ಕೊಡಗು: 80 ವರ್ಷದಿಂದ ವಾಸವಿದ್ದ ಮನೆ ತೆರವು; ಬೀದಿಗೆ ಬಿದ್ದ ಬಡ ಕುಟುಂಬ

ಕೋರ್ಟ್ ಆದೇಶ ನೀಡಿರುವುದು ಬೇರೆ ಸರ್ವೆ ನಂಬರ್​ನ ಜಾಗಕ್ಕೆ, ಕೋರ್ಟ್ ಆದೇಶದಲ್ಲಿ ನಮ್ಮ ಜಾಗದ ಸರ್ವೆ ನಂಬರ್ ಇಲ್ಲ. ಕೋರ್ಟ್​ಗೆ ತಪ್ಪು ಮಾಹಿತಿ ನೀಡಿ ನಮ್ಮ ಮನೆ ಒಡೆದುಹಾಕಲಾಗಿದೆ ಎಂದು ಕುಂಜಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊಡಗು: 80 ವರ್ಷದಿಂದ ವಾಸವಿದ್ದ ಮನೆ ತೆರವು; ಬೀದಿಗೆ ಬಿದ್ದ ಬಡ ಕುಟುಂಬ
80 ವರ್ಷದಿಂದ ವಾಸವಿದ್ದ ಮನೆ ತೆರವು

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ದೇವರಪುರ ಗ್ರಾಮದಲ್ಲಿ ಪರಿಂಜಿ ಎರವರ ಕುಂಜಿ ಎಂಬ ವೃದ್ಧ ಆದಿವಾಸಿಯ ಮನೆಯನ್ನು ಧ್ವಂಸಗೊಳಿಸಲಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ ಈ ಮನೆ ಧ್ವಂಸಗೊಳಿಸಿ ಜಾಗ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಟೇಟ್​ ಒಡತಿ ಸುಷ್ಮಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ
ಆದಿವಾಸಿ ಮಹಿಳೆಯ ಪರವಾಗಿ ದನಿ ಎತ್ತಿರುವವರ ವಾದವೇ ಬೇರೆ ಇದೆ.

ಕೊಡಗಿನ ಅತಿವಿಶಿಷ್ಟ ಬುಡಕಟ್ಟು ಜನಾಂಗವಾಗಿರುವ ಪಂಜಿರಿ ಎರವ ಜಾತಿಯ ಕುಂಚಿ ಎಂಬ ವೃದ್ಧೆ ತನ್ನ ತಾತನ ಕಾಲದಿಂದಲೇ ಈ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ದೇವರಪುರ ಗ್ರಾಮದ ಸರ್ವೆ ನಂಬರ್ 215/8ರಲ್ಲಿ 10 ಸೆಂಟ್ ಜಾಗದಲ್ಲಿಯೇ ಇವರು ಕಳೆದ 80 ವರ್ಷಗಳಿಂದ ವಾಸವಾಗಿದ್ದಾರೆ.

ಈ ಬಗ್ಗೆ ಟಿವಿ9 ಡಿಜಿಟಲ್​ಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ, ಕೋರ್ಟ್ ಆದೇಶದಂತೆ ಮನೆ ತೆರವು ಮಾಡಿಸಿದ್ದೇನೆ ಎಂದಿದ್ದಾರೆ ಆದರೆ ಕುಂಜಿ ಕುಟುಂಬಸ್ಥರು ಮಾತ್ರ ಕೋರ್ಟ್​ ಆದೇಶ ನೀಡಿರುವುದು ಬೇರೆ ಸರ್ವೆ ನಂಬರ್​ನ ಜಾಗಕ್ಕೆ, ಕೋರ್ಟ್​ ಆದೇಶದಲ್ಲಿ ನಮ್ಮ ಜಾಗದ ಸರ್ವೆ ನಂಬರ್ ಇಲ್ಲ. ಕೋರ್ಟ್​ಗೆ ತಪ್ಪು ಮಾಹಿತಿ ನೀಡಿ ನಮ್ಮ ಮನೆ ಒಡೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಈ ಜಾಗ ಸೇರಿದಂತೆ ಇಲ್ಲಿನ ನೂರಾರು ಎಕರೆ ಕಾಫಿ ತೋಟ ಬ್ರಿಟಿಷ್ ನಾಗರಿಕ ವೇರಿಂಗ್ ಮತ್ತು ಅವರ ಕುಟುಂಬಸ್ಥರ ಹೆಸರನಲ್ಲಿತ್ತು. ಈ ವೇರಿಂಗ್ ಎಂಬುವರ ತೋಟದ ಕಾರ್ಮಿಕರಾಗಿ ಕುಂಜಿಯ ತಾತ ಕೆಲಸ ಮಾಡುತ್ತಿದ್ದರು. ಹಾಗಾಗಿ ಬ್ರಿಟಿಷ್ ನಾಗರಿಕರು ಇಲ್ಲಿನ ಜಾಗವನ್ನು ಹಲವು ಜನರಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ಈಗ
ತಗಾದೆ ತೆಗೆದಿರುವ ಸುಷ್ಮಾ ಅವರ ತಾತನೂ ಇಲ್ಲಿ ಜಾಗ ಖರೀದಿಸಿದ್ದಾರೆ.

ಈ ಸಂದರ್ಭ ಸುಷ್ಮಾ ಅವರ ಜಾಗದ ಸಮೀಪದ 15 ಸೆಂಟ್ ಜಾಗವನ್ನು ಕುಂಜಿಯ ತಾತನ ಕುಟುಂಬಕ್ಕೆ ಉದಾರವಾಗಿ ಕೊಟ್ಟಿದ್ದರಂತೆ. ಆದರೆ ​ ಅದಕ್ಕೆ ಪರಾವೆಗಳಿಲ್ಲ. ಇದೇ ಈಗ ಕುಂಜಿ ಕುಟುಂಬಕ್ಕೆ ಮುಳುವಾಗಿದೆ. ಕುಂಜಿ ಕುಟುಂಬ ವಾಸವಾಗಿದ್ದ ಜಾಗ  ನನಗೆ ಸೇರಿದ್ದು ಎಂದು ದಾವೆ ಹೂಡಿದ ಸುಷ್ಮಾ ಕುಟುಂಬ, ಇದೀಗ ಪೊನ್ನಂಪೇಟೆ ಕೋರ್ಟ್​ನಲ್ಲಿ ಕೇಸ್​ ಗೆದ್ದಿದೆ. ಅದರ ಪ್ರಕಾರ ಪೊಲೀಸ್ ನೆರವು ಪಡೆದು ಕುಂಜಿ ಕುಟುಂಬವನ್ನು ತೆರವುಗೊಳಿಸಿ ಮನೆ ನಲಸಮಗೊಳಿಸಿದ್ದಾರೆ.

ಆದರೆ ವಾಸ್ತವವಾಗಿ ಕೋರ್ಟ್​ ಆದೇಶದಲ್ಲಿ ಇರುವ ಸರ್ವೆ ನಂಬರೇ ಬೇರೆ, ನಮ್ಮ ಜಾಗ ಇರುವ ಸರ್ವೆ ನಂಬರೇ ಬೇರೆ ಅಂತ ಕುಂಜಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ತಮ್ಮ ಜಾಗದ ಸರ್ವೆ ನಂಬರ್ 215/8 ಆಗಿದ್ದು, ಇದು ಕೋರ್ಟ್​ ಆದೇಶದಲ್ಲಿ ಇಲ್ಲವೇ ಇಲ್ಲ ಅಂತ ವಾದಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ಸೇರಿ ಯಾವುದೇ ಇಲಾಖೆ
ದೂರು ತೆಗೆದುಕೊಳ್ಳುತ್ತಿಲ್ಲ.  ಅದೂ ಅಲ್ಲದೆ, ಜಡಿ ಮಳೆಯ ವೇಳೆ ಮನೆಯಿಂದ ತಮ್ಮನ್ನು ಹೊರ ಹಾಕುವಾಗ ನಮ್ಮ ಮೇಲೆ ಸ್ವಲ್ಪವೂ ಕನಿಕರ ತೋರಲಿಲ್ಲ. ಬದಲಿಗೆ ನಿರ್ಧಯವಾಗಿ  ತನ್ನ ಮೊಮ್ಮಕ್ಕಳನ್ನೂ ಹೊರಗೆ ತಳ್ಳಿದರು
ಎಂದು ಕುಂಜಿ ಆರೋಪಿಸಿದ್ದಾರೆ.

kodagu home

ದಾಖಲೆ ಪತ್ರ ತೋರಿಸುತ್ತಿರುವ ಕುಂಜಿ

ಕುಂಜಿಗೆ ಕೂಲಿ ಕೆಲಸ ನೀಡದಂತೆ ತಾಕೀತು
ತನಗೆ ಊರಿನಲ್ಲಿ ಇದೀಗ ಯಾರೂ ಕೆಲಸ ಕೊಡುತ್ತಿಲ್ಲ. ಏಕೆಂದರೆ ಎಸ್ಟೇಟ್​ ಒಡತಿ ಸುಷ್ಮಾ ನನಗೆ ಮತ್ತು ನನ್ನ ಕುಟುಂಬಕ್ಕೆ ಕೆಲಸ ನೀಡದಂತೆ ಸುತ್ತ ಮುತ್ತಲಿನ ತೋಟದ ಮಾಲಿಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಕುಂಜಿ ಆರೋಪಿಸಿತ್ತಿದ್ದಾರೆ.

ಅತ್ತ ಮನೆಯೂ ಇಲ್ಲದೆ, ಇತ್ತ, ಕೆಲಸವೂ ಇಲ್ಲದೆ ಕುಂಜಿ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ನ್ಯಾಯಾಲಯದ ಪ್ರಕರಣವಾಗಿರುವುದರಿಂದ ಯಾರೂ ಕೂಡ ಕುಂಜಿಗೆ ನೆರವು ನೀಡಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಕುಂಜಿ ಕುಟುಂಬಕ್ಕೆ ಈ ಊರನ್ನೇ ಬಿಟ್ಟು ತೆರಳಿ ಅಂತ ಧಮ್ಕಿ ಕೂಡ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮನೆ ಜಾಗ ಬಿಟ್ಟು ಕದಲದ ನಾಯಿಗಳು
ವೃದ್ಧೆ ಕುಂಜಿಯ ಮನೆ ನಾಶ ಮಾಡಿ ಇದೀಗ ಅಲ್ಲಿ ಮನೆಯ ಕುರುಹು ಇಲ್ಲದಂತೆ ಬೇಲಿ ಹಾಕಿ ಗಿಡ ನೆಡಲಾಗಿದೆ. ಆದರೆ ಕುಂಜಿ ಮನೆಯಲ್ಲಿ ವಾಸವಿದ್ದ ನಾಯಿಗಳು ಮಾತ್ರ ಆ ಜಾಗ ಬಿಟ್ಟು ಬರುತ್ತಿಲ್ಲ. ದಿನಿವಿಡೀ ಅಲ್ಲೇ ಕುಳಿತು ವ್ಯಥೆ ಪಡುತ್ತಿವೆ. ಬೇಲಿಯ ಬಳಿ ತೆರಳುವ ಕುಂಜಿಯ ಕೈಕಾಲು ನೆಕ್ಕಿ ಪ್ರೀತಿ ತೋರಿ ಮತ್ತೆ ಹಳೆ ಮನೆಯ ಜಾಗಕ್ಕೇ ಮರಳುತ್ತಿರುವುದು ನೋಡುವರರ ಕಣ್ಣಲ್ಲಿ ನೀರು ತರಿಸುತ್ತಿದೆ.

ವರದಿ: ಗೋಪಾಲ್ ಐಮಂಡ

ಇದನ್ನೂ ಓದಿ:

ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು: ಗ್ರಾಮಸ್ಥರ ಪ್ರತಿಭಟನೆ, ಕಾಂಗ್ರೆಸ್ ಆಕ್ರೋಶ

ಮನೆ ತೆರವು ಆತಂಕದಲ್ಲಿ ಶಿವರಾಮ ಕಾರಂತ ಬಡಾವಣೆಯ ಜನ; 800 ಮನೆಗಳಲ್ಲಿ ನೀರವ ಮೌನ

Read Full Article

Click on your DTH Provider to Add TV9 Kannada