ಕಂದಾಯ ಸಚಿವ ಕೃಷ್ಣಬೈರೇಗೌಡ ಕೊರಳಿಗೆ ಭೂ ಕಬಳಿಕೆ ಉರುಳು? ಲೋಕಾಯುಕ್ತಕ್ಕೆ ಬಿಜೆಪಿ ದೂರು
ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಕೋಲಾರದ ಗರುಡನಪಾಳ್ಯದಲ್ಲಿ 21 ಎಕರೆ ಸರ್ಕಾರಿ ಖರಾಬು ಭೂಮಿ ಕಬಳಿಕೆ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಕಂಪ್ಲೇಂಟ್ ನೀಡಲಾಗಿದ್ದು, ಈ ಸಂಬಂಧ ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

ಕೋಲಾರ, ಜನವರಿ 05: ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಕೆ ಆರೋಪ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕೋಲಾರ ನಗರದಲ್ಲಿರುವ ಲೋಕಾಯುಕ್ತ ಕಚೇರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಕಂಪ್ಲೇಂಟ್ ನೀಡಲಾಗಿದೆ. ತಮ್ಮ ಹುಟ್ಟೂರು ಕೋಲಾರ ತಾಲೂಕಿನ ಗರುಡಪಾಳ್ಯದಲ್ಲಿಯೇ ಸಚಿವರು ಸರ್ಕಾರಿ ಖರಾಬು ಜಮೀನು ಕಬಳಿಕೆ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ವೆ ನಂಬರ್ 46, 47ರಲ್ಲಿ 21 ಎಕರೆ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
ಈ ಬಗ್ಗೆ 2025ರ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬು ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎನ್ನುವವರೇ ಜಮೀನು ಕಬಳಿಸಿದ್ದಾರೆ. ಮೂಲ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ. ಹೀಗಾಗಿ ಕೃಷ್ಣಭೈರೇಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ; ಭೂಮಿ ಎಲ್ಲಿ? ಹೇಗಿದೆ ನೋಡಿ
ತಮ್ಮ ಮೇಲೆನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೃಷ್ಣಭೈರೇಗೌಡ, ಬಿಜೆಪಿ ಆರೋಪ ಅಲ್ಲಗಳೆದಿದ್ದರು. ಅದು ನಮ್ಮ ತಾತನವರ ಜಾಗ, ಅವರಿಗೆ ಮೂರು ಜನ ಮಕ್ಕಳು . ಎಲ್ಲರಿಗೆ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ, ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ ಎಂದಿದ್ದರು. ರಾಜಕೀಯ ಕೆಸರೆರಚಾಟಕ್ಕೆ ಅವರು ಆರೋಪ ಮಾಡಿದ್ದಾರೆ. ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ. ಆರೋಪ ಮಾಡಿರುವವರು ಘನತೆ ಗೌರವಕ್ಕೆ ಕೆಳಗೆ ಹೋಗ್ತೀವಿ ಅಂದ್ರೆ ನಾವೇನು ಮಾಡೋಣ ಎಂದು ಬಿಜೆಪಿಗರಿಗೆ ಕೌಂಟರ್ ಕೊಟ್ಟಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Mon, 5 January 26
