ಕೋಲಾರ ಡಿಸಿಸಿ ಬ್ಯಾಂಕ್​ ನಿರ್ದೇಶಕರಿಗೆ ಅನರ್ಹತೆಯ ಆತಂಕ

ಸಾಕಷ್ಟು ವಹಿವಾಟು ಮಾಡುವ ಮೂಲಕ ಹೆಸರು ಮಾಡಿದ್ದ ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಏನಾಗುತ್ತೋ ಏನೋ ಅನ್ನೋ ಆತಂಕ ಇತ್ತೀಚೆಗೆ ಶುರುವಾಗಿದೆ.

ಕೋಲಾರ ಡಿಸಿಸಿ ಬ್ಯಾಂಕ್​ ನಿರ್ದೇಶಕರಿಗೆ ಅನರ್ಹತೆಯ ಆತಂಕ
ಕೋಲಾರ ಡಿಸಿಸಿ ಬ್ಯಾಂಕ್
TV9kannada Web Team

| Edited By: preethi shettigar

Sep 25, 2021 | 8:11 AM

ಕೋಲಾರ: ನಷ್ಟದ ಸುಳಿಗೆ ಸಿಲುಕಿದ್ದ ಆ ಬ್ಯಾಂಕ್ ಕಳೆದ ಎಂಟು ವರ್ಷಗಳಲ್ಲಿ ಮತ್ತೆ ಪುಟಿದೆದ್ದು ಉತ್ತಮ ವಹಿವಾಟು ಮಾಡುವ ಜಿಲ್ಲೆಯ ಬಡವರು, ರೈತರು, ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿನ ಮೂಲಾಧಾರವಾಗಿ ಗಮನ ಸೆಳೆಯುತ್ತಿದೆ. ಈ ನಡುವೆ ಈ ಬ್ಯಾಂಕ್​ನಲ್ಲಿ ರಾಜಕೀಯ ಸೋಕಿದ್ದೇ ನೋಡಿ, ಇಲ್ಲದ ಸಲ್ಲದ ಸಂಕಷ್ಟಗಳು ಬಂದು ಸುತ್ತಿಕೊಂಡಿದ್ದು, ಸದ್ಯ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ತಮ್ಮ ಸ್ಥಾನದ ಅನರ್ಹತೆ ಆತಂಕ ಎದುರಾಗಿದೆ.

ಎಂಟು ವರ್ಷಗಳಲ್ಲಿ ದೇಶದ ಗಮನ ಸೆಳೆದ ಬ್ಯಾಂಕ್ ಕೋಲಾರ ಡಿಸಿಸಿ ಬ್ಯಾಂಕ್ ರಾಜ್ಯ ಹಾಗೂ ದೇಶದಲ್ಲೇ ಸ್ತ್ರೀಶಕ್ತಿ ಸಂಘಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ರೈತರಿಗೆ ಸಾಲ ನೀಡುವ ಮೂಲಕ ಹಾಗೂ ಡಿಜಿಟಲ್ ಬ್ಯಾಂಕ್ ಆಗಿ ಹೆಸರು ಮಾಡಿ ದೇಶದ ಗಮನ ಸೆಳೆದಿತ್ತು. ಕಳೆದ ಎಂಟು ವರ್ಷಗಳ ಹಿಂದಷ್ಟೇ ನಷ್ಟದ ಸುಳಿಗೆ ಸಿಲುಕಿ ಬಾಗಿಲು ಹಾಕುವ ಸ್ಥಿತಿ ತಲುಪಿದ್ದ ಬ್ಯಾಂಕ್ ಮತ್ತೆ ಪುಟಿದೆದ್ದು ಇಂದು 400 ಕೋಟಿ ಠೇವಣಿ ಸಂಗ್ರಹಿಸಿದ್ದರೆ, 1,300 ಕೋಟಿ ರೂಪಾಯಿಯಷ್ಟು ರೈತರಿಗೆ, ಮಹಿಳಾ ಸ್ತ್ರೀಶಕ್ತಿ ಸಂಘಗಗಳಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಮದ್ಯಮ ವರ್ಗದ, ಬಡ ಜನರ ಮನೆ ಮಾತಾಗಿದೆ.

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಆತಂಕ ಏನದು ಪ್ರಕರಣ? ಸಾಕಷ್ಟು ವಹಿವಾಟು ಮಾಡುವ ಮೂಲಕ ಹೆಸರು ಮಾಡಿದ್ದ ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಏನಾಗುತ್ತೋ ಏನೋ ಅನ್ನೋ ಆತಂಕ ಇತ್ತೀಚೆಗೆ ಶುರುವಾಗಿದೆ. ಕಾರಣ ಏಕಾಏಕಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸೇರಿ ಐದು ಜನ ನಿರ್ದೇಶಕರುಗಳಿಗೆ ಬಂದ ನೊಟೀಸ್. ಹೌದು 1996 ರಲ್ಲಿ ಡಿಸಿಸಿ ಬ್ಯಾಂಕ್​ಗೆ ಸಿಬ್ಬಂದಿಗಳ ನೇಮಕಾತಿ ವಿಚಾರದಲ್ಲಿ ರೋಸ್ಟರ್ ನಿಯಮ ಪಾಲಿಸಿಲ್ಲ. ನೇಮಕಾತಿ ಅಕ್ರಮ ಎಂಬ ಕಾರಣಕ್ಕೆ 25 ಜನರನ್ನು ವಜಾ ಮಾಡುವಂತೆ ಈ ಹಿಂದೆಯೇ ಸಹಕಾರ ಇಲಾಖೆಯ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ಆದೇಶ ನೀಡಲಾಗಿತ್ತು. ಆದರೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಗಳನ್ನು ವಜಾ ಮಾಡಬೇಕು ಹಾಗೂ ಅವರ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಅದರ ಪ್ರಕಾರ ಹಿಂದೆ ಇದ್ದ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಂಡು ಸಿಬ್ಬಂದಿಗಳನ್ನು ಹಂತ ಹಂತವಾಗಿ ವಜಾ ಮಾಡುವ ಕೆಲಸ ಮಾಡಿತ್ತಾದರೂ ಸಿಬ್ಬಂದಿಗಳು ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆ ಪ್ರಕರಣ ಅಲ್ಲಿಗೆ ನಿಂತಿತ್ತು. ಆದರೆ ಇತ್ತೀಚೆಗೆ ಕೋಲಾರ ಡಿಸಿಸಿ ಬ್ಯಾಂಕ್​ನ್ನು ವಿಭಜನೆ ಮಾಡುವ ವಿಚಾರವಾಗಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಜನಪ್ರತಿನಿಧಿಗಳ ನಡುವೆ ಶುರುವಾದ ಪರ ವಿರೋಧದ ಚರ್ಚೆ ಬೆನ್ನಲ್ಲೇ ಏಕಾಏಕಿ ಹಳೆಯ ಪ್ರಕರಣ ಮರುಜೀವ ಪಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಹಿಂದೆ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಏಕೆ? ಇನ್ನು 2000 ನೇ ಇಸವಿಯಿಂದ 2010 ರವರೆಗೆ ಬ್ಯಾಂಕ್​ಗೆ ಆಡಳಿತಾಧಿಕಾರಿ ನೇಮಕವಾಗಿದ್ದ ಅವಧಿಯಲ್ಲಿ ಈ ಪ್ರಕರಣ ಸಂಬಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ನಂತರ ಬಂದ 2014 ರ ಆಡಳಿತ ಮಂಡಳಿಗೆ ಸಿಬ್ಬಂದಿಗಳನ್ನು ವಜಾ ಮಾಡುವಂತೆ ಮತ್ತೆ ಸೂಚಿಸಿತ್ತು. ಈವೇಳೆ ಮೂರು ಹಂತದಲ್ಲಿ ವಜಾ ಮಾಡುವುದಾಗಿ ಆಡಳಿತ ಮಂಡಳಿಯಲ್ಲಿ ತೀರ್ಮಾಣ ಕೈಗೊಂಡು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ನಂತರ ವಜಾಗೊಂಡಿದ್ದ ಸಿಬ್ಬಂದಿಗಳು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಸದ್ಯ ಆ 25 ಮಂದಿ ಬ್ಯಾಂಕ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸಹಕಾರಿ ಜಂಟಿ ನಿಬಂಧಕರ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಸೆಕ್ಷನ್ 29ಸಿ ಅಡಿಯಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನಿಮ್ಮನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಬಾರದೇಕೆ ಎಂದು ಐದು ಜನ ನಿರ್ದೇಶಕರುಗಳಾದ ಗೋವಿಂದೇಗೌಡ, ನೀಲಕಂಠೇಗೌಡ, ಸೋಮಣ್ಣ, ದಯಾನಂದ್ ಹಾಗೂ ಹನುಮಂತರೆಡ್ಡಿಯವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು.

ಸೆಪ್ಟೆಂಬರ್ 29 ಕ್ಕೆ ಮುಂದೂಡಿದ ತೀರ್ಪು! ಈ ಪ್ರಕರಣ ಸಂಬಂಧ ಇದೇ ಸೆಪ್ಟಂಬರ್ 13 ರಂದು ತೀರ್ಪು ಹೊರಬೀಳಬೇಕಿತ್ತು ಆದರೆ ಕಾರಣಾಂತರಗಳಿಂದ ವಿಚಾರಣೆ ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದ್ದು. ಸದ್ಯ ನ್ಯಾಯಾಲಯದ ತೀರ್ಪು ಏನಾಗುತ್ತೋ ಏನೋ ಅನ್ನೋ ಆತಂಕ ಸದ್ಯ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ತಲೆದೂರಿದ್ದು ನ್ಯಾಯ ನಮ್ಮ ಪರವಾಗಿರುತ್ತದೆ ಅನ್ನೋ ವಿಶ್ವಾಸ ನಿರ್ದೇಶಕರುಗಳದ್ದು.

ಒಟ್ಟಾರೆ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್​ನಲ್ಲಿ ರಾಜಕೀಯ ಪ್ರವೇಶ ಮಾಡಿದ್ದೇ ಸದ್ಯ ಬ್ಯಾಂಕ್ ಕೆಲಸ ಬಿಟ್ಟು, ನಿರ್ದೇಶಕರುಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ ಉಳಿಯುತ್ತಾ ಇಲ್ಲಾ ಬ್ಯಾಂಕ್ ನಿರ್ದೇಶಕರುಗಳು ಉಳಿಯುತ್ತಾ ಅನ್ನೋದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: 

ಕೋಲಾರ: ರೂಬಿಕ್ಸ್ ಕ್ಯೂಬ್​ನಲ್ಲಿ ಸಾಧನೆಯ ದಾಖಲೆ ಬರೆದ ಬಾಲಕಿ; 14ನೇ ವಯಸ್ಸಿಗೆ 600 ಮಕ್ಕಳಿಗೆ ಶಿಕ್ಷಕಿ

ಅಸ್ಪೃಶ್ಯತೆಯನ್ನು ತೊಲಗಿಸೋಣ ಎಂದು ಗ್ರಾಮಸ್ಥರ ಬಳಿ ಪ್ರತಿಜ್ಞೆ ಮಾಡಿಸಿದ ಕೊಪ್ಪಳ ಪೊಲೀಸರು

(Kolar DCC Bank Director have a chance to Disqualification)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada