
ಕೊಪ್ಪಳ, ನವೆಂಬರ್ 03: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಆರಂಭವಾಗಿರುವ ಧರಣಿಗೆ ಇದೀಗ ಒಂದು ವರ್ಷ. ಆದರೆ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನ ವಿರೋಧಿಸುವ ಬರದಲ್ಲಿ, ಹೋರಾಟ ಹಾದಿ ತಪ್ಪುತ್ತಿದೆ. ಹೋರಾಟಗಾರರು ಗವಿಶ್ರೀಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ರೀತಿ ಹೋರಾಟದಲ್ಲಿ ಭಾಗವಹಿಸಿದ್ದವರು ಮಾತನಾಡಿರುವುದು ಸದ್ಯ ಗವಿಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗವಿಶ್ರೀಗಳಿಗೆ ಹೋರಾಟಗಾರರು ಕ್ಷಮೆ ಕೇಳಬೇಕು ಎಂದು ಒತ್ತಾಯ ಕೇಳಿಬಂದಿದೆ.
ಅಕ್ಟೋಬರ್ 31ರಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಸಮಿತಿಯ ಜಂಟಿ ಕ್ರಿಯಾ ಸಮಿತಿ ಇತ್ತೀಚೆಗೆ ಕೊಪ್ಪಳ ಬಂದ್‌ಗೆ ಕರೆ ನೀಡಿತ್ತು. ಬಂದ್ ಹಿನ್ನೆಲೆ ಬೃಹತ್ ಬಹಿರಂಗ ಸಮಾವೇಶವನ್ನೂ ಆಯೋಜಿಸಲಾಗಿತ್ತು. ಆದರೆ ಕಾರ್ಖಾನೆ ನಿರ್ಮಾಣ ವಿರೋಧಿ ಹೋರಾಟದ ವೇದಿಕೆಯಲ್ಲಿ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಹಗುರವಾಗಿ ಮಾತಾಡಿದ್ದಾರೆ.
ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು
ಸಮಾವೇಶದಲ್ಲಿ ಭಾಗಿಯಾಗಿದ್ದ, ಸಾಹಿತಿ ಬಸವರಾಜ ಸಬರದ, ಜೇವರ್ಗಿಯ ಸಿದ್ದಬಸವ ಕಬೀರ ಸ್ವಾಮೀಜಿ ಹಾಗೂ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ‘ಬಲ್ಡೋಟಾ ವಿರುದ್ಧದ ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಗಳು ಬೆಂಬಲ ನೀಡಬೇಕು, ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಹೋರಾಟಕ್ಕೆ ಬರದಿದ್ದರೆ ಸ್ವಾಮೀಜಿಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಮಾತುಗಳು ಕೂಡ ಕೇಳಿಬಂದಿದ್ದವು. ಈ ಮಾತುಗಳು ಸದ್ಯ ಗವಿಮಠದ ಭಕ್ತರನ್ನ ಕೆರಳಿಸಿದೆ.
2025ರಲ್ಲಿ ನಡೆದ ಬೃಹತ್ ಹೋರಾಟಕ್ಕೆ ಚಾಲನೆ ನೀಡಿದ್ದು ಗವಿಮಠದ ಅಭಿನವ ಶ್ರೀಗಳು. ಕಾರ್ಖಾನೆ ವಿಸ್ತರಣೆಯನ್ನ ಕೈ ಬಿಡವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದರ ಜವಾಬ್ದಾರಿಯನ್ನ ಕೊಪ್ಪಳದ ಜನಪ್ರತಿನಿಧಿಗಳಿಗೆ ವಹಿಸಿದ್ದರು. ಇದಾದ ಬಳಿ ಎರಡು ಬಾರಿ ದೊಡ್ಡ ಹೋರಾಟ ನಡೆದಾಗ, ಶ್ರಿಗಳು ನೈತಿಕ ಬೆಂಬಲ ನೀಡಿದ್ದರು. ಆದರೆ ಶ್ರೀಗಳ ವಿರುದ್ಧ ಹೋರಾಟದ ವೇದಿಯಲ್ಲಿ ಈ ರೀತಿ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಗವಿಮಠದ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಗವಿಮಠದ ಶ್ರೀಗಳು ಮೊದಲಿಂದಲೂ ಬಲ್ಡೋಟಾ ವಿಸ್ತರಣೆಯನ್ನ ವಿರೋಧಿಸುತ್ತಲೇ ಬಂದವರು. ಹೋರಾಟಕ್ಕೆ ಬೇಕಾದ ವ್ಯವಸ್ಥೆಯನ್ನ ಗವಿಶ್ರೀಗಳು ಇಂದಿಗೂ ನೀಡುತ್ತಾ ಬಂದಿದ್ದಾರೆ. ಆದರೆ ಹೋರಾಟಕ್ಕೆ ಬಂದವರು ಶ್ರೀ ವಿರುದ್ಧ ಮಾತನಾಡಿದ್ದಾರೆ. ಆ ಮೂಲಕ ಹೋರಾಟದ ಹಾದಿ ಶ್ರೀಗಳ ಮಠದ ಕಡೆ ವಾಲುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ಭಕ್ತರು ಆಕ್ರೋಶಗೊಂಡಿದ್ದಾರೆ. ಇತ್ತ ಭಕ್ತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತೊಂದೆಡೆ ಜಂಟಿ ಕ್ರಿಯಾ ಸಮಿತಿ ಮುಖಂಡರು ಅಲರ್ಟ್ ಆಗಿದ್ದಾರೆ. ತುರ್ತು ಸಭೆ ನಡೆಸಿ ಸಮಾವೇಶದಲ್ಲಿ ಭಾಷಣಕಾರರು ಮಾತನಾಡಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಅಥವಾ ಅವರ ಭಕ್ತರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ನಿರಂತರ ಹೋರಾಟದ ಫಲ: ಕೊಪ್ಪಳದಲ್ಲಿ ಮತ್ತೆ 8 ಕಾರ್ಖಾನೆ ಕ್ಲೋಸ್
ಬಲ್ಡೋಟಾ ಕಾರ್ಖಾನೆ ನಿರ್ಮಾಣ ವಿರೋಧಿ ಹೋರಾಟ ಇದೀಗ ಗವಿಮಠದ ಶ್ರೀಗಳ ಕುರಿತ ಹೇಳಿಕೆಗಳಿಂದ ಹೊಸ ವಿವಾದಕ್ಕೆ ಕಾರಣವಾಗಿದೆ. ಹೋರಾಟದ ಉದ್ದೇಶ ಕಾರ್ಖಾನೆ ನಿರ್ಮಾಣ ವಿರೋಧವೋ ಅಥವಾ ಶ್ರೀಗಳನ್ನು ಹೋರಾಟಕ್ಕೆ ಕರೆತರುವುದೋ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ. ಜಂಟಿ ಕ್ರಿಯಾ ಸಮಿತಿ ವಿಷಾದ ವ್ಯಕ್ತಪಡಿಸಿದ್ದರೂ ಭಕ್ತರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.