
ಕೋಲಾರ, ಮೇ 17: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಕೃಷಿ ಹೊಂಡದಲ್ಲಿ ಈಜಾಡಲು ತೆರಳಿದ್ದ ತಂದೆ (Father) ಹಾಗೂ ಇಬ್ಬರು ಮುದ್ದಿನ ಮಕ್ಕಳು ನೀರು ಪಾಲಾಗಿರುವ (death) ದಾರುಣ ಘಟನೆ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ಶ್ರೀನಿವಾಸ್ (40), ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಮೃತ ದುರ್ದೈವಿಗಳು. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ರಜಾದಿನವಾಗಿದ್ದರಿಂದ ತಂದೆ ಶ್ರೀನಿವಾಸ್, ತಮ್ಮಿಬ್ಬರು ಮಕ್ಕಳಿಗೆ ಈಜು ಕಲಿಸಿಕೊಡಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಗ್ರಾಮದ ಭೈರಪ್ಪ ಎಂಬುವರಿಗೆ ಸೇರಿದ ಕೃಷಿ ಹೊಂಡದ ಬಳಿ ತೆರಳಿದ್ದಾಗ, ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಮೂವರೂ ಕೃಷಿ ಹೊಂಡದಲ್ಲೇ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಗೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಎನಮರೇಪಲ್ಲಿ ಕ್ರಾಸ್ ಸಮೀಪ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೇವಲ 200 ರೂ.ಗಾಗಿ ನಡೀತು ಕೊಲೆ! ತಾಯಿಗೇ ಚಾಕು ಇರಿದಿದ್ದವನಿಂದ ಮತ್ತೊಂದು ಹೇಯ ಕೃತ್ಯ
ಎನಮರೇಪಲ್ಲಿ ಗ್ರಾಮದ ಮುನಿರಾಜು (43) ಹಾಗೂ ಪಣಸಮಾಕಲಹಳ್ಳಿ ಗ್ರಾಮದ ಸತೀಶ್ (38) ಮೃತ ದುರ್ದೈವಿಗಳು. ಮುನಿರಾಜು ಮತ್ತು ಸತೀಶ್ ಇಬ್ಬರೂ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು, ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Sun, 17 May 26