AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ತೆರವು ಆತಂಕದಲ್ಲಿ ಶಿವರಾಮ ಕಾರಂತ ಬಡಾವಣೆಯ ಜನ; 800 ಮನೆಗಳಲ್ಲಿ ನೀರವ ಮೌನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿ ನೀಡದೆ ಕಳೆದ ತಿಂಗಳು ಏಕಾಏಕಿ ಸುಮಾರು 22ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿತ್ತು. ಹೀಗಾಗಿ ಸುಮಾರು 800 ಮನೆಗಳ ನಿವಾಸಿಗಳು ಮನೆ ಕಳೆದುಕೊಳ್ಳುವ ಆತಂಕದಲ್ಲೇ ಕೆಲಸಗಳಿಗೂ ಹೋಗದೆ ಮನೆಯಲ್ಲೇ ಉಳಿದಿದ್ದಾರೆ.

ಮನೆ ತೆರವು ಆತಂಕದಲ್ಲಿ ಶಿವರಾಮ ಕಾರಂತ ಬಡಾವಣೆಯ ಜನ; 800 ಮನೆಗಳಲ್ಲಿ ನೀರವ ಮೌನ
ಶಿವರಾಮ ಕಾರಂತ ಬಡಾವಣೆ
TV9 Web
| Updated By: preethi shettigar|

Updated on:Aug 23, 2021 | 11:25 AM

Share

ಬೆಂಗಳೂರು: ಇತ್ತೀಚೆಗೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾರ್ಯ ಭರದಿಂದ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಮನೆ, ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗಿರುವಾಗಲೇ ಬೆಂಗಳೂರು ನಗರದ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡ ಜನರು ಆತಂಕಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಯಾವಾಗ ಬಿಡಿಎ ಮನೆ ತೆರವು ಮಾಡುತ್ತದೆಯೋ ಎಂಬುವುದೆ ಆಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿ ನೀಡದೆ ಕಳೆದ ತಿಂಗಳು ಏಕಾಏಕಿ ಸುಮಾರು 22ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿತ್ತು. ಹೀಗಾಗಿ ಸುಮಾರು 800 ಮನೆಗಳ ನಿವಾಸಿಗಳು ಮನೆ ಕಳೆದುಕೊಳ್ಳುವ ಆತಂಕದಲ್ಲೇ ಕೆಲಸಗಳಿಗೂ ಹೋಗದೆ ಮನೆಯಲ್ಲೇ ಉಳಿದಿದ್ದಾರೆ.

ಮನೆಯಲ್ಲಿ ಇಲ್ಲದ ವೇಳೆ ಅಧಿಕಾರಿಗಳು ಬಂದು ತೆರವು ಕಾರ್ಯ ಆರಂಭಿಸಿದರೆ ಎಂಬ ಭೀತಿ ಈ ಭಾಗದ ಜನರನ್ನು ಕಾಡುತ್ತಿದೆ. ಇನ್ನು ಈ ಭಯದಿಂದ ಮುಕ್ತಿ ಸಿಗಲಿ ಎಂಬ ಕಾರಣಕ್ಕೆ ಕೆಲವರು ಕ್ಷೇತ್ರದ ಶಾಸಕರು, ಸಂಸದರ ಬಳಿ ದಾಖಲೆಗಳನ್ನು ಹೊತ್ತು ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಆದರೆ ಯಾವುದಕ್ಕೂ ಅಂತಿಮ ಎಂಬುವುದು ಇಲ್ಲದಾಗಿದೆ.

ಶಿವರಾಮ ಕಾರಂತ ಬಡಾವಣೆಗೆ ಗುರುತಿಸಿರುವ ಜಾಗ ದಾಸರಹಳ್ಳಿ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಹಲವರು ಇಲ್ಲಿ ನಿವೇಶನ ಖರೀದಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದಾರೆ. ಅಲ್ಲದೆ ಮನೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಆದರೆ ಇದೀಗ ಏಕಾಏಕಿ ಮನೆ ಕೆಡವಿದರೆ ಬೀದಿಗೆ ಬೀಳುವಂತ ಪರಿಸ್ಥಿತಿ ಇಲ್ಲಿ ನಿರ್ಮಾಣ ಆಗಲಿದೆ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್‌. ಮಂಜುನಾಥ್‌ ತಿಳಿಸಿದ್ದಾರೆ.

ನನ್ನ ಕ್ಷೇತ್ರವೊಂದರಲ್ಲೇ ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಕೆಬ್ಬೆಪಾಳ್ಯ, ಲಕ್ಷ್ಮೇಪುರ ಹಳ್ಳಿಗಳಲ್ಲಿ ನಿವೇಶನ ಖರೀದಿಸಿದವರು ಮತ್ತು ರೈತರು ಸುಮಾರು 4,500 ಮಂದಿಯಿದ್ದಾರೆ. ಇವರೆಲ್ಲರೂ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್‌. ಮಂಜುನಾಥ್‌ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಇನ್ನು ಈ ಭಾಗದ ರೈತರು ಕೂಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ರೈತರ ಭೂಮಿಯನ್ನು ಬಿಡಿಎ ಈ ಹಿಂದೆ ಗುರುತಿಸಿತು. ಆದರೆ ರೈತರಿಗೆ ಬಿಡಿಎ ಹಣವೂ ಕೊಡದೆ, ಇತ್ತ ರೈತರ ಭೂಮಿಯಲ್ಲಿ ಕೃಷಿಯನ್ನೂ ಮಾಡಲು ಬಿಡದೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮುಖ್ಯವಾಗಿ ಬಡಾವಣೆ ನಿರ್ಮಾಣದ ವಾಸ್ತವ ಸ್ಥಿತಿಯನ್ನು ಇಲ್ಲಿ ಬಿಡಿಎ ಮರೆಮಾಚಿದೆ ಎಂಬ ಆರೋಪ ಕೇಳಿ ಬಂದಿದೆ.

ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ 3,546 ಎಕರೆ ಜಾಗ ನಿಗದಿಪಡಿಸಿ, ಕಾಯ್ದಿರಿಸಿತ್ತು. ಆದರೆ, ಬಿಡಿಎ ವಿಳಂಬ ನೀತಿಯಿಂದಾಗಿ ಕಾಯ್ದಿರಿಸಿದ್ದ ಜಾಗದ ಪೈಕಿ ಈಗಾಗಲೇ 1,500 ಎಕರೆ ಅಭಿವೃದ್ಧಿಯಾಗಿದೆ. ಇದಕ್ಕೆ ಯಾರು ಹೊಣೆ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್‌. ಮಂಜುನಾಥ್‌ ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3 ರಂದು ನಿರ್ದೇಶನ ನೀಡಿತ್ತು. ಮೂರು ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಜತೆಗೆ ಅಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ನಿರ್ದೇಶಿಸಿತ್ತು. ಆದರೆ ಈ ಬಗ್ಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಬಡಾವಣೆ ನಿರ್ಮಾಣಕ್ಕೆ ಬೇಕಾದ ಭೂಮಿಗಾಗಿ ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ ಸೇರಿದಂತೆ 17 ಗ್ರಾಮಗಳಲ್ಲಿ ಸ್ಯಾಟಲೈಟ್‌ ಮೂಲಕ ಸಮೀಕ್ಷೆ ನಡೆಸಿ, 800 ಕಟ್ಟಡಗಳನ್ನು ಪಟ್ಟಿ ಮಾಡಿದೆ. ಇದೀಗ ಬಡಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ನ್ಯಾ ಎ.ವಿ. ಚಂದ್ರಶೇಖರ್‌ ಸಮಿತಿಯು ಭೂಮಾಲೀಕರು ಮತ್ತು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕೆ ಸೆಪ್ಟೆಂಬರ್‌ 9ರವರೆಗೆ ಗಡುವು ನೀಡಲಾಗಿದೆ. ಅರ್ಜಿಗಳು ಇನ್ನೂ ಬರುತ್ತಿವೆ. ಎಲ್ಲವೂ ಬಂದ ನಂತರ ಅವುಗಳ ಪರಿಶೀಲನೆ ನಡೆಸಿ, ಅಂತಿಮವಾಗಿ ಎಷ್ಟು ಮನೆಗಳು ಅನಧಿಕೃತ ಎಂಬುವುದನ್ನು ಪಟ್ಟಿ ಮಾಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ, ಶೀಘ್ರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದ್ದೇವೆ. ಬಿಡಿಎಯಿಂದ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಬಡವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಸಲ್ಲಿಸುತ್ತೇವೆ. ಸುಪ್ರೀಂಕೋರ್ಟ್‌ಗೆ ಸರಿಯಾದ ಮಾಹಿತಿ ನೀಡಿ ಪುನರ್‌ ಪರಿಶೀಲಿಸುವಂತೆಯೂ ಒತ್ತಾಯಿಸಲಾಗುವುದು ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕರಾದ ಆರ್‌. ಮಂಜುನಾಥ್‌ ತಿಳಿಸಿದ್ದಾರೆ.

ಈ ಬಗ್ಗೆ ಇಲ್ಲಿನ ನಿವಾಸಿಯಾದ ದೇವೇಂದ್ರಪ್ಪ ಮಾತನಾಡಿದ್ದು, ಯಾವುದೇ ತಕರಾರು ಬಾರದ ಹಿನ್ನೆಲೆಯಲ್ಲಿ ನಾವು ನಿವೇಶನ ಖರೀದಿಸಿ ರಿಜಿಸ್ಪ್ರೇಷನ್‌ ಕೂಡ ಮಾಡಿಸಿ, ಮನೆ ಕಟ್ಟಿಸಿದ್ದೇವೆ. ಇದಕ್ಕಾಗಿ ಸುಮಾರು 50 ಲಕ್ಷ ರೂ. ಸಾಲ ಮಾಡಿದ್ದೇನೆ. ಇದೀಗ ಬಿಡಿಎ ನಿಮ್ಮ ಮನೆ ಅನಧಿಕೃತ ಎಂದರೆ ಹೇಗೆ ಅದನ್ನು ಒಪ್ಪಬೇಕು? ಒಂದು ವೇಳೆ ಬಿಡಿಎಗೆ ಇಚ್ಛಾಶಕ್ತಿಯಿದ್ದು, ಬಡವರಿಗೆ ವಂಚನೆ ಮಾಡಬಾರದು ಎಂಬ ಮನಸ್ಸು ಇದ್ದಿದ್ದರೆ, 2018ರ ಆಗಸ್ಟ್‌ ನಂತರ 17 ಗ್ರಾಮಗಳ ನಿವೇಶನಗಳನ್ನು ಮಾರಾಟ, ಖರೀದಿ ಆಗದಂತೆ ನೋಂದಣಾಧಿಕಾರಿಗಳ ಕಚೇರಿಯಲ್ಲೇ ತಡೆಯಬೇಕಿತ್ತು. ಅದು ಬಿಟ್ಟು ಈಗ ಮನೆ ತೆರವು ಮಾಡಲು ಬಂದರೆ ನಾವು ಖಂಡಿತಾ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನಧಿಕೃತ ಅಂಗಡಿ ತೆರವುಗೊಳಿಸಲು ಬಂದ ಪೊಲೀಸರ ಮೇಲೆ ಪೆಟ್ರೋಲ್​ ಎರಚಿದ ಭೂಪ

ಶಾಸಕರ ಕಚೇರಿ ತೆರವು; ಬಯಸಿದ ಖಾತೆ ಸಿಗದೇ ರಾಜೀನಾಮೆ ನೀಡುವುದಾಗಿ ಒತ್ತಡ ಹಾಕುತ್ತಿದ್ದಾರೆಯೇ ಸಚಿವ ಆನಂದ್ ಸಿಂಗ್?

Published On - 11:23 am, Mon, 23 August 21