AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ಸ್ಮಶಾನ ಪೂಜೆ; ಕೋಲಾರದ ಈ ಆಚರಣೆ ನೋಡಿದರೆ ಮೈ ಜುಮ್ಮೆನ್ನೋದು ಗ್ಯಾರಂಟಿ

ಶಿವರಾತ್ರಿಯೆಂದರೆ ಬಹುತೇಕರು ಕಟ್ಟುನಿಟ್ಟಾಗಿ ಉಪವಾಸವಿದ್ದು ಶಿವರಾತ್ರಿಯನ್ನು ಆಚರಣೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದಷ್ಟು ಜನ ಶಿವರಾತ್ರಿಯನ್ನು ಶಿವರಾತ್ರಿಯ ನಂತರ ಬರುವ ಅಮಾವಾಸ್ಯೆಯ ದಿನ ಸ್ಮಶಾನವಾಸಿಯಾದ ಶಿವನನ್ನು ವಿಭಿನ್ನವಾಗಿ ಪೂಜಿಸಿ, ಆರಾಧಿಸಿ, ಕಾಳಿ ಮಾತೆಯ ವೇಷದಾರಿಯಾಗಿ ನರಕಾಸುರ ಸಂಹಾರವನ್ನು ಮಾಡಿ ಬಲಿ ಕೊಟ್ಟು ಪೂಜಿಸುತ್ತಾರೆ. ಅಲ್ಲಿನ ಆಚರಣೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಶಿವರಾತ್ರಿ ಸ್ಮಶಾನ ಪೂಜೆ; ಕೋಲಾರದ ಈ ಆಚರಣೆ ನೋಡಿದರೆ ಮೈ ಜುಮ್ಮೆನ್ನೋದು ಗ್ಯಾರಂಟಿ
Kolar Shivratri
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Feb 27, 2025 | 8:58 PM

Share

ಕೋಲಾರ (ಫೆಬ್ರವರಿ 27): ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಿರುವ ಕಾಳಿಯ ವೇಷಧಾರಿ ಮಂಗಳಮುಖಿ, ಮತ್ತೊಂದೆಡೆ ಕುರಿ, ಮೇಕೆಯನ್ನು ಬಾಯಿಯಲ್ಲಿ ಕಚ್ಚಿ ರಕ್ತ ಕುಡಿಯುತ್ತಿರುವ ಭಯಾನಕ ದೃಶ್ಯ. ಇನ್ನೊಂದೆಡೆ ಸಮಾಧಿಯ ಮೇಲೆ ನಿಂತು ಬಿಯರ್ ಕುಡಿದು, ಬೀಡಿ ಸೇದಿ ಹೊಗೆ ಬಿಡುತ್ತಿರುವ ದೃಶ್ಯ. ಕುತೂಹಲದಿಂದ ವೀಕ್ಷಿಸುತ್ತಿರುವ ನೂರಾರು ಭಕ್ತರು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು ಕೋಲಾರ ಜಿಲ್ಲೆಯಲ್ಲಿ. ಶಿವರಾತ್ರಿಯ ಮಾರನೇ ದಿನ ಬರುವ ಅಮವಾಸ್ಯೆಯ ದಿನ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಂಚಹಳ್ಳಿ, ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ಹಾಗೂ ಕೋಲಾರ ನಗರದ ಭೈರೇಗೌಡ ನಗರದ ಸ್ಮಶಾನ ಸೇರಿದಂತೆ ವಿವಿಧೆಡೆ. ರಾಜ್ಯದ ಗಡಿ ಜಿಲ್ಲೆ ತಮಿಳು ಸಂಸ್ಕೃತಿಗೆ ಮಾರುಹೋಗಿರುವ ಬಂಗಾರಪೇಟೆ ಮತ್ತು ಕೆಜಿಎಫ್​ ನಗರದಲ್ಲಿ ಇಂದಿಗೂ ಬಹುತೇಕ ತಮಿಳು ಸಂಸ್ಕೃತಿ ಆಚರಣೆಯಲ್ಲಿದೆ.

ಮಹಾಶಿವರಾತ್ರಿಯ ನಂತರ ಬರುವ ಅಮವಾಸ್ಯೆಯಂದು ಕಾಳಿ ಆರಾಧಕರು ದುಷ್ಟ ಶಕ್ತಿಗಳ ನಿವಾರಣೆಗೆ, ಕಾಳಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುವ ನರಕಾಸುರ ಸಂಹಾರ ಮತ್ತು ಸ್ಮಶಾನ ಉತ್ಸವ ಎಂಬ ವಿಶೇಷ ಆಚರಣೆ ಮಾಡುತ್ತಾರೆ. ಈ ದಿನದಂದು ಕಾಳಿ ಆರಾಧಕ ಕಮಲ್​​ ಎಂಬ ಪೂಜಾರಿ ಕಾಳಿ ವೇಷದಾರಿಯಾಗಿ ತಲೆಯ ಮೇಲೆ ಕಿಟೀಟ ಇಟ್ಟುಕೊಂಡು, ಕುತ್ತಿಗೆಗೆ ತಲೆಬುರುಡೆಯ ಹಾರ ಹಾಕಿಕೊಂಡು ಕಾಳಿ ದೇವಾಲಯದಿಂದ ನೃತ್ಯ ಮಾಡುತ್ತಾ ಸ್ಮಶಾನಕ್ಕೆ ಬರುತ್ತಾರೆ. ಅಲ್ಲಿ ನಿರ್ಮಾಣ ಮಾಡಿರುವ ನರಕಾಸುರ ಮೂರ್ತಿಯ ಮುಂದೆ ನೃತ್ಯ ಮಾಡುತ್ತಾ, ಆ ಕಾಳಿ ಮಾತೆಯೇ ಆವಾಹನೆಯಾದಂತೆ ಕೊನೆಗೆ ತ್ರಿಶೂಲದಿಂದ ನರಕಾಸುರನ ಹೊಟ್ಟೆ ಬಗೆಯುವ ಮೂಲಕ ಈ ನರಕಾಸುರ ಸಂಹಾರ ಮಾಡುತ್ತಾನೆ.

ಇದನ್ನೂ ಓದಿ: ಎಐಸಿಸಿ ಆಕ್ಷೇಪಣೆಗಳಿಗೆ, ‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗೇ ಸಾಯುತ್ತೇನೆ’ ಎಂದ ಡಿಕೆ ಶಿವಕುಮಾರ್

ನಂತರ ಮೇಕೆ ಹಾಗೂ ಕೋಳಿಯನ್ನು ವಿಶಿಷ್ಟ ರೀತಿಯಲ್ಲಿ ಬಲಿಕೊಡುತ್ತಾರೆ. ಕುತ್ತಿಗೆ ಕತ್ತರಿಸಿದ ನಂತರ ಮೇಕೆಯ ಬಿಸಿ ರಕ್ತವನ್ನೇ ಸೇವಿಸುತ್ತಾನೆ, ಅಷ್ಟೇ ಅಲ್ಲ ಕೋಳಿಯ ಕತ್ತನ್ನು ಬಾಯಿಯಿಂದ ಕಚ್ಚಿ ಎಸೆದು ಕೋಳಿಯ ರಕ್ತ ಹೀರುತ್ತಾನೆ, ಈ ದೃಶ್ಯವಂತೂ ನೆರೆದಿದ್ದವರ ಮೈ ಜುಮ್ಮೆನಿಸುತ್ತದೆ. ಜೊತೆಗೆ ಶಿವರಾತ್ರಿಯಂದು ನಾಡಿನಲ್ಲಿ ಶಿವನ ಆಚರಣೆ ಮಾಡಿದರೆ, ಮಂಗಳಮುಖಿಯರು ಸ್ಮಶಾನದಲ್ಲಿ ಅರ್ಧನಾರೀಶ್ವರನಂತೆ ಶಿವನನ್ನು ಪೂಜೆ ಮಾಡುತ್ತಾರೆ. ಇನ್ನು ಬಂಗಾರಪೇಟೆ ತಾಲ್ಲೂಕು ಮಂಚಹಳ್ಳಿ ಗ್ರಾಮದಲ್ಲಂತು ತರಕಾರಿಗಳನ್ನು ಇಟ್ಟು ನರಕಾಸುರ ಸಂಹಾರ ಮಾಡುತ್ತಾರೆ.

Kolar Shivaratri

ಹೀಗೆ ಹೆಚ್ಚಾಗಿ ತಮಿಳುನಾಡಿನಲ್ಲೇ ಪ್ರಚಲಿತವಿರುವ ಇಂಥದ್ದೊಂದು ಆಚರಣೆ ನಮ್ಮ ರಾಜ್ಯದ ಗಡಿಯಭಾಗವಾದ ಕೆಜಿಎಫ್​ನಲ್ಲೂ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ವಿಶೇಷವಾದ ದಿನದಂದು ಈ ನರಕಾಸುರ ಸಂಹಾರವನ್ನು ನೋಡಲು ದೂರದ ಊರು ಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರಿನಿಂದಲೂ ಜನ ಬರುತ್ತಾರೆ. ಈ ವಿಶೇಷ ದಿನದಂದು ಪೂಜೆ ಯಲ್ಲಿ ಭಾಗವಹಿಸಿದರೆ ದುಷ್ಟಶಕ್ತಿಗಳು ಸಂಹಾರವಾಗುತ್ತವೆ ಅನ್ನೋದು ನಂಬಿಕೆ. ಹಾಗಾಗಿ ನರಕಾಸುರ ಸಂಹಾರದ ನಂತರ ಅಲ್ಲಿನ ಮಣ್ಣನ್ನು ಜನರು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿಟ್ಟರೆ ಮನೆಗೆ ದುಷ್ಟಶಕ್ತಿಗಳು ಪ್ರವೇಶವಿರುವುದಿಲ್ಲ. ಜೊತೆಗೆ ಕಾಳಿ ಆರಾಧಕ ಆ ಪೂಜಾರಿಯ ಶಕ್ತಿ ಸಹ ಹೆಚ್ಚಾಗುತ್ತದೆ ಅನ್ನೋದು ನಂಬಿಕೆ.

ಇದನ್ನೂ ಓದಿ: ಇಶಾ ಫೌಂಡೇಷನ್​ನ ಶಿವರಾತ್ರಿಯಲ್ಲಿ ಡಿಕೆಶಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ಮುಖಂಡರಿಂದಲೇ ಅಸಮಾಧಾನ

ಹಾಗಾಗಿ, ಇಲ್ಲಿಗೆ ಬರುವ ಭಕ್ತರು ತಮ್ಮ ಹಲವು ಬೇಡಿಕೆಗಳನ್ನು ಇಲ್ಲಿ ದೇವರ ಮುಂದಿಟ್ಟಿರುವ ಅದರಂತೆ ತಮ್ಮ ಹತ್ತಾರು ಬೇಡಿಕೆಗಳು ಈಡೇರಿರುವ ಉದಾಹರಣೆಗಳಿವೆ ಅನ್ನೋದು ಇಲ್ಲಿ ಬಂದಿದ್ದ ಜನರ ಮಾತು. ಅದರಂತೆ ಹರಕೆ ಈಡೇರಿದ ಮೇಲೆ ಪ್ರಾಣಿ ಬಲಿ ಕೊಟ್ಟು ತಮ್ಮ ಹರಕೆ ತೀರಿಸುತ್ತಾರೆ.

ಒಟ್ಟಾರೆ ದುಷ್ಟಶಕ್ತಿಗಳ ನಿವಾರಣೆಗೆ ಕರಾವಳಿ ಭಾಗರದಲ್ಲಿ ಭೂತಾರಾಧನೆ ಮಾಡಿದರೆ, ಬಯಲು ಸೀಮೆ ಪ್ರದೇಶದಲ್ಲಿ ಹೀಗೆ ಕಾಳಿ ಆರಾಧಕರು ನರಕಾಸುರ ಸಂಹಾರ ಮಾಡೋ ಮೂಲಕ ಸಮಾಜದಲ್ಲಿ ಹಾಗೂ ಮನುಷ್ಯನಲ್ಲಿರುವ ದುಷ್ಟಶಕ್ತಿಗಳನ್ನು ಸಂಹಾರವಾಗುತ್ತದೆ ಅನ್ನೋ ನಂಬಿಕೆ ಈಗಲೂ ಹಲವು ವರ್ಷಗಳಿಂದ ಜೀವಂತವಾಗಿರುವುದಂತೂ ಸುಳ್ಳಲ್ಲ. ಕೆಲವರಿಗೆ ಇದು ಮೂಡನಂಭಿಕೆ ಅನಿಸಿದರೂ ಆಚರಣೆ ಮಾತ್ರ ತಪ್ಪಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ