
ಕೋಲಾರ, ಮೇ 18: ಕೋಲಾರ (Kolar) ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಸರಣಿ ಸಾವಿನ ಮೃತ್ಯುಕೂಪಗಳಾಗಿ ಪರಿಣಮಿಸಿದ್ದು, ಕಳೆದ ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಏಳು ಜನ ಈ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾಧಿಕಾರಿ (DC) ಎಂ.ಆರ್. ರವಿ ಅವರು ತಕ್ಷಣವೇ ವಿಶೇಷ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಕೃಷಿ ಹೊಂಡಗಳಿಗೆ ಏಳು ದಿನಗಳ ಒಳಗಾಗಿ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಿ ಸುರಕ್ಷತೆ ಕಾಯ್ದುಕೊಳ್ಳಬೇಕು, ಇಲ್ಲದಿದ್ದರೆ ಅಂತಹ ಕೃಷಿ ಹೊಂಡಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳಿಗೆ ಮತ್ತು ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಲೂರು ತಾಲೂಕಿನ ನಕ್ಕನಹಳ್ಳಿಯಲ್ಲಿ ಭಾನುವಾರ ಶ್ರೀನಿವಾಸ್ (40) ಹಾಗೂ ಅವರ ಮಕ್ಕಳಾದ ಚೇತನ್ (13), ರಾಜೇಶ್ (8) ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ತುರ್ತು ಸಭೆ
ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಹೊಂಡಗಳಿಗೆ ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇ 5 ರಂದು ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿ ಗ್ರಾಮದಲ್ಲಿ ತನುಶ್ರೀ (15) ಮತ್ತು ಕಾರ್ತಿಕ್ (8) ಎಂಬ ಅಣ್ಣ-ತಂಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಮೇ 8 ರಂದು ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋದ ನರೇಂದ್ರ (25) ಹಾಗೂ ಚಂದನ್ (25) ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು.
ಇದನ್ನೂ ಓದಿ: ಕೋಲಾರ: ಜವರಾಯನಾದ ಕೃಷಿ ಹೊಂಡ, ಈಜು ಕಲಿಸಲು ಹೋದ ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ
ಇದೀಗ ಭಾನುವಾರ ಮಾಲೂರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. ರೈತರು ತಮ್ಮ ಜಮೀನುಗಳಲ್ಲಿ ತಾವೇ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ಸೂಕ್ತ ರಕ್ಷಣೆ ಒದಗಿಸದ ಕಾರಣ ಈ ಅನಾಹುತಗಳು ಸಂಭವಿಸುತ್ತಿದ್ದು, ಸದ್ಯ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 am, Mon, 18 May 26