
ಕೋಲಾರ, ಅಕ್ಟೋಬರ್ 14: ಮುಳಬಾಗಿಲು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಜನರ ನಿದ್ದೆಗಡೆಸಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಮಂಕಿ ಕ್ಯಾಪ್ ಕಳ್ಳರನ್ನ ಬಂಧಿಸಿದ್ದಾರೆ. ತಮಿಳುನಾಡಿನ ತಿರುಪತ್ತೂರು ಮೂಲದ ಮುನಿರಾಜು, ಸತೀಶ್ ಕುಮಾರ್ ಮತ್ತು ಪೆರುಮಾಳ್ ಬಂಧಿತರು. ಇವರು ಹಗಲಲ್ಲಿ ಹಳೆ ಪಾತ್ರೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಊರಲ್ಲಿ ಓಡಾಡುತ್ತಿದ್ದರು. ರಾತ್ರಿ ಆಯ್ತು ಅಂದರೆ ಸಾಕು ಮಂಕಿ ಕ್ಯಾಪ್ ಧರಿಸಿ ಬೀಗ ಹಾಕಿರುವ ಮನೆಗಳ ಕಳ್ಳತನಕ್ಕೆ ಇಳಿಯುತ್ತಿದ್ದರು. ಹೀಗೆ ಎರಡು ವರ್ಷಗಳಿಂದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೋನಿ, ಶಿವಕೇಶವ ನಗರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬಂಧಿತರು ಕಳ್ಳತನ ಮಾಡುತ್ತಿದ್ದರು. ಕೃಷ್ಣ ಎಂಬಾತನ ಬಂಧನಕ್ಕೆ ಬಲೆಬೀಸಿದ್ದಾರೆ. ಬಂಧಿತರಿಂದ ಸುಮಾರು 52 ಲಕ್ಷ ರೂ. ಮೌಲ್ಯದ 322 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಆರೋಪಿಗಳು ಕರ್ನಾಟಕದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿ ತಮಿಳುನಾಡಿನ ತಿರುಪತ್ತೂರುನಲ್ಲಿ ಸುಮಾರು 20 ಲಕ್ಷ ರೂ ಮೌಲ್ಯದ ಮನೆಯನ್ನು ನಿರ್ಮಾಣ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸದ್ಯ ಪೊಲೀಸರು ಮನೆಯನ್ನು ಸಹ ತಮ್ಮ ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಕ್ರಮ ನಡೆಸಿದ್ದಾರೆ. ಇನ್ನು ಕಳೆದ ಎರಡು ವರ್ಷಗಳಿಂದ ಕೋಲಾರ ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು, ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಸುಮಾರು 10 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಇನ್ನು ಮುಳಬಾಗಿಲು ಎಎಸ್ಪಿ ಮನೀಷಾ ಅವರು ನಿರಂತರವಾಗಿ ಕಳ್ಳರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಕೆಲವು ಸಂದರ್ಭದಲ್ಲಿ ವೇಷ ಮರೆಸಿಕೊಂಡು ಹೋಗಿ ಆರೋಪಿಗಳ ಪತ್ತೆಗೂ ಮುಂದಾಗಿದ್ದರು. ಮುಳಬಾಗಿಲು ನಗರದಲ್ಲಿ ಮಂಕಿ ಕ್ಯಾಪ್ ಧರಿಸಿಕೊಂಡು, ಬರಿಗಾಲಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು. ಆರೋಪಿಗಳು ಹಗಲಲ್ಲಿ ಹಳೇ ಪಾತ್ರೆ ಮಾರಾಟ ಮಾಡುವ ರೀತಿಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಓಡಾಡುತ್ತಿದ್ದರು. ಆದರೆ ರಾತ್ರಿ ಆಗುತ್ತಿದ್ದಂತೆ ಕಳ್ಳರಾಗುತ್ತಿದ್ದರು.
ಇದನ್ನೂ ಓದಿ: ಗಮನ ಬೇರೆಡೆ ಸೆಳೆದು KSRTC ಬಸ್ನಲ್ಲಿ ಚಿನ್ನಾಭರಣ ಕಳ್ಳತನ: ಆಂಧ್ರಪ್ರದೇಶದ ಮಹಿಳೆಯರ ಬಂಧನ
ಕರ್ನಾಟಕ ಸೇರಿದಂತೆ ವಿವಿಧೆಡೆ ನಡೆದಿರುವ ಕಳ್ಳತನ ಪ್ರಕರಣಗಳಲ್ಲೂ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ನಡೆದಿದೆ. ಪೊಲೀಸರು ಕಳ್ಳತನವಾಗಿರುವ ಪ್ರಕರಣವನ್ನು ಶೀಘ್ರದಲ್ಲಿ ಬಗೆಹರಿಸಿ ಮಾಲೀಕರಿಗೆ ಚಿನ್ನಾಭರಣಗಳನ್ನು ಕಳೆದುಕೊಂಡ ಜನರಿಗೆ ಹಿಂತಿರುಗಿಸುವ ಕೆಲಸ ಮಾಡಿದ್ದಾರೆ. ‘ನಮ್ಮ ಮನೆಯಲ್ಲಿ ಚಿನ್ನಾರಣ ಸೇರಿ ಸುಮಾರು 1ಲಕ್ಷ ರೂ ಹೆಚ್ಚು ಹಣ ಕಳೆದುಕೊಂಡಾಗ ನಮಗೆ ಮತ್ತೆ ಸಿಗುತ್ತೆ ಎಂಬ ಭಾವನೆ ಇರಲಿಲ್ಲ’ ಎಂದು ರೂಪ ಎನ್ನುವವರ ಮಾತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.