
ಕೊಪ್ಪಳ, ಅಕ್ಟೋಬರ್ 28: ಹನುಮ ಜನ್ಮಸ್ಥಳ ಅಂಜನಾದ್ರಿ ದೇಗುಲದ ಆಡಳಿತದ ಅಧಿಕಾರಕ್ಕಾಗಿ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ಮತ್ತು ಕೊಪ್ಪಳ ಜಿಲ್ಲಾಡಳಿತ ಅಧಿಕಾರಗಳ ನಡುವಿನ ಸಂಘರ್ಷ ಮುಂದುವರೆದಿದೆ. ಜಿಲ್ಲಾಡಳಿತ ಅಧಿಕಾರಿಗಳು ದೇಗುಲವನ್ನು ವಶಕ್ಕೆ ಪಡೆಯಲು ಮುಂದಾಗಿದ್ದು, ದೇವಸ್ಥಾನದ 8 ಕಚೇರಿಗಳಿಗೆ ಬಾಬಾ ಹಾಕಿದ್ದ ಬೀಗವನ್ನು ಒಡೆದಿದ್ದಾರೆ. ಇತ್ತ ಜಿಲ್ಲಾಡಳಿತದ ಕ್ರಮಕ್ಕೆ ವಿದ್ಯಾದಾಸ ಬಾಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಸುಪರ್ದಿಗಾಗಿ ಕೊಪ್ಪಳ ಜಿಲ್ಲಾಡಳಿತದಿಂದ ಕಾರ್ಯಾಚರಣೆ ಮಾಡಲಾಗಿದ್ದು, ಎಸಿ, ತಹಶೀಲ್ದಾರ್, DySP ನೇತೃತ್ವದಲ್ಲಿ ಬೆಟ್ಟಕ್ಕೆ ಭೇಟಿ ನೀಡಲಾಗಿದೆ. ಈ ವೇಳೆ ದೇವಸ್ಥಾನದ 8 ಕಚೇರಿಗಳಿಗೆ ಬಾಬಾ ಹಾಕಿದ್ದ ಬೀಗ ಒಡೆಯಲಾಗಿದೆ. ಬೆಟ್ಟದಲ್ಲಿ ಬಾಬಾ ಅಳವಡಿಸಿದ ಟ್ರಸ್ಟ್ನ ಬ್ಯಾನರ್ಗಳು ಕೂಡ ತೆರವು ಮಾಡಲಾಗಿದ್ದು, ಬಾಬಾ ನೇಮಕ ಮಾಡಿದ್ದ ಸಿಬ್ಬಂದಿಯನ್ನ ಹೊರಹಾಕಲಾಗಿದೆ. ದೇವಸ್ಥಾನದಲ್ಲಿ ಜಿಲ್ಲಾಡಳಿತ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಎಸಿ ಸೂಚಿಸಿದ್ದಾರೆ.
ಇನ್ನು ಜಿಲ್ಲಾಡಳಿತದ ಕ್ರಮಕ್ಕೆ ವಿದ್ಯಾದಾಸ ಬಾಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಕೋರ್ಟ್ ಆದೇಶ ತೋರಿಸಿ ಆಮೇಲೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳನ್ನೇ ಅವರು ಪ್ರಶ್ನಿಸಿದ್ದಾರೆ. ಈ ವೇಳೆ ಬಾಬಾ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ವಿವಾದ ಉಂಟಾಗಿತ್ತು. ಈ ಸಂಬಂಧದ ಕಾನೂನು ಹೋರಾಟದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಹಿಂದಿನ ಅರ್ಚಕ ವಿದ್ಯಾದಾಸ್ ಬಾಬಾ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತೀರ್ಪು ನೀಡಿತ್ತು. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ 2018ರ ನೋಟಿಫೈ ಆರ್ಡರ್ ರದ್ದು ಮಾಡಿ ಬಾಬಾಗೆ ಅವಕಾಶ ಕಲ್ಪಿಸಿತ್ತು.
ಇದನ್ನೂ ಓದಿ: ಅಂಜನಾದ್ರಿ ದೇಗುಲ ಪೂಜಾ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು, ಸರ್ಕಾರಕ್ಕೆ ಹಿನ್ನಡೆ
ಈ ಆದೇಶ ಸೆಪ್ಟೆಂಬರ್ 7ರಂದು ಅಧಿಕೃತವಾಗಿ ಜಿಲ್ಲಾಡಳಿತಕ್ಕೂ ತಲುಪಿತ್ತು. ತೀರ್ಪು ಬಳಿಕ ವಕೀಲರು ಹಾಗೂ ಭಕ್ತರೊಂದಿಗೆ ವಿದ್ಯಾದಾಸ್ ಬಾಬಾ ಅಂಜನಾದ್ರಿಗೆ ಆಗಮಿಸಿದ್ದರು. ಅಂಜನಾದ್ರಿ ಮೇಲೆ ಸರ್ಕಾರ ಅಥವಾ ಜಿಲ್ಲಾಡಳಿತಕ್ಕೆ ಹಕ್ಕಿಲ್ಲ. ಅಂಜನಾದ್ರಿ ಪರ್ವತ ಟ್ರಸ್ಟ್ಗೆ ಸೇರಬೇಕು ಎಂಬ ಆದೇಶವಾಗಿದೆ ಎನ್ನುವುದು ವಿದ್ಯಾದಾಸ್ ಬಾಬಾ ಹಾಗೂ ಭಕ್ತರ ವಾದ. ಆದರೆ ಜಿಲ್ಲಾಧಿಕಾರಿಗಳು ಪೂಜೆಗೆ ಮಾತ್ರ ಅವಕಾಶ. ಜೊತೆಗೆ ಅವರಿಗೆ ಒಂದು ರೂಮ್ ಕೊಡಲು ಮಾತ್ರ ಆದೇಶವಾಗಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Wed, 28 October 26