ಕೋಲಾರ: ಬೈಕ್ಗಾಗಿ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಂದ 19 ವರ್ಷದ ಯುವಕ!
ಹೊಸ ಬೈಕ್ ಆಸೆಗೆ 19 ವರ್ಷದ ಯುವಕನೋರ್ವ ಪರಿಚಯಸ್ಥ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚೆನ್ನಾಗಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ, ವೈರ್ನಿಂದ ಕಾಲು ಕಟ್ಟಿ ಕೆರೆಗೆ ತಳ್ಳಿ ಭೀಕರವಾಗಿ ಮರ್ಡರ್ ಮಾಡಿದ್ದು, ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಕೋಲಾರ, ಜನವರಿ 08: ಬೈಕ್ ಮೇಲಿನ ಹುಚ್ಚು ಪ್ರೀತಿಗೆ 19 ವರ್ಷದ ಯುವಕನೋರ್ವ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಉದ್ದಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನಿರಾಜು (45) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸ್ನೇಹಿತ ಗಂಗರಾಜುವೇ ಆರೋಪಿ ಎಂಬುದು ಗೊತ್ತಾಗಿದೆ. ನಾಪತ್ತೆಯಾಗಿದ್ದ ಮುನಿರಾಜು ಶವ ಕೆರೆಯೊಂದರಲ್ಲಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಗಿಳಿದ ಪೊಲೀಸರೇ ಕೊಲೆಯ ಕಾರಣ ಕಂಡು ಪೊಲೀಸರೇ ದಂಗಾಗಿದ್ದಾರೆ.
ಉದ್ದಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ತಮ್ಮದೇ ಗ್ರಾಮದ ಬಳಿ ಇರುವ ಹೋಂ ಲಾಜೆಸ್ಟಿಕ್ ಅನ್ನೋ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ಈ ನಡುವೆ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದ ಗಂಗಾರಜು ಎಂಬ ಹುಡುಗನ ಪರಿಚಯ ಈತನಿಗಾಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದು ಆಗಾಗ ಭೇಟಿ ಕೂಡ ಮಾಡುತ್ತಿದ್ದರು. ಹೀಗಿರುವಾಗ ಡಿಸೆಂಬರ್ 31ರಂದು ಮನೆಯಲ್ಲಿದ್ದ ಮುನಿರಾಜುವನ್ನು ಗಂಗರಾಜು ಬಂದು ಕರೆದುಕೊಂಡು ಹೋಗಿದ್ದ. ಆ ನಂತರ ಮುನಿರಾಜು ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಜನವರಿ 2ರಂದು ವೇಮಗಲ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಹೆತ್ತ ಮಗನನ್ನೇ ಕೊಂದ ತಂದೆ; ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು!
ಇದಾಗಿ ಎರಡು ದಿನಗಳ ಬಳಿಕ ಅಂದರೆ ಜ. 4ರಂದು ನರಸಾಪುರ ಕೆರೆಯಲ್ಲಿ ಮುನಿರಾಜು ಶವ ಪತ್ತೆಯಾಗಿದೆ. ಮೃತ ದೇಹದ ಮೇಲೆ ಗಾಯದ ಗುರುತುಗಳು, ಕಾಲಿಗೆ ವೈಯರ್ ಕಟ್ಟಿದ್ದ ಹಿನ್ನೆಲೆ ಅನುಮಾನಗೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಾಂತ್ರಿಕವಾಗಿ ಸಾಕ್ಷಿಗಳನ್ನು ಕಲೆ ಹಾಕಿದಾಗ ಕೊಲೆಯಾಗಿದ್ದ ಮುನಿರಾಜುವಿನ ಬೈಕ್ ಮತ್ತು ಮೊಬೈಲ್ನ ಗಂಗರಾಜು ಬಳಸುತ್ತಿರೋದು ಗೊತ್ತಾಗಿದೆ. ಹೀಗಾಗಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಆರೋಪಿ ಗಂಗರಾಜುಗೆ ಬೈಕ್ ಅಂದರೆ ಹುಚ್ಚು. ಆದರೆ ಬೈಕ್ ಕೊಡಿಸಿಲ್ಲ ಎಂದು ಆತ ಮನೆಯನ್ನೇ ಬಿಟ್ಟು ಬಂದಿದ್ದ. ಕಂಪನಿಯಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದ. ಆದರೂ ಬೈಕ್ ತೆಗೆದುಕೊಳ್ಳಬೇಕೆಂಬ ಅವನ ಆಸೆ ಈಡೇರಿರಲಿಲ್ಲ. ಹೀಗಿರುವಾಗಲೇ ತನಗೆ ಪರಿಚಯವಿದ್ದ ಸೆಕ್ಯೂರಿಟಿ ಗಾರ್ಡ್ ಮುನಿರಾಜು ಹೊಸದಾಗಿ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಖರೀದಿ ಮಾಡಿದ್ದ. ಈ ವಿಚಾರ ಗಂಗರಾಜು ಹೊಟ್ಟೆ ಉರಿಸಿತ್ತು. ಹೇಗಾದರೂ ಮಾಡಿ ಆ ಬೈಕ್ ತಾನು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿ ಡಿಸೆಂಬರ್ 31ರಂದು ಕುಡಿಯಲು ಹೋಗೋಣ ಬಾ ಎಂದು ಮುನಿರಾಜುವನ್ನು ಕರೆದಿದ್ದ. 3 ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದ ತಾಯಿಯ ಹಾಲುತುಪ್ಪ ಕಾರ್ಯ ಮಾಡಿ ಮನೆಗೆ ಬಂದಿದ್ದ ಮುನಿರಾಜು ಕೂಡ ಗಂಗರಾಜು ಜೊತೆ ತೆರಳಿದ್ದ. ಇಬ್ಬರೂ ಬಾರೊಂದರಲ್ಲಿ ಚೆನ್ನಾಗಿ ಮದ್ಯವನ್ನೂ ಸೇವಿಸಿದ್ದರು.
ಬಾರ್ನಿಂದ ಊರಿಗೆ ಹಿಂದುರುಗುವ ವೇಳೆ ಮತ್ತೆ ಕುಡಿಯೋಣ ಎಂದು ಹೇಳಿ ನರಸಾಪುರ ಕೆರೆಯ ಬಳಿ ಮುನಿರಾಜುವನ್ನು ಗಂಗರಾಜು ಕರೆದೊಯ್ದಿದ್ದ. ಅಲ್ಲಿ ಆತನಿಗೆ ಚೆನ್ನಾಗಿ ಕುಡಿಸಿ ಬಳಿಕ ಕಲ್ಲಿನಿಂದ ದಾಳಿ ನಡೆಸಿದ್ದಲ್ಲದೆ, ತಲೆಗೆ ಕಾಲಿನಿಂದ ಒದ್ದಿದ್ದ. ಜೊತೆಗೆ ಆತನ ಬೈಕ್ನಲ್ಲಿದ್ದ ವೈರ್ ತೆಗೆದುಕೊಂಡು ಕಾಲು ಕಟ್ಟಿ ಮುನಿರಾಜುವನ್ನು ಕೆರೆಗೆ ತಳ್ಳಿದ್ದ. ಬಳಿಕ ಬೈಕ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದ ಎನ್ನುವ ಸತ್ಯ ತನಿಖೆ ವೇಳೆ ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:27 pm, Thu, 8 January 26
