ರೈತರ ಮೊಗದಲ್ಲಿ ನಗು ತಂದ ವರಮಹಾಲಕ್ಷ್ಮಿ: ಬರಗಾಲದಲ್ಲೂ ಹೂವು ಬೆಳೆಗಾರರಿಗೆ ಒಲಿದ ಭಾಗ್ಯಲಕ್ಷ್ಮಿ

Kolar Flower Prices Hike: ಬರಗಾಲದ ಮಧ್ಯೆ ಬಂದಿರುವ ವರಮಹಾಲಕ್ಷ್ಮಿ ಹಬ್ಬ ಹೂವು ಬೆಳೆಗಾರರಿಗೆ ಸಾಕಷ್ಟು ಸಂತಸ ತಂದಿದೆ. ಏಕೆಂದರೆ ಕೋಲಾರ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ಹೂ ಬೆಳೆದ ರೈತನಿಗೆ ಭಾಗ್ಯಲಕ್ಷ್ಮಿಯೇ ಒಲೆದಿದ್ದಾಳೆ. ಆದರೆ ಬೆಲೆ ಏರಿಕೆಯಿಂದ ಗ್ರಾಹಕರು ಶಾಕ್​ ಆಗಿದ್ದಾರೆ.

ರೈತರ ಮೊಗದಲ್ಲಿ ನಗು ತಂದ ವರಮಹಾಲಕ್ಷ್ಮಿ: ಬರಗಾಲದಲ್ಲೂ ಹೂವು ಬೆಳೆಗಾರರಿಗೆ ಒಲಿದ ಭಾಗ್ಯಲಕ್ಷ್ಮಿ
ಹೂವು
Image Credit source: tv9 kannada
Edited By:

Updated on: Aug 20, 2026 | 9:35 PM

ಕೋಲಾರ, ಆಗಸ್ಟ್​ 20: ಶ್ರಾವಣ ಮಾಸದ ಸಂಭ್ರಮದೊಂದಿಗೆ ಸಾಲು ಸಾಲು ಹಬ್ಬಗಳ ಆಗಮನವಾಗಿದೆ. ಆದರೆ, ಕರುನಾಡಿನಲ್ಲಿ ಆವರಿಸಿರುವ ಬರಗಾಲದ ನಡುವೆ ಬಂದಿರುವ ವರಮಹಾಲಕ್ಷ್ಮಿ ಹಬ್ಬ (Varalakshmi Festival) ಒಂದೆಡೆ ಕಡು ಸಂಕಷ್ಟದಲ್ಲಿದ್ದ ಕೋಲಾರ (kolar) ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಮತ್ತೊಂದೆಡೆ ಹಬ್ಬದ ತಯಾರಿ ನಡೆಸುತ್ತಿದ್ದ ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಬಂಗಾರಕ್ಕಿಂತಲೂ ದುಬಾರಿಯಾಗಿದ್ದು, ಗ್ರಾಹಕರು ಶಾಕ್​ ಆಗಿದ್ದಾರೆ.

ಗಗನಕ್ಕೇರಿದ ಹೂವಿನ ದರ: ಕೊಳ್ಳಲು ಹೋದವರ ಎದೆ ನಡುಕ!

ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಹಿನ್ನೆಲೆ ಹೂವು, ಹಣ್ಣಿಗೆ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬ ಇನ್ನೊಂದು ದಿನ ಬಾಕಿ ಇರುವಾಗಲೇ ಹೂವಿನ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹೂವಿಗೆ ಬಂಗಾರದ ಬೆಲೆ ಬಂದಿದೆ. ಇಷ್ಟು ದಿನ ಕೆಜಿಗೆ 80 ರಿಂದ 100 ರೂ ಇದ್ದ ಬೆಲೆ ಅದರ ನಾಲ್ಕು ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೇಳಿದರೆ ನಿಮ್ಮ ಹೂವಿನಂತ ಹೃದಯ ಕೂಡ ಒಡೆದು ಹೋಗಬಹುದು. ಅಷ್ಟರ ಮಟ್ಟಿಗೆ ಬೆಲೆ ಏರಿಕೆ ಕಂಡಿದೆ.

ಇದನ್ನೂ ಓದಿ: ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ಲೀಟರ್‌ಗೆ ₹10 ದರ ಏರಿಕೆಗೆ ಆಗ್ರಹ

ಕೋಲಾರ ಮಾರುಕಟ್ಟೆಯಲ್ಲಿ ಒಂದು ಕೆಜಿ ಕನಕಾಂಬರ ಹೂವಿನ ಬೆಲೆ ಬರೋಬ್ಬರಿ ನಾಲ್ಕು ಸಾವಿರ ರೂ. ಇದ್ದರೆ, ಮಲ್ಲಿಗೆ ಹೂವು ಮೂರು ಸಾವಿರ ರೂ ಇದೆ. ನಿತ್ಯ ಪೂಜೆಗೆ ಬಳೆಸುವ ಸೇವಂತಿಗೆ, ಮಾರಿಗೋಲ್ಡ್​, ಚೆಂಡುಹೂವು, ಬಟನ್ಸ್​ ರೋಜ್​ ಬೆಲೆ 400 ರಿಂದ 500 ರೂಪಾಯಿಗೆ ಏರಿಕೆಯಾಗಿದೆ. ಆ ಮೂಲಕ ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ. ಅದ್ಧೂರಿಯಾಗಿ ಹಬ್ಬ ಮಾಡಬೇಕೆಂದುಕೊಂಡಿದ್ದ ಮಹಿಳೆಯರು ಸದ್ಯ ಸರಳವಾಗಿ ಲಕ್ಷ್ಮೀ ಪೂಜೆ ಮಾಡಿದರೆ ಸಾಕು ಎನ್ನುವಂತಾಗಿದೆ.

ರೈತನಿಗೆ ಒಲಿದ ಭಾಗ್ಯಲಕ್ಷ್ಮಿ

ಇನ್ನು ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲೆಯಲ್ಲಿ ಮಳೆ ಇಲ್ಲ. ಮುಂಗಾರು ಮಳೆಯೂ ಕೈಕೊಟ್ಟಿರುವ ಹಿನ್ನೆಲೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದೆ. ಪರಿಣಾಮವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಾರಿ ಮಳೆಯಾಶ್ರಿತ ವರ್ಷದ ಬೆಳೆಗಾಳಾದ ರಾಗಿ, ಅವರೆ, ಅಲಸಂದೆ, ನೆಲಗಡಲೆ ಬೆಳೆಯಲಾಗಿಲ್ಲ. ಆದರೆ ಬೋರ್‌ವೆಲ್ ಇರುವ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಕೆಲವೇ ಕೆಲವು ಜಿಲ್ಲೆಯ ರೈತರು ಸೇವಂತಿ, ಚೆಂಡು, ಮಲ್ಲಿಗೆ, ಸುಕಂದರಾಜ ಸೇರಿದಂತೆ ಕೆಲವು ಹೂವುಗಳನ್ನು ಬೆಳೆದಿರುವ ಹಿನ್ನೆಲೆ ಸದ್ಯ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವಿಗೆ ಭಾರಿ ಬೇಡಿಕೆ ಬಂದಿದೆ.

ಒಂದೆಡೆ ಸಡಗರ; ಮತ್ತೊಂದೆಡೆ ಕಳವಳ

ಹೂವು ಬೆಳೆದ ರೈತರಿಗೆ ಭರ್ಜರಿ ಜಾಕ್ ಪಾಟ್ ಎನ್ನುವಂತೆ ಉತ್ತಮ ಬೆಲೆ ಸಿಗುತ್ತಿದ್ದು ಹೂವು ಬೆಳೆಗಾರರು ಖುಷಿಯಾಗಿದ್ದಾರೆ. ಅಲ್ಲದೆ ಸಾಲು ಸಾಲು ಹಬ್ಬಗಳಿರುವ ಹಿನ್ನೆಲೆ ಇದೇ ರೀತಿಯ ಬೆಲೆ ಇರಲಿದ್ದು, ಅತ್ತ ಬರಗಾಲದಿಂದ ಕೆಲವು ರೈತರಿಗೆ ನಷ್ಟವಾದರೆ, ಇತ್ತ ಹೂವು ಬೆಳೆದ ರೈತರಿಗೆ ಲಾಭವೋ ಲಾಭ ಎನ್ನುವಂತಾಗಿದೆ. ಕನಕಾಂಬರ, ಮಲ್ಲಿಗೆ ಹೂವು ತಮಿಳುನಾಡಿನ ತಿರಪೂರು ಭಾಗದಿಂದ ತರಿಸಿಕೊಳ್ಳುವ ಪರಿಣಾಮವಾಗಿ ಆ ಭಾಗದಲ್ಲೂ ಅಷ್ಟಾಗಿ ಹೂವು ಬೆಳೆಯಲಾಗಿಲ್ಲ. ಹಾಗಾಗಿ ಕನಕಾಂಬರ ಹಾಗೂ ಮಲ್ಲಿಗೆ ಹೂವಿನ ಬೆಲೆ ಗಗನಕ್ಕೇರಿದೆ. ಸದ್ಯದ ಪರಿಸ್ಥಿತಿ ಹೂವು ಬೆಳೆದಿರುವ ರೈತರ ಬದುಕು ನಿಜಕ್ಕೂ ಹೂವಾಗುವಂತೆ ಬೆಲೆ ಬಂದಿದೆ, ಹೂವು ಬೆಳೆದಿರುವ ರೈತರ ಮನೆಗೆ ವರಮಹಾಲಕ್ಷ್ಮಿ ಪ್ರವೇಶ ಮಾಡೋದಂತು ಸುಳ್ಳಲ್ಲ.

ಇದನ್ನೂ ಓದಿ: ಕೋಲಾರದಲ್ಲಿ ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು

ಒಟ್ಟಾರೆ ವರಮಹಾಲಕ್ಷ್ಮಿ ಕೃಪೆಯೋ ಏನೋ ಗೊತ್ತಿಲ್ಲ ಬರಗಾಲದಲ್ಲಿ ಹೂವಿಗೆ ಉತ್ತಮ ಬೆಲೆ ಬಂದಿದ್ದು, ಬೆಳೆಗಾರರ ಮನೆಗೆ ವರಮಹಾಲಕ್ಷ್ಮಿಯೇ ಪ್ರವೇಶ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅತ್ತ ಅದ್ದೂರಿ ಹಬ್ಬ ಮಾಡಬೇಕೆಂದುಕೊಂಡಿದ್ದವರಿಗೆ ಬೆಲೆ ಏರಿಕೆಯಿಂದ ಕೊಂಚ ನಿರಾಸೆಯಾಗಿರೋದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:32 pm, Thu, 20 August 26

Loading...
Unable to load recommendations.
Follow Us