ಮಡಿಕೇರಿ: ದಶಕವಾದರೂ ಮುಗಿಯದ ಕೂರ್ಗ್ ಹೆರಿಟೇಜ್ ನಿರ್ಮಾಣ ಕಾರ್ಯ; ಕಾಮಗಾರಿಯಲ್ಲಿ ಅವ್ಯವಹಾರ ಆರೋಪ
ಕೊಡಗಿನ ಪರಂಪರೆ ಬಿಂಬಿಸುವ ಸುಂದರ ಸಂಗ್ರಹಾಲಯದ ನಿರ್ಮಾಣ ಕಾರ್ಯ 10 ವರ್ಷವಾದರೂ ಇನ್ನು ಮುಗಿದಿಲ್ಲ. ವೀರರ ನಾಡಿನ ಇತಿಹಾಸ ಸಾರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ.
ಮಡಿಕೇರಿ: ಇದು ಕೊಡಗಿನ ಮೂಲನಿವಾಸಿಗಳ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಡಿಕೇರಿಯಲ್ಲಿ ಕೂರ್ಗ್ ಹೆರಿಟೇಜ್ ಸೆಂಟರ್ ಕಟ್ಟಡವನ್ನು ನಿರ್ಮಿಸಲು 10ವರ್ಷಗಳ ಹಿಂದೆಯೇ ಶುರುಮಾಡಿತ್ತು, ಆದರೆ 10 ವರ್ಷ ಕಳೆದರು ಈ ಹೆರಿಟೇಜ್ನ ನಿರ್ಮಾಣ ಕಾರ್ಯ ಮುಗಿಯದೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ನೋಡುವುದಾದರೆ ಕೊಡಗು ಹೆರಿಟೇಜ್ ಕಾಮಗಾರಿ ನಿರ್ಮಾಣದಲ್ಲಿ ಭಾರಿ ಅವ್ಯವಹಾರವಾಗಿದೆ. ಇದನ್ನು ಈ ಹಿಂದೆ ಖುದ್ದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದರು.
ದೇಶದಲ್ಲಿಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕನಸಿನ ಗೋಪುರವೊಂದನ್ನು ನಿರ್ಮಾಣ ಮಾಡುವುದಕ್ಕೆ 1.75 ಕೋಟಿ ರೂಪಾಯಿ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ 2.68 ಕೋಟಿಯಷ್ಟು ದುಂದುವೆಚ್ಚ ಮಾಡಲಾಗಿದೆ. ಆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದರು ಇಲ್ಲಿ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ. ಕೊಡಗಿನ ಸಂಸ್ಕೃತಿಯನ್ನು, ಕೊಡಗಿನ ಪ್ರಾಚೀನ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಯೋಜನೆ ನುಂಗಣ್ಣರ ಪಾಲಾಗಿದೆ. ಈ ಕಾಮಗಾರಿ ಅವ್ಯವಹಾರ ಸಂಬಂಧ ಇಂಜಿನಿಯರ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಮಡಿಕೇರಿ: ಶವಾಗಾರ ಸಿಬ್ಬಂದಿಯಿಂದ ಆಸ್ಪತ್ರೆಯಲ್ಲಿಯೇ ಲೈಂಗಿಕ ದೌರ್ಜನ್ಯ, ಡೀನ್ಗೆ ಹಿಂದೂ ಜಾಗರಣ ವೇದಿಕೆ ದೂರು
ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ಕೊಟ್ಟಿಲ್ಲಾ ಎನ್ನುವಂತೆ, ಕೊಡಗಿನ ಸಂಸ್ಕೃತಿ ಬಿಂಬಿಸುವ ಯೋಜನೆ ಹೆಸರಲ್ಲಿ ಈ ಇಂಜಿನಿಯರ್, ಗುತ್ತಿಗೆದಾರರು ಜಿಲ್ಲಾಡಳಿತವನ್ನು ದಿಕ್ಕು ತಪ್ಪಿಸಿದ್ದಾರೆ. ಇನ್ನಾದರು ಸರ್ಕಾರ ಎಚ್ಚೆತ್ತುಕೊಂಡು ಕಾಮಗಾರಿ ಸಂಪೂರ್ಣಗೊಳಿಸಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ