ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಮಹಿಳೆಯರು: ವೇದಿಕ್ ಸಂಸ್ಥೆ ಮೂಲಕ ಸ್ವಾವಲಂಬಿ ಬದುಕು

ಗುಂಡುನತ್ತ ಗ್ರಾಮದ ಮಹಿಳೆ ರತ್ನಮ್ಮ ತಮ್ಮೂರಿನ ಸಮಾನ ಮನಸ್ಕ ಮಹಿಳೆಯರ ಗುಂಪು ಕಟ್ಟಿಕೊಂಡು ಸ್ನೇಹಿತರೊಬ್ಬರು ನೀಡಿದ ಮಾರ್ಗದರ್ಶನದಂತೆ ಸಾವಯುವ ಕೃಷಿ ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ನಿರ್ಧರಿಸಿ ಆರಂಭಿಸಿದ ವೇದಿಕಾ ಸಂಸ್ಥೆ ಇಂದು ರಾಜ್ಯದ ಜನ ಮನ ಗೆಲುವಲ್ಲಿ ಯಶಸ್ವಿಯಾಗಿದೆ.

  • ರಾಜೇಂದ್ರ ಸಿಂಹ
  • Published On - 10:51 AM, 28 Jan 2021
ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಮಹಿಳೆಯರು: ವೇದಿಕ್ ಸಂಸ್ಥೆ ಮೂಲಕ ಸ್ವಾವಲಂಬಿ ಬದುಕು
ಸಾವಯವ ಹಾಗೂ ಸಿದ್ಧ ಆಹಾರಗಳ ತಯಾರಿಕೆ

ಕೋಲಾರ: ಸ್ವಾವಲಂಬಿಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಹಗಲಿರಳು ಕಷ್ಟಪಟ್ಟು ಒಂದು ಸಂಸ್ಥೆಯನ್ನು ಕಟ್ಟಿದ್ದು, ಈ ಸಂಸ್ಥೆಯಲ್ಲಿ ವಿದೇಶಿ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ಬಗೆ ಬಗೆಯ ಆಹಾರ ಉತ್ಪನ್ನಗಳನ್ನ ಪರಿಚಯಿಸಲಾಗಿದೆ. ಆ ಮೂಲಕ ಹತ್ತಾರು ಗ್ರಾಮೀಣ ಬಡ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದು, ಮಹಿಳೆಯರ ಆತ್ಮವಿಶ್ವಾಸ ನಿಜಕ್ಕೂ ಇತರರಿಗೆ ಮಾದರಿಯಾಗಿದೆ.

ಸಾವಯವ ಕೃಷಿಯಿಂದ ಸ್ವಾವಲಂಭಿ ಜೀವನ ಕಟ್ಟಿಕೊಂಡ ಮಹಿಳೆಯರು!
ಕೋಲಾರ ಕೃಷಿ ಪ್ರಧಾನ ಜಿಲ್ಲೆ.. ಇಲ್ಲಿ ಬಹುತೇಕರು ಕೃಷಿಯಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಇಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಮಹಿಳೆಯರೂ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಿದ್ದು, ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದ ಮಹಿಳೆಯರ ಗುಂಪಿನ ಸಾಧನೆ ಇದಾಗಿದೆ.

ಕೋಲಾರ ಜಿಲ್ಲೆಯಲ್ಲಿ ರೈತರು, ಮಹಿಳೆಯರಿಗೆ ಉದ್ಯೋಗವಕಾಶಗಳೆ ಕಡಿಮೆ. ಕೃಷಿ, ಹೈನೋದ್ಯಮದಲ್ಲಿ ಜೀವನ ಕಟ್ಟಿಕೊಂಡಿರುವ ಮಹಿಳೆಯರ ಮಧ್ಯೆ ಗುಂಡುಮನತ್ತ ಗ್ರಾಮದ ಸ್ವಾಭಿಮಾನಿ ಮಹಿಳೆಯರು ಹೊಸದೊಂದು ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಆರೋಗ್ಯಕ್ಕೆ ಬೇಕಾದ ಸಾವಯವ, ದೇಶಿಯ ಉತ್ಪನ್ನಗಳನ್ನ ತಯಾರು ಮಾಡಿ ರಾಜ್ಯದ ಮೂಲೆ ಮೂಲೆಗಳಲ್ಲಿ ಹೆಸರು ಪಡೆದಿದ್ದಾರೆ.

ಗುಂಡಮನತ್ತ ಗ್ರಾಮದ ಚಿತ್ರಣ

ಗ್ರಾಮದಲ್ಲಿರುವ ಹತ್ತಕ್ಕೂ ಹೆಚ್ಚು ನಿರುದ್ಯೋಗಿ, ಅನಕ್ಷರಸ್ಥ ಮಹಿಳೆಯರು ಮಳೆ-ಬೆಳೆಯಿಲ್ಲದೆ ಜೀವನ ನಡೆಸುವುದೇ ಕಷ್ಟಕರವಾಗಿ ಗುಳೆ ಹೋಗುವ ಸ್ಥಿತಿಯಲ್ಲಿದ್ದು, ಈ ಸಂದರ್ಭದಲ್ಲಿ ವಿಭಿನ್ನ ಪ್ರಯತ್ನ ಮಾಡಿ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ರತ್ನಮ್ಮ ನೇತೃತ್ವದ ಮಹಿಳೆಯರು, ದೃಢ ನಿರ್ಧಾರ ಮಾಡಿದ್ದು, ಸಾವಯುವ ಕೃಷಿಯ ಮೂಲಕ ಹಲವು ಬೆಳೆಗಳನ್ನು ಬೆಳೆದು ಆ ಮೂಲಕ ದೇಶಿಯ ತಿಂಡಿ ತಿನ್ನಿಸುಗಳನ್ನು ರಾಜ್ಯಕ್ಕೆ ಪರಿಚಯಿಸುತ್ತಿದ್ದಾರೆ.

ಕೆಲಸದಲ್ಲಿ ನಿರತರಾಗಿರುವ ಮಹಿಳೆಯರು

ಸಾವಯವ ಹಾಗೂ ಸಿದ್ಧ ಆಹಾರಗಳ ತಯಾರಿಕೆ:
ಇಲ್ಲಿ ತಯಾರಾಗುವ ರಾಗಿ ಗಂಜಿ, ಉಪ್ಪಿಟ್ಟು ಖಾದ್ಯ, ಬೆಟ್ಟದ ನಲ್ಲಿಕಾಯಿಯ ಜ್ಯೂಸ್, ಉಪ್ಪಿನಕಾಯಿ, ಮಾವಿನ ಜ್ಯೂಸ್, ಮೊಳಕೆ ಕಾಳು, ಅಕ್ಕಿ ಶಾವಿಗೆ, ಮಾವು ಬೆಟ್ಟದನೆಲ್ಲಿ ಖಾದ್ಯಗಳು, ಸಿರಿ ಧಾನ್ಯಗಳಾದ ಊದುಲು, ನವಣೆ, ಸಾಮೆ, ಹಪ್ಪಳ, ನಿಪ್ಪಟ್ಟು ಸೇರಿದಂತೆ ಹಲವು ಸಿದ್ದ ಆಹಾರಗಳನ್ನು ತಯಾರು ಮಾಡುವ ಜೊತೆಗೆ ಸಾವಯವ ಕೃಷಿಯ ಸಿರಿ ಧಾನ್ಯಗಳ ನಾನಾ ಬಗೆಯ ಉತ್ಪಾನ್ನಗಳನ್ನು ಮಾಡಿ ರಾಜ್ಯದ ಜನತೆಗೆ ಪರಿಚಯಿಸಿದ್ದಾರೆ.

ದೇಶಿಯ ಉತ್ಪನ್ನಗಳ ತಯಾರಿಕೆಯಲ್ಲಿ ಮಹಿಳೆಯರು

ವೇದಿಕ್​ ಸಂಸ್ಥೆ ಕಟ್ಟಿದ ಮಹಿಳೆಯರು:
ಗುಂಡುನತ್ತ ಗ್ರಾಮದ ಮಹಿಳೆ ರತ್ನಮ್ಮ ತಮ್ಮೂರಿನ ಸಮಾನ ಮನಸ್ಕ ಮಹಿಳೆಯರ ಗುಂಪು ಕಟ್ಟಿಕೊಂಡು ಸ್ನೇಹಿತರೊಬ್ಬರು ನೀಡಿದ ಮಾರ್ಗದರ್ಶನದಂತೆ ಸಾವಯುವ ಕೃಷಿ ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ನಿರ್ಧರಿಸಿ ಆರಂಭಿಸಿದ ವೇದಿಕಾ ಸಂಸ್ಥೆ ಇಂದು ರಾಜ್ಯದ ಜನ-ಮನ ಗೆಲುವಲ್ಲಿ ಯಶಸ್ವಿಯಾಗಿದೆ. ರೈತರಿಂದಲೇ ಬೆಳೆಗಳನ್ನು ಬೆಳೆಸಿ ಅವುಗಳ ಮೂಲಕ ತ್ವರಿತ ಉತ್ಪನ್ನಗಳನ್ನು ಸಿದ್ಧಪಡಿಸಿದ್ದು, ರಾಜ್ಯದಾದ್ಯಂತ ಮಾರಾಟ ಮಾಡುವಲ್ಲಿ ಮಹಿಳೆಯರಿಗೆ ವೇದಿಕಾ ಸಂಸ್ಥೆ ಸಹಾಯಕವಾಗಿದೆ.

 

ವೇದಿಕ್ ಸಂಸ್ಥೆಯಲ್ಲಿನ ದವಸ- ಧಾನ್ಯಗಳ ಚಿತ್ರಣ

ಇಲ್ಲಿನ ಉತ್ಪನ್ನಗಳು ಮೈಸೂರು, ಬೆಂಗಳೂರು ಸೇರಿದಂತೆ ಆನ್‌ಲೈನ್‌ಲ್ಲೂ ಸಹ ಮಾರಾಟವಾಗುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಸಹಕಾರ ಜೊತೆಗೆ ಡಿಸಿಸಿ ಬ್ಯಾಂಕ್​ ಸಹಾಯ ಪಡೆದು ತಯಾರಿಕೆಗೆ ಬೇಕಾದ ಮಿಷನ್‌ಗಳನ್ನು ಖರೀದಿಸಿದ್ದಾರೆ. ಇದರ ಜೊತೆಗೆ ಈ ಗ್ರಾಮದ ಮಹಿಳೆಯರ ಪಾಲಿಗೆ ವೇದಿಕ್ ಸಂಸ್ಥೆ ಆಸರೆಯಾಗಿ ಬೆಳೆದು ನಿಂತಿದೆ.

ಸಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆಯರು

ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿನಂತೆ ಈಗ ಹೆಣ್ಣೊಬ್ಬಳು ಸ್ವಾವಲಂಬಿಯಾದರೆ ಇಡೀ ಗ್ರಾಮವೇ ಉದ್ದಾರವಾದಂತೆ ಎನ್ನುವಂತಾಗಿದ್ದು, ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ವೇದಿಕ್ ಸಂಸ್ಥೆ ಕಟ್ಟಿದ ಮಹಿಳೆಯರು ಮಾದರಿಯಾಗಿ ನಿಲ್ಲುತ್ತಾರೆ.

ಪಾಠ ಹೇಳಿಕೊಡುವ ಕೃಷಿ ವಿಶ್ವವಿದ್ಯಾಲಯ ರೈತರ ಪಾಲಿಗೆ ಹೇಗೆ ವರವಾಗಿದೆ ಗೊತ್ತಾ? ತಪ್ಪದೇ ಓದಿ..