆತ್ತಿರುವ ಶಿವಲಿಂಗ ಒಂದು ಪತ್ತೆಯಾಗಿದೆ. ದೇವಾಲಯದಲ್ಲಿ ದೇವರ ಆಯುಧ(ಕಡ್ತಲೆ) ಸಣ್ಣ ಗಣಪತಿ ವಿಗ್ರಹಗಳು ಪತ್ತೆಯಾಗಿವೆ. ಈ ದೇವಾಲಯದ ಅಡಿಪಾಯದಲ್ಲಿ ತ್ರಿಪಟ, ಕುಮುದ, ಜಗತ್ತಿ, ಕಂಠ, ಪಟ್ಟಿಕ, ದೇವಕೋಷ್ಟ, ಸೋಪಾನಗಳಿವೆ. ಸೋಪಾನದಲ್ಲಿ ಸಿಂಹ ಹಾಗೂ ಮೊಸಳೆಯ ಅಂದವಾದ ಕೆತ್ತನೆಗಳಿವೆ.
ಬೊಳ್ಳುಮಾಡು ಗ್ರಾಮಸ್ಥರು ದೇವಾಲಯದ ಚರಿತ್ರೆ ಅರಿಯುವ ಸಲುವಾಗಿ ಕೊಡಗಿನವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ನಾಯಕಂಡ ಪ್ರಕಾಶ್ ಅವರ ಸಹಾಯ ಪಡೆದಿದ್ದಾರೆ. ನಾಯಕಂಡ ಪ್ರಕಾಶ್ ಅವರು ಆರ್ಕೀಯಾಜಿಕಲ್ ಸರ್ವೇ ಆಫ್ ಇಂಡಿಯಾದ ನಿವೃತ್ತ ಅಧಿಕಾರಿಯಾಗಿದ್ದು, ರಾಮಜನ್ಮ ಭೂಮಿಯ ಸೈಟ್ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ದೇವಾಲಯ ಇರುವ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ ನಾಯಕಂಡ ಪ್ರಕಾಶ್ ಅವರು ಇದು ಅಂದಾಜು 600ರಿಂದ 700 ವರ್ಷ ಹಿಂದಿನ ಶಿವ ದೇವಾಲಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪುರಾತನ ಕಾಲದ ದೇವಾಲಯ ಭಾಗಮಂಡಲ ದೇವಾಲಯ ನಿರ್ಮಾಣದ ಸಮಕಾಲೀನವಾಗಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ ಕೆಲವು ದಾಖಲೆಗಳನ್ನು ತಮ್ಮೊಂದಿಗೆ ತೆಗೆದು ಕೊಂಡು ಹೋಗಿರುವ ನಾಯಕಂಡ ಪ್ರಕಾಶ್, ಅಗತ್ಯವಿದ್ದಲ್ಲಿ ಸ್ಥಳದಲ್ಲಿ ಉತ್ಖನನ ನಡೆಸುವ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ ಎಂದು ಬೊಳ್ಳುಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾತಂಡ ಅರುಣ್ ಅವರು ತಿಳಿಸಿದ್ದಾರೆ.
ಪ್ರಸ್ತುತ ದೇವಾಲಯ ಇರುವ ಸ್ಥಳ ಪೈಸಾರಿ ಜಾಗ ಎನ್ನಲಾಗುತ್ತಿದೆ. ಆದರೆ ಈ ದೇವಾಲಯ ಸುತ್ತಲು ಹಲವು ಕುಟುಂಬಗಳ ನಿವಾಸ ಮತ್ತು ತೋಟವಿದೆ ಎಂದು ಮಾತಂಡ ಅರುಣ್ ಅವರು ಮಾಹಿತಿ ನೀಡಿದ್ದಾರೆ. ದೇವಾಲಯ ಈ ಹಿಂದೆಯೇ ಪತ್ತೆಯಾಗಿದ್ದರೂ, ಸ್ಥಳಕ್ಕೆ ತೆರಳಲು ಮಾರ್ಗವಿರಲಿಲ್ಲ. ಹೀಗಾಗಿ ಆ ಕಡೆ ಯಾರು ತೆರಳಿರಲಿಲ್ಲ. ದೇವಾಲಯದ ಗರ್ಭ ಗುಡಿಯ ಮೇಲೆ ಮರ ಮುರಿದು ಬಿದ್ದು, ದ್ವಂಸವಾಗಿರುವಂತೆ ಕಂಡು ಬರುತ್ತಿದೆ ಎಂದು ಅರುಣ್ ಮಾಹಿತಿ ನೀಡಿದರು. ಇದೀಗ ಸ್ಥಳೀಯ ನಿವಾಸಿಯೊಬ್ಬರು ದಾರಿಯನ್ನು ಬಿಟ್ಟು ಕೊಡುವುದಾಗಿ ತಿಳಿಸಿದ್ದಾರೆ ಎಂದು ಮಾತಂಡ ಅರುಣ್ ಮಾಹಿತಿ ನೀಡಿದರು.
ಈ ದೇವಾಲಯವನ್ನು ಮಾದೇರಪ್ಪ(ಶಿವ) ದೇವಾಲಯ ಎಂದು ಗುರುತಿಸಲಾಗಿದೆ. ಅತ್ಯಂತ ಪುರಾತನವಾಗಿರುವ ದೇವಾಲಯವನ್ನು ಪುನರ್ ನಿರ್ಮಾಣ ಅಥವಾ ಅಭಿವೃದ್ದಿ ಮಾಡಲು ಗ್ರಾಮಸ್ಥರೇ ಮುಂದಾಗಿದ್ದಾರೆ. ದೇವಾಲಯಕ್ಕೆ ಸೂಕ್ತ ರಸ್ತೆ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ. ದೇವಾಲಯದ ಆವರಣದ ಸ್ವಲ್ಪ ದೂರದಲ್ಲಿ ಜೋಡಿ ನಾಗರ ಹಾವಿನ ಕಲ್ಲು ಕೂಡ ಇದೆ. ಇಲ್ಲಿ ಬ್ರಾಹ್ಮಣ ಕುಟುಂಬ ಒಂದು ನೆಲೆಸಿತ್ತು ಎನ್ನಲಾಗುತ್ತಿದೆ. ಆದರೆ ಬ್ರಾಹ್ಮಣರ ಮನೆ ಇದ್ದ ಬಗ್ಗೆ ಯಾವುದೇ ಅವಶೇಷಗಳು ಕಂಡು ಬಂದಿಲ್ಲ.
Published On - 3:06 pm, Sun, 23 October 22